
ಚಿಕ್ಕ ಪಟ್ಟಣವೊಂದರಲ್ಲಿರುವ ಕುಟುಂಬವೊಂದು ತನ್ನ ಸಂಬಂಧಿಕರ ಶಸ್ತ್ರಚಿಕಿತ್ಸೆಗಾಗಿ ಸಂಪೂರ್ಣ ಹಣವನ್ನು ತಮ್ಮ ಸ್ವಂತ ಜೇಬಿನಿಂದಲೇ ಭರಿಸುತ್ತದೆ. ಆ ಮೊತ್ತದ ಸ್ವಲ್ಪ ಭಾಗವನ್ನು ಸ್ಥಳೀಯ ಫೈನಾನ್ಷಿಯರ್ ಬಳಿ ಸಾಲವಾಗಿ ಪಡೆಯುತ್ತದೆ. ತಿಂಗಳುಗಳ ನಂತರ, ನೆರೆಹೊರೆಯವರೊಬ್ಬರು ಆ ಕುಟುಂಬಕ್ಕೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುವ ಅರ್ಹತೆ ಮೊದಲೇ ಇತ್ತು ಎಂದು ಸರಳವಾಗಿ ತಿಳಿಸುತ್ತಾರೆ. ಆ ಬಗ್ಗೆ ಅವರಿಗೆ ಯಾರೂ ಮುಂಚೆ ತಿಳಿಸಿರಲಿಲ್ಲ.
ಇದು ಅಪರೂಪಕ್ಕೆ ಆಗುವ ತಪ್ಪಲ್ಲ; ಇದು ಬಹುತೇಕ ಸಾಮಾನ್ಯ ಸಂಗತಿಯಾಗಿದೆ.
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದ ಅತಿ ದೊಡ್ಡ ಸರ್ಕಾರದ ಆರೋಗ್ಯ ವಿಮಾ ಕಾರ್ಯಕ್ರಮವಾದ ‘ಪಿಎಂ-ಜೆಎವೈ’ (PM-JAY) ಯೋಜನೆಯಡಿ ನಿಜಕ್ಕೂ ಅರ್ಹರಾಗಿರುವ ಶೇ. 66ರಷ್ಟು ಜನರಿಗೆ ಆ ಯೋಜನೆಯೇ ತಿಳಿದಿಲ್ಲ. ಇದರ ಜೊತೆಗೆ, ದೇಶದಾದ್ಯಂತ ಅರ್ಹರಿರುವ ಒಟ್ಟು ಫಲಾನುಭವಿಗಳ ಪೈಕಿ ಕೇವಲ ಶೇ. 25ರಷ್ಟು ಮಂದಿ ಮಾತ್ರ ಇದರ ಲಾ ಪಡೆಯಲು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿಗೆ ಯಾವುದೇ ಹಣ ತಗಲುವುದಿಲ್ಲವಾದರೂ ಈ ಸ್ಥಿತಿ ಇದೆ.
ಈ ಅಂಕಿಅಂಶಗಳನ್ನು ಒಟ್ಟಾಗಿ ಗಮನಿಸಿದರೆ, ಭಾರತದಲ್ಲಿ ಯಾರೂ ಬಹಿರಂಗವಾಗಿ ಮಾತನಾಡದ ಒಂದು ಕಹಿ ಸತ್ಯ ತಿಳಿಯುತ್ತದೆ: ಕಾಗದಪತ್ರಗಳಲ್ಲಿ ಸ್ಪಷ್ಟವಾಗಿರುವ ಹಕ್ಕುಗಳು ಸಹ, ಯಾರೂ ಅದರ ಬಗ್ಗೆ ತಿಳಿಸಿಕೊಡದ ಕಾರಣದಿಂದಾಗಿ ತಲುಪಬೇಕಾದ ವ್ಯಕ್ತಿಗೆ ತಲುಪದೆ ವಿಫಲಗೊಳ್ಳುತ್ತವೆ.
ಇದನ್ನೂ ಓದಿ: ಅತ್ತಲೂ ಇಲ್ಲ, ಇತ್ತಲೂ ಇಲ್ಲ; ಭಾರತದ ಆರೋಗ್ಯ ರಕ್ಷಣೆಯ ಮಿಸ್ಸಿಂಗ್ ಮಿಡಲ್
2018ರಲ್ಲಿ ಪ್ರಾರಂಭಿಸಲಾದ ‘ಆಯುಷ್ಮಾನ್ ಭಾರತ್’ ಯೋಜನೆಯು, ಜನಗಣತಿಯ ಆಧಾರದ ಮೇಲೆ ಆರ್ಥಿಕವಾಗಿ ದುರ್ಬಲವೆಂದು ಗುರುತಿಸಲ್ಪಟ್ಟ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರೂಪಾಯಿಗಳವರೆಗೆ ಆಸ್ಪತ್ರೆ ವೆಚ್ಚವನ್ನು ಭರಿಸಲು ಉದ್ದೇಶಿಸಿದೆ. ಕಾಗದದ ಮೇಲೆ ಇದು ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದೆ. ಆದರೆ ವಾಸ್ತವದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದಾಗ ಜನರಿಗೆ ಕಾಗದಪತ್ರಗಳಿಗಿಂತ ಮುಖ್ಯವಾಗಿ ಬೇಕಾಗಿರುವುದು ಚಿಕಿತ್ಸೆ; ಆದರೆ ಈ ಯೋಜನೆಯ ಲಾಭ ಪಡೆಯಲು ಜನರು ತಮ್ಮ ಅರ್ಹತೆಯನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಮತ್ತು ಅದನ್ನು ಹೇಗೆ ಬಳಸುವುದು ಎಂಬ ಬಗ್ಗೆ ಜಾಗೃತಿ ಇರಬೇಕಾಗುತ್ತದೆ.
ಈ ಅಂತರವು ಕೇವಲ ಒಂದು ಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಆದಾಯದ ಮಟ್ಟವನ್ನು ಲೆಕ್ಕಿಸದೆ ಸುಮಾರು ಶೇ. 60ರಷ್ಟು ಭಾರತೀಯ ಕುಟುಂಬಗಳು ಯಾವುದೇ ರೀತಿಯ ಸರ್ಕಾರಿ ಅಥವಾ ಖಾಸಗಿ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿಲ್ಲ ಎಂದು ವರದಿ ಮಾಡಿವೆ. ವಿಮಾ ಕಂಪನಿಗಳ ಶಾಖೆಗಳು, ಸರ್ಕಾರದ ಜಾಗೃತಿ ಶಿಬಿರಗಳು ಮತ್ತು ಸ್ಥಳೀಯ ಭಾಷೆಯಲ್ಲಿ ಮೂಲ ಮಾಹಿತಿಗಳು ಸಿಗದೆ ಇರುವ ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಜಾಗೃತಿಯ ಕೊರತೆ ತೀವ್ರವಾಗಿದೆ.
ಸಾಮಾನ್ಯ ನಾಗರಿಕನ ನಿಜವಾದ ಜೀವನದಲ್ಲಿ ಇದರ ಅರ್ಥವೇನು ಎಂದು ಯೋಚಿಸಿ. ಸರ್ಕಾರದ ಕಡತಗಳಲ್ಲಿ ಒಂದು ಯೋಜನೆ ಇರುವುದಕ್ಕೂ, ಕುಟುಂಬದ ಸದಸ್ಯರೊಬ್ಬರನ್ನು ತುರ್ತು ವಿಭಾಗಕ್ಕೆ ಕರೆತರುವ ನಿರ್ಣಾಯಕ ಕ್ಷಣದಲ್ಲಿ ಆ ಯೋಜನೆ ವ್ಯಕ್ತಿಯ ನಿರ್ಧಾರಕ್ಕೆ ಬರುವುದಕ್ಕೂ ತುಂಬಾ ವ್ಯತ್ಯಾಸವಿದೆ. ಈ ಎರಡು ಸಂಗತಿಗಳ ನಡುವಿನ ಅಂತರದಿಂದಾಗಿ, ಕುಟುಂಬದ ಉಳಿತಾಯ, ಜಮೀನು ಅಥವಾ ಮುಂದಿನ ವರ್ಷಗಳ ಆದಾಯವೆಲ್ಲವೂ ಯಾವುದೇ ಕಾರಣವಿಲ್ಲದೆ ಕರಗಿಹೋಗುತ್ತದೆ.
ಈ ಕಹಿ ಸತ್ಯದ ಹಿಂದೆ ಸರಳ ಹಾಗೂ ಪ್ರಾಯೋಗಿಕ ಪರಿಹಾರವೂ ಇದೆ. ಆಯುಷ್ಮಾನ್ ಭಾರತ್ಗೆ ಇರುವ ಅರ್ಹತೆಯನ್ನು ಸರ್ಕಾರಿ ವೆಬ್ಸೈಟ್, ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (CSC) ಅಥವಾ ಆಸ್ಪತ್ರೆಯ ಹೆಲ್ಪ್ ಡೆಸ್ಕ್ ಮೂಲಕ ಮೂಲ ಗುರುತಿನ ಚೀಟಿಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಪರಿಶೀಲಿಸಬಹುದು. ಕುಟುಂಬಕ್ಕೆ ಇದರ ಅವಶ್ಯಕತೆ ಇದೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಇದನ್ನು ಪರಿಶೀಲಿಸಲು ಯಾವುದೇ ಹಣ ಖರ್ಚಾಗುವುದಿಲ್ಲ.
ಇದನ್ನೂ ಓದಿ: ಭಾರತದಲ್ಲಿ ಒಂದು ಕುಟುಂಬಕ್ಕೆ ಒಂದು ಕಾಯಿಲೆ ಎಷ್ಟು ಬೆಲೆ ತೆರಬೇಕಾಗುತ್ತೆ? ಇಲ್ಲಿದೆ ವಾಸ್ತವ ಪರಿಸ್ಥಿತಿ
ಯೋಜನೆಯು ಜನರನ್ನು ತಲುಪಲು ಕೇವಲ ವೆಬ್ಸೈಟ್ ಸಾಲದು; ಬದಲಿಗೆ ಸರಳವಾದ ಸ್ಥಳೀಯ ಭಾಷೆಯ ಮಾಹಿತಿ ಮತ್ತು ವಿಶ್ವಾಸಾರ್ಹ ಜನರ ಮೂಲಕ ನಿರಂತರ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಆದರೆ ಯಾವುದೇ ಬಿಕ್ಕಟ್ಟು ಎದುರಾಗುವ ಮುನ್ನ, ಪ್ರತಿಯೊಂದು ಕುಟುಂಬವು ತನ್ನ ಅರ್ಹತೆಯನ್ನು ತಾವೇ ಮುಂಚಿತವಾಗಿ ಪರಿಶೀಲಿಸಿಕೊಳ್ಳುವುದು ಪ್ರಸ್ತುತ ನಾಗರಿಕರು ತಾವಾಗಿಯೇ ಮಾಡಬಹುದಾದ ಪ್ರಮುಖ ಹೆಜ್ಜೆಯಾಗಿದೆ.
ಮುಂದಿನ ಬಾರಿ ಯಾವುದೇ ಕುಟುಂಬವು ಆಸ್ಪತ್ರೆ ಬಿಲ್ ಗಾಗಿ ಜಮೀನು ಮಾರಾಟ ಮಾಡುವುದನ್ನು ಅಥವಾ ಸಾಲ ಮಾಡುವುದನ್ನು ನೀವು ಕೇಳಿದಾಗ, ಅವರಿಗೆ ಈ ಸೌಲಭ್ಯಗಳ ಬಗ್ಗೆ ಮೊದಲೇ ತಿಳಿದಿತ್ತೇ ಎಂದು ಒಮ್ಮೆ ಸಮಾಧಾನದಿಂದ ಪ್ರಶ್ನಿಸಿ ನೋಡಿ.
(ಆಧಾರಗಳು: ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಭಾರತದಲ್ಲಿ ಆರೋಗ್ಯ ವಿಮಾ ಜಾಗೃತಿ ಸಮೀಕ್ಷೆ; ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ, ಅಧಿಕೃತ ಅರ್ಹತೆ ಮತ್ತು ನೋಂದಣಿ ದತ್ತಾಂಶ.)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
