
ಅನಾರೋಗ್ಯಕರ ಹಲ್ಲುಗಳು (teeth) ಮತ್ತು ಒಸಡುಗಳು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೌದು ಇದು ಬಾಯಿಯಿಂದ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಲು ಕಾರಣವಾಗಬಹುದು. ಇದಲ್ಲದೆ, ಬಾಯಿಯ ದುರ್ವಾಸನೆಯು ಇತರರ ಮುಂದೆ ಮುಜುಗರವನ್ನುಂಟುಮಾಡಬಹುದು. ಹಾಗಾಗಿ ಬಾಯಿಯ ನೈರ್ಮಲ್ಯ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನಾವೆಲ್ಲರೂ ಪ್ರತಿನಿತ್ಯ ಹಲ್ಲುಜ್ಜುತ್ತೇವೆ. ಬ್ರಷ್ ಮಾಡುವಾಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಬೇರೆ ಟೂತ್ಪೇಸ್ಟ್ಗಳನ್ನು ಬಳಕೆ ಮಾಡುತ್ತೇವೆ. ಇಂತಹ ಪೇಸ್ಟ್ಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುತ್ತವೆ. ಅಲ್ಲದೆ ಇವುಗಳು ಯಾವುದೇ ಉತ್ತಮ ಫಲಿತಾಂಶ ಕೂಡ ನೀಡೋದಿಲ್ಲ. ಹೀಗಿರುವಾಗ ನೀವು ಬೇವಿನ ಎಲೆಯನ್ನು ಉಪಯೋಗಿಸಿಕೊಂಡು ನೈಸರ್ಗಿಕ ಟೂತ್ಪೇಸ್ಟ್ ತಯಾರಿಸಬಹುದು. ಅದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.
ಮನೆಯಲ್ಲಿಯೇ ತಯಾರಿಸಬಹುದು ನೈಸರ್ಗಿಕ ಟೂತ್ಪೇಸ್ಟ್:
ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಟೂತ್ಪೇಸ್ಟ್ ಇದು ಬಾಯಿಯ ದುರ್ವಾಸನೆಯನ್ನು ನಿವಾರಿಸುವುದಲ್ಲದೆ ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಟೂತ್ಪೇಸ್ಟ್ ತಯಾರಿಸಲು ಬೇಕಾಗುವ ಪದಾರ್ಥಗಳು:
- ಒಣಗಿದ ಬೇವಿನ ಎಲೆಗಳು – 1/2 ಕಪ್
- ಲವಂಗ – 10-12 ತುಂಡುಗಳು
- ಅರಿಶಿನ ಪುಡಿ ಅಥವಾ ಅರಶಿನ ಕೊಂಬು – 1 ಟೀಸ್ಪೂನ್
- ಪಟಿಕ – 1 ಟೀಸ್ಪೂನ್
- ತ್ರಿಫಲ ಪುಡಿ – 2 ಚಮಚ
- ಕಲ್ಲು ಉಪ್ಪು – 1 ಟೀಸ್ಪೂನ್
- ಎಳ್ಳೆಣ್ಣೆ – 2 ರಿಂದ 3 ಹನಿಗಳು
ಟೂತ್ಪೇಸ್ಟ್ ತಯಾರಿಸುವ ವಿಧಾನ:
ನೈಸರ್ಗಿಕ ಟೂತ್ಪೇಸ್ಟ್ ತಯಾರಿಸಲು, ಮೊದಲು ಒಣಗಿದ ಬೇವಿನ ಎಲೆಗಳು, ಲವಂಗ, ಅರಶಿನ ಕೊಂಬು, ಪಟಿಕ, ತ್ರಿಫಲ ಪುಡಿ, ಉಪ್ಪು ಇವೆಲ್ಲವನ್ನೂ ನುಣ್ಣಗೆ ಪುಡಿ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಿ ಮತ್ತು ಹಲ್ಲುಜ್ಜುವ ಮುನ್ನ ಸ್ವಲ್ಪ ಈ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಳ್ಳೆಣ್ಣೆಯನ್ನು ಸೇರಿಸಿ ಟೇಸ್ಟ್ ತಯಾರಿಸಿಕೊಂಡು ಅದರಲ್ಲಿ ಹಲ್ಲುಜ್ಜಿ.
ಇದನ್ನೂ ಓದಿ: ಒಂದು ತಿಂಗಳು ಸಕ್ಕರೆ ಸೇವಿಸುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ ಗೊತ್ತಾ?
ನ್ಯಾಚುರಲ್ ಟೂತ್ಪೇಸ್ಟ್ನ ಪ್ರಯೋಜನಗಳೇನು?
ಈ ಟೂತ್ಪೇಸ್ಟ್ನಲ್ಲಿ ಲವಂಗವಿದ್ದು, ಇದು ಹಲ್ಲಿನ ದಂತಕವಚವನ್ನು ಹಾನಿಯಿಂದ ರಕ್ಷಿಸಲು, ಹಲ್ಲು ನೋವನ್ನು ನಿವಾರಿಸಲು ಮತ್ತು ಜುಮ್ಮೆನಿಸುವಿಕೆಯನ್ನು ನಿವಾರಿಸುತ್ತದೆ. ಇನ್ನೂ ಪಟಿಕ ಹಲ್ಲುಗಳಲ್ಲಿ ಸಂಗ್ರಹವಾದ ಪ್ಲೇಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮ್ಮ ಹಲ್ಲುಗಳು ಮತ್ತು ಒಸಡುಗಳನ್ನು ಆರೋಗ್ಯವಾಗಿಡುವುದಲ್ಲದೆ ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಈ ನೈಸರ್ಗಿಕ ಟೂತ್ಪೇಸ್ಟ್ನಲ್ಲಿ ಬಳಸಲಾದ ಅರಿಶಿನವು ಒಸಡುಗಳ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ತ್ರಿಫಲವು ಒಸಡುಗಳಲ್ಲಿ ರಕ್ತಸ್ರಾವ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಪ್ಲೇಕ್ ನಿರ್ಮಾಣವನ್ನು ತಡೆಯುತ್ತದೆ. ಒಟ್ಟಾರೆಯಾಗಿ ಈ ನೈಸರ್ಗಿಕ ಟೂತ್ಪೇಸ್ಟ್ ನಿಮ್ಮ ಹಲ್ಲು ಮತ್ತು ಒಸಡುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Lifestyle
