Hashtagintro

‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ

‘ಸೈಬರ್ ಭಯೋತ್ಪಾದನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯ’; ಪ್ರಧಾನಿ ಮೋದಿ ಕಳವಳ

ಭುವನೇಶ್ವರ, ಅಕ್ಟೋಬರ್ 25: “ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಸೈಬರ್ ಭಯೋತ್ಪಾದಕರು ಹಾಗೂ ಸೈಬರ್ ದರೋಡೆಕೋರರಿಂದ ರಕ್ಷಿಸುವುದು ಇಂದಿನ ಕಾಲದ ಅತ್ಯಂತ ತುರ್ತು ಅಗತ್ಯವಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 169 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಡೇಟಾ ಸೆಂಟರ್ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಇಂದಿನ ಆಧುನಿಕ ಯುಗದಲ್ಲಿ ಯುದ್ಧಗಳು ಕೇವಲ ಗಡಿಭಾಗದಲ್ಲಿ ಶಸ್ತ್ರಾಸ್ತ್ರಗಳ ಮೂಲಕ ನಡೆಯುತ್ತಿಲ್ಲ. ಬಲಿಷ್ಠ ದೇಶವನ್ನು ದುರ್ಬಲಗೊಳಿಸಲು ಅದರ ಆರ್ಥಿಕತೆ ಮತ್ತು ಬ್ಯಾಂಕಿಂಗ್ ಜಾಲವನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಹಳೆಯ ತರಬೇತಿ ವಿಧಾನಗಳು ಹಾಗೂ ಉಪಕರಣಗಳಿಂದ ಹೊಸ ಮಾದರಿಯ ಸೈಬರ್ ಬೆದರಿಕೆಗಳನ್ನು ಎದುರಿಸಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುಧಾರಿತ ಸೈಬರ್ ಸವಾಲುಗಳನ್ನು ತಡೆಯಲು ಬಲವಾದ ಮಾನವಸಂಪನ್ಮೂಲ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಮೋದಿ ಅಪ್ಪನೂ ಅಧಿಕಾರದಿಂದ ಇಳಿಯುತ್ತಾರೆ’ ಎಂಬ ಖರ್ಗೆ ಹೇಳಿಕೆಗೆ ಆಕ್ರೋಶ; ಕಾಂಗ್ರೆಸ್ ಮಾಫಿಯಾ ಗ್ಯಾಂಗ್ ಎಂದ ಬಿಜೆಪಿ

ಬ್ಯಾಂಕಿಂಗ್ ವ್ಯವಸ್ಥೆಯ ಸಬಲೀಕರಣ:

“ಕಳೆದ ದಶಕದಲ್ಲಿ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದ ಕೋಟಿಗಟ್ಟಲೆ ಬಡವರಿಗೆ ಜನ್ ಧನ್ ಖಾತೆಗಳ ಮೂಲಕ ತಲುಪಿಸಲಾಗಿದೆ. ಮುಂದಿನ ದಶಕವು ಭಾರತದ ಬ್ಯಾಂಕಿಂಗ್ ಕ್ಷೇತ್ರವನ್ನು ಅತ್ಯಂತ ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಸನೀಯಗೊಳಿಸುವುದಕ್ಕೆ ಮೀಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಕಾಂಗ್ರೆಸ್ ಆಡಳಿತದಲ್ಲಿ ಶ್ರೀಮಂತರಿಗೆ ಮತ್ತು ಪ್ರಭಾವಿಗಳಿಗೆ ಒಂದೇ ಫೋನ್ ಕಾಲ್‌ನಲ್ಲಿ ಸಾವಿರಾರು ಕೋಟಿ ರೂ. ಸಾಲ ಸಿಗುತ್ತಿತ್ತು. ಈ ದುರಾಡಳಿತದಿಂದಾಗಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿತದ ಅಂಚಿಗೆ ತಲುಪಿತ್ತು. ಹಿಂದೊಬ್ಬರು ಪ್ರಧಾನಿ ದೆಹಲಿಯಿಂದ ಕಳುಹಿಸುವ 1 ರೂ.ನಲ್ಲಿ ಬರಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು. ಆದರೆ ಇಂದು ಆಡಳಿತ ಬದಲಾಗಿದ್ದು, ಸರ್ಕಾರ ನೀಡುವ ಪೂರ್ತಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಸುಮಾರು 60 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’; ವೇದಿಕೆಯಲ್ಲೇ ರೊಚ್ಚಿಗೆದ್ದ ಮಲ್ಲಿಕಾರ್ಜುನ ಖರ್ಗೆ

ಭುವನೇಶ್ವರದ ಜಟಣಿಯಲ್ಲಿ 18.55 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಡೇಟಾ ಸೆಂಟರ್, ನೈಸರ್ಗಿಕ ವಿಕೋಪಗಳಿಂದ ಸುಕ್ಷೇಮವಾಗಿರುವ ಭೌಗೋಳಿಕ ವಲಯದಲ್ಲಿದ್ದು, ದೇಶದ ನಿರ್ಣಾಯಕ ಹಣಕಾಸು ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸಲಿದೆ. ಇದರ ಜೊತೆಗೆ ಉದ್ಘಾಟನೆಗೊಂಡ ಸೈಬರ್ ಭದ್ರತಾ ತರಬೇತಿ ಸಂಸ್ಥೆಯು ದೇಶದ ಹಣಕಾಸು ಕ್ಷೇತ್ರದಲ್ಲಿ ಸೈಬರ್ ಬೆದರಿಕೆಗಳನ್ನು ಗುರುತಿಸಿ ತಡೆಯುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ವಿಶೇಷ ತರಬೇತಿ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language