Hashtagintro

‘ನನ್ನ ದಾಖಲೆ ಮುರಿಯಲು ಇನ್ನೂ ಆಗಿಲ್ಲ ಅಲ್ವಾ?’; ಅಭಿಷೇಕ್‌ಗೆ ಯುವರಾಜ್ ಟಾಂಗ್!

‘ನನ್ನ ದಾಖಲೆ ಮುರಿಯಲು ಇನ್ನೂ ಆಗಿಲ್ಲ ಅಲ್ವಾ?’; ಅಭಿಷೇಕ್‌ಗೆ ಯುವರಾಜ್ ಟಾಂಗ್!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಟೀಂ ಇಂಡಿಯಾದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಮಾಷೆಯಾಗಿ ಸವಾಲು ಹಾಕಿದ್ದಾರೆ. ತಮ್ಮ ಶಿಷ್ಯನ ಅದ್ಭುತ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಯುವರಾಜ್, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸುವ ತಮ್ಮ ದಾಖಲೆಯನ್ನು ಮುರಿಯಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ ಎಂದು ಕಾಲೆಳೆದಿದ್ದಾರೆ.

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದರು. ಇನ್ನು 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 199 ರನ್‌ಗಳ ಗುರಿಯನ್ನು ಭಾರತ ಕೇವಲ 13.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿತು.

ನನ್ನ ದಾಖಲೆ ಮುರಿಯಲು ಇನ್ನೂ ಆಗಿಲ್ಲ ಅಲ್ವಾ?

ಅಭಿಷೇಕ್ ಶರ್ಮಾ ಅವರ ಆರಂಭಿಕ ದಿನಗಳಲ್ಲಿ ಮಾರ್ಗದರ್ಶನ ನೀಡಿದ್ದ ಯುವರಾಜ್ ಸಿಂಗ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭಿಷೇಕ್ ಮತ್ತು ವೈಭವ್ ಸೂರ್ಯವಂಶಿ ಅವರ ಫೋಟೋ ಹಂಚಿಕೊಂಡಿದ್ದಾರೆ. ಇದೇ ವೇಳೆ ಅಭಿಷೇಕ್ ಅವರನ್ನು ತಮಾಷೆಯಾಗಿ ಕೆಣಕಿದ್ದಾರೆ. ‘ನೀನು ಇನ್ನೂ 12 ಎಸೆತಗಳಲ್ಲಿ 50 ರನ್ ಗಳಿಸಲು ಸಾಧ್ಯವಾಗಿಲ್ಲ ಅಲ್ವಾ, ಅಭಿಷೇಕ್ ಶರ್ಮಾ! ಇಬ್ಬರು ಎಡಗೈ ಬ್ಯಾಟರ್‌ಗಳು ತಮ್ಮ ಮನೆಯಂಗಳದಲ್ಲೇ ಬ್ಯಾಟಿಂಗ್ ಮಾಡುತ್ತಿರುವಂತಿದೆ!’ ಎಂದು ಯುವರಾಜ್ ಸಿಂಗ್ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ. 2007ರ ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಯುವರಾಜ್, ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದ್ದರು.

ಇದಕ್ಕೆ ಪ್ರತಿಯಾಗಿ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದಕ್ಕೂ ಮೊದಲು 2026ರ ಟಿ20 ವಿಶ್ವಕಪ್‌ನಲ್ಲಿ ಗುವಾಹಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅಭಿಷೇಕ್ ಶರ್ಮಾ ತಮ್ಮ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಶತಕವನ್ನು ಕೇವಲ 35 ಎಸೆತಗಳಲ್ಲಿ ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳು ಸೇರಿದ್ದವು. ಈ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ಸುಲಭ ಗೆಲುವಿನ ಹಾದಿ ತೋರಿಸಿತು.

198 ರನ್‌ಗಳ ಗುರಿ 14 ಓವರ್‌ಗಳಲ್ಲಿ ಚೇಸ್; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ! ಭಾರತಕ್ಕೆ ಸರಣಿ

ಪಂದ್ಯದ ಬಳಿಕ ಯುವರಾಜ್ ಸಿಂಗ್, ಅಭಿಷೇಕ್ ಅವರ ಇನ್ನಿಂಗ್ಸ್‌ಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ವೈಭವ್ ಸೂರ್ಯವಂಶಿ ಅವರ ಆಟವನ್ನೂ ಶ್ಲಾಘಿಸಿದರು. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಆಡಿದ ಸಂಜು ಸ್ಯಾಮ್ಸನ್ ಅವರ ತಂಡದ ಪರವಾದ ಕೊಡುಗೆ ಹಾಗೂ ಭಾರತದ ಬೌಲರ್‌ಗಳ ಪ್ರದರ್ಶನಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.

ಚೆನ್ನಾಗಿ ಆಡಿದೆ, ಅಭಿಷೇಕ್; ಯುವಿ

‘ನಾನು ಕೂಡ 30 ಅಥವಾ 34 ಎಸೆತಗಳಲ್ಲಿ 100 ರನ್ ಗಳಿಸಲು ಸಾಧ್ಯವಿಲ್ಲ. ಚೆನ್ನಾಗಿ ಆಡಿದೆ, ಅಭಿಷೇಕ್! ಅದ್ಭುತ ಇನ್ನಿಂಗ್ಸ್. ಈ ಬಾರಿ ಸಿಂಗಲ್‌ಗಳನ್ನೂ ತೆಗೆದುಕೊಂಡಿದ್ದೀಯಾ, ಒಳ್ಳೆಯದು. ಮತ್ತೊಂದು ತುದಿಯಲ್ಲಿ ವೈಭವ್ ಸೂರ್ಯವಂಶಿಯ ಆಟವೂ ಅದ್ಭುತವಾಗಿತ್ತು. ಇಬ್ಬರೂ ಸೇರಿ ಎದುರಾಳಿಗಳ ಮೇಲೆ ಸವಾರಿ ಮಾಡಿದ್ದೀರಿ. ಮೂರನೇ ಕ್ರಮಾಂಕದಲ್ಲಿ ಸಂಪೂರ್ಣ ತಂಡದ ಆಟಗಾರನಾಗಿ ಆಡಿದ ಸಂಜು ಸ್ಯಾಮ್ಸನ್‌ಗೆ ಅಭಿನಂದನೆಗಳು. 200 ರನ್‌ಗಳ ಗಡಿ ದಾಟದಂತೆ ತಡೆದ ನಮ್ಮ ಬೌಲರ್‌ಗಳಿಗೂ ಮೆಚ್ಚುಗೆ. ಅದ್ಭುತ ಸರಣಿ ಗೆಲುವು. ಟೀಂ ಇಂಡಿಯಾಗೆ ಅಭಿನಂದನೆಗಳು’ ಎಂದು ಬರೆದುಕೊಂಡದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language