
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ ಮುಂಬರುವ ಜನಗಣತಿ ಕಾರ್ಯಕ್ಕಾಗಿ ಶಾಲಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಜನಗಣತಿ ಇಲಾಖೆ ಕೋರಿದ್ದ ಪ್ರಸ್ತಾವನೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆ ಮಾಡಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಕೆಎಸ್ಇಎಬಿ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿಯಲ್ಲೇನಿದೆ?
ಅಕ್ಟೋಬರ್ 22 ರಂದು ಜನಗಣತಿ ಇಲಾಖೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆದು, ಕರ್ನಾಟಕದಲ್ಲಿ ಜನ ಗಣತಿ ಕಾರ್ಯಕ್ಕಾಗಿ ಶಿಕ್ಷಕರನ್ನು ನಿಯೋಜಿಸಬೇಕಿರುವ ಹಿನ್ನೆಲೆಯಲ್ಲಿ, ದ್ವಿತೀಯ ಪಿಯುಸಿ ಪರೀಕ್ಷೆಗಳ ಆರಂಭವನ್ನು ಮಾರ್ಚ್ 6 ಕ್ಕೆ ಮುಂದೂಡುವಂತೆ ಕೋರಿತ್ತು. ಆದರೆ ಕೆಎಸ್ಇಎಬಿ ಪ್ರಕಟಿಸಿರುವ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪೆಬ್ರವರಿ 27 ರಂದೇ ಪರೀಕ್ಷೆಗಳು ಆರಂಭವಾಗಬೇಕಿದೆ.
ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ರಾಜ್ಯಾದ್ಯಂತ 1.5 ಲಕ್ಷಕ್ಕೂ ಅಧಿಕ ಎನ್ಯುಮರೇಟರ್ಗಳು ಮತ್ತು ಮೇಲ್ವಿಚಾರಕರ ಅಗತ್ಯವಿದೆ. ಈ ಸಿಬ್ಬಂದಿಯನ್ನು ಹೆಚ್ಚಾಗಿ ಶಿಕ್ಷಣ ಇಲಾಖೆಯಿಂದಲೇ ನಿಯೋಜಿಸಲು ಉದ್ದೇಶಿಸಲಾಗಿದೆ. ಆದರೆ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸಿದರೆ ಎಸ್ಎಸ್ಎಲ್ಸಿ ಪರೀಕ್ಷೆಗಳು, ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಸಿಇಟಿ (CET) ಸೇರಿದಂತೆ ಇಡೀ ಶೈಕ್ಷಣಿಕ ಕ್ಯಾಲೆಂಡರ್ ಅಸ್ತವ್ಯಸ್ತಗೊಳ್ಳಲಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಯೋಗಕ್ಷೇಮ, ಒತ್ತಡರಹಿತ ಜೀವನವೇ ನಮ್ಮ ಪ್ರಥಮ ಆದ್ಯತೆ ಎಂದ ಇಲಾಖೆ
ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಒತ್ತಡರಹಿತ ಜೀವನವೇ ನಮ್ಮ ಪ್ರಥಮ ಆದ್ಯತೆಯಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಪೂರ್ವಭಾವಿ ಪರೀಕ್ಷೆಗಳು ಹಾಗೂ ವಿಶೇಷ ತರಗತಿಗಳು ನಡೆಯುವುದರಿಂದ, ಈ ಸಂದರ್ಭದಲ್ಲಿ ಶಿಕ್ಷಕರನ್ನು ಜನಗಣತಿ ಕೆಲಸಕ್ಕೆ ಕಳುಹಿಸುವುದರಿಂದ ವಿದ್ಯಾರ್ಥಿಗಳ ಸಾಧನೆ ಕುಂಠಿತಗೊಳ್ಳಲಿದೆ ಎಂಬ ಕಳವಳ ವ್ಯಕ್ತವಾಗಿದೆ. ಈಗಾಗಲೇ ಎಸ್ಐಆರ್ (SIR) ಕೆಲಸಗಳಿಗಾಗಿ ಶಿಕ್ಷಕರು ದೀರ್ಘಕಾಲ ತೆರಳಿದ್ದರಿಂದ ಬೋಧನೆಗೆ ಹಿನ್ನಡೆಯಾಗಿದ್ದು, ಈಗ ಮತ್ತೆ ಜನಗಣತಿಗಾಗಿ ಶಿಕ್ಷಕರನ್ನು ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Education
