
ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿ ಈಗಾಗಲೇ ಕೆಲ ದಿನಗಳಾಗಿದೆ. ಸಿನಿಮಾದ ಮುಂಗಡ ಬುಕಿಂಗ್ ನಿಧಾನವಾಗಿ ಸಾಗುತ್ತಿತ್ತು. ಆದರೆ ನಮಿತ್ ಮಲ್ಹೋತ್ರಾ ಮಾಡಿದ ಯೋಜನೆಯಿಂದಾಗಿ ಅಚಾನಕ್ಕಾಗಿ ಟಿಕೆಟ್ ಬುಕಿಂಗ್ನಲ್ಲಿ ಭಾರಿ ಏರಿಕೆ ಕಂಡಿದೆ.
‘ರಾಮಾಯಣ’ ಸಿನಿಮಾ, ಭಾರತದಿಂದ ವಿಶ್ವಕ್ಕೆ ನೀಡುತ್ತಿರುವ ಕೊಡುಗೆ’ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದರು. ಅದರಂತೆ ವಿದೇಶಗಳಲ್ಲಿ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡಲಾಗಿತ್ತು. ಅಮೆರಿಕ ಸೇರಿದಂತೆ ಇನ್ನೂ ಕೆಲ ದೇಶಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿ ಕೆಲ ದಿನಗಳಾಗಿದ್ದವು. ಅಮೆರಿಕದಲ್ಲಿ ಸಿನಿಮಾದ ಬುಕಿಂಗ್ ಸಾಧಾರಣವಾಗಿತ್ತು. ಆದರೆ ಇತ್ತೀಚೆಗಷ್ಟೆ ಲಾಸ್ ಏಂಜಲ್ಸ್ನ ಅಕಾಡೆಮಿ ಮ್ಯೂಸಿಯಮ್ನಲ್ಲಿ ‘ರಾಮಾಯಣ’ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.
ಈ ವಿಶೇಷ ಪ್ರದರ್ಶನಕ್ಕೆ ಅಮೆರಿಕದ ಬಲು ಜನಪ್ರಿಯ ಕಂಟೆಂಟ್ ಕ್ರಿಯೇಟರ್ಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಕೆಲವು ಕಲಾವಿದರು, ತಂತ್ರಜ್ಞರು ಸಹ ಈ ಪ್ರೀಮಿಯರ್ ಶೋನಲ್ಲಿ ಭಾಗಿ ಆಗಿ ಕಂಟೆಂಟ್ ಕ್ರಿಯೇಟರ್ಗಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅಂದು ಸಿನಿಮಾ ನೋಡಿದ ಹಲವರು ‘ರಾಮಾಯಣ’ ಸಿನಿಮಾದ ಗುಣಮಟ್ಟವನ್ನು ಕೊಂಡಾಡಿದ ಜೊತೆಗೆ ಸಿನಿಮಾ ಅನ್ನು ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾಕ್ಕೆ ಹೋಲಿಕೆ ಮಾಡಿದ್ದರು. ಆ ಪ್ರೀಮಿಯರ್ ಶೋ ಬೆನ್ನಲ್ಲೆ ಅಮೆರಿಕದಲ್ಲಿ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ 27% ಹೆಚ್ಚಾಗಿದೆ.
ಇದನ್ನೂ ಓದಿ:ಯಶ್ ಅವರನ್ನು ‘ಬಾಸ್’ ಎಂದ ರಣ್ಬೀರ್ ಕಪೂರ್: ವಿಡಿಯೋ ನೋಡಿ
ಅದು ಮಾತ್ರವೇ ಅಲ್ಲದೆ, ಅಮೆರಿಕದಲ್ಲಿ ‘ರಾಮಾಯಣ’ ಸಿನಿಮಾದ ಟಿಕೆಟ್ ದರವನ್ನು ಸಹ ಬೇಕೆಂದೇ ಕಡಿಮೆ ಇರಿಸಿದ್ದಾರೆ ನಿರ್ಮಾಪಕ. ಸಿನಿಮಾದ ಟಿಕೆಟ್ ಬುಕಿಂಗ್ ಹೆಚ್ಚಾಗಲು ಇದೂ ಸಹ ಒಂದು ಪ್ರಮುಖ ಕಾರಣ ಆಗಿದೆ. ನಿನ್ನೆಯಷ್ಟೆ (ಅಕ್ಟೋಬರ್ 30) ಅಮೆರಿಕನಲ್ಲಿ ತೆಲುಗಿನ ‘ಆದರ್ಶ ಕುಟುಂಬಂ 47’ ಸಿನಿಮಾ ರಿಲೀಸ್ ಆಗಿದೆ. ಆದರೆ ಆ ಸಿನಿಮಾದ ಟಿಕೆಟ್ ದರಕ್ಕಿಂತಲೂ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ದ ಟಿಕೆಟ್ ದರ ಕಡಿಮೆ ಇದೆಯಂತೆ. ಭಾರತೀಯ ಪ್ರೇಕ್ಷಕರು ವಿದೇಶಗಳಲ್ಲಿ ‘ರಾಮಾಯಣ’ ನೋಡಲು ಉತ್ಸುಕತೆ ಪ್ರದರ್ಶಿಸುತ್ತಿರುವುದಕ್ಕೆ ಇದೂ ಒಂದು ಕಾರಣವೇ ಆಗಿದೆ. ‘ರಾಮಾಯಣ’ ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ಹಲವಾರು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
