Hashtagintro

‘ಸೂರ್ಯ’ ಚಿತ್ರದ ಟೀಸರ್ ವಿರುದ್ಧ ವೈದ್ಯರ ಆಕ್ರೋಶ, ದೆಹಲಿ ಹೈಕೋರ್ಟ್‌ನಿಂದ ಸಿಬಿಎಫ್‌ಸಿಗೆ ನೋಟಿಸ್

‘ಸೂರ್ಯ’ ಚಿತ್ರದ ಟೀಸರ್ ವಿರುದ್ಧ ವೈದ್ಯರ ಆಕ್ರೋಶ, ದೆಹಲಿ ಹೈಕೋರ್ಟ್‌ನಿಂದ ಸಿಬಿಎಫ್‌ಸಿಗೆ ನೋಟಿಸ್

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಮುಂಬರುವ ಬಹುನಿರೀಕ್ಷಿತ ‘ಸೂರ್ಯ: ಅಂತ್ ಸೆ ಆರಂಭ್ ತಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ತೀವ್ರ ವಿರೋಧ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಟೀಸರ್‌ನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರನ್ನು ಅತ್ಯಂತ ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಮತ್ತು ಇದು ಆರೋಗ್ಯ ಕಾರ್ಯಕರ್ತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಿ ವೈದ್ಯರ ಗುಂಪೊಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯ ವಿಚಾರಣೆ ನಡೆಸಿದ ಪೀಠವು ಕೇಂದ್ರ ಸರ್ಕಾರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಮತ್ತು ಚಿತ್ರದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ಕಾಯ್ದಿರಿಸಲಾಗಿದೆ.

ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರಿದ್ದ ಪೀಠವು ಸಿಬಿಎಫ್‌ಸಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ನಿರ್ಮಾಣ ಸಂಸ್ಥೆ ಎಂ.ಎಂ ಮೂವೀಸ್ ಹಾಗೂ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ನೋಟಿಸ್ ರವಾನಿಸಿದೆ. ವಿಚಾರಣೆ ವೇಳೆ ವೈದ್ಯರ ಪರವಾಗಿ ವಾದ ಮಂಡಿಸಿದ ವಕೀಲ ವರುಣ್ ಸಿಂಗ್, ಆನ್‌ಲೈನ್‌ನಲ್ಲಿ ಟೀಸರ್ ಪ್ರಸಾರ ಮಾಡುವುದನ್ನು ತಕ್ಷಣವೇ ತಡೆಯಬೇಕೆಂದು ಕೋರಿದರು. ಆದರೆ, ನ್ಯಾಯಾಲಯವು ಯಾವುದೇ ಮಧ್ಯಂತರ ತಡೆಆಜ್ಞೆ ನೀಡಲು ನಿರಾಕರಿಸಿದೆ.

ದೆಹಲಿಯ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸೇರಿದ ವೈದ್ಯರಾದ ಡಾ. ನಿಶಾಂತ್ ಸೋನಿ, ಡಾ. ಆಶಿಶ್ ತೋಮರ್, ಡಾ. ರವಿ ಭಾಟಿಯಾ ಮತ್ತು ಡಾ. ಶಿವಂ ವತ್ಸಲ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ‘ಡಾಕ್ಟರ್ಸ್ ಆಫ್ ಕಾರ್ಪೊರೇಟ್ ಸೊಸೈಟಿ’ ಪದಾಧಿಕಾರಿಗಳೂ ಈ ಮನವಿಯಲ್ಲಿ ಭಾಗಿಯಾಗಿದ್ದಾರೆ. ರೋಗಿಗಳ ಚಿಕಿತ್ಸೆ ವಿಫಲವಾದಾಗ ಅವರ ಕುಟುಂಬಸ್ಥರಿಂದ ವೈದ್ಯರು ಈಗಾಗಲೇ ಹಿಂಸಾಚಾರ ಮತ್ತು ದಾಳಿಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ವೈದ್ಯರನ್ನು ‘ಹಣದಾಸೆಯ ಭ್ರಷ್ಟರು’ ಎಂದು ಬಿಂಬಿಸುವುದರಿಂದ ರೋಗಿಗಳು ಮತ್ತು ವೈದ್ಯರ ನಡುವಿನ ನಂಬಿಕೆ ಮತ್ತಷ್ಟು ಹಾಳಾಗುತ್ತದೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಜೀ ಮ್ಯೂಸಿಕ್ ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಟೀಸರ್‌ನಲ್ಲಿ ‘ನಂಬಲಾಗದ ಸತ್ಯ ಘಟನೆಗಳಿಂದ ಪ್ರೇರಿತ’ ಎಂದು ಹೇಳಲಾಗಿದೆ. ಇದು ಕಾಲ್ಪನಿಕ ಸಿನಿಮಾವಾಗಿದ್ದರೂ, ಸಾರ್ವಜನಿಕರಲ್ಲಿ ನಿಜವಾದ ಘಟನೆ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ. ಬ್ರೈನ್ ಡೆಡ್ ಎಂದು ಸುಳ್ಳು ಹೇಳಿ ಅಂಗಾಂಗ ದಂಧೆ ನಡೆಸುವುದು, ಅನಗತ್ಯ ಪರೀಕ್ಷೆಗಳನ್ನು ನೀಡುವುದು ಮತ್ತು ಕಮಿಷನ್ ಪಡೆಯುವಂತೆ ತೋರಿಸಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಧಕ್ಕೆ ತರುತ್ತದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಸನ್ನಿ ಡಿಯೋಲ್ ‘ಸೂರ್ಯ’ ಚಿತ್ರದಲ್ಲಿ ವೈದ್ಯರ ನಿಂದನೆ; ವೈದ್ಯಕೀಯ ಸಂಘ ಅಸಮಾಧಾನ

ಟೀಸರ್ ಬಿಡುಗಡೆಯಾದ ಬಳಿಕ ಯೂಟ್ಯೂಬ್ ಕಾಮೆಂಟ್ ವಿಭಾಗದಲ್ಲಿ ಅನೇಕರು ವೈದ್ಯರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುತ್ತಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ವೈದ್ಯರು ನ್ಯಾಯಾಲಯದ ಮೂಲಕ ಟೀಸರ್ ಅನ್ನು ಆನ್‌ಲೈನ್‌ನಿಂದ ತೆರವುಗೊಳಿಸಲು, ಕಡ್ಡಾಯವಾಗಿ ಕಾಲ್ಪನಿಕ ಕಥೆ ಎಂಬ ಡಿಸ್ಕ್ಲೇಮರ್ ಹಾಕಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language