Hashtagintro

ರಾತ್ರಿ ಹೊತ್ತು ಬೇಕೆಂದವರಿಗೆ ಸೂರ್ಯನ ಬೆಳಕು ಮಾರುವ ಯೋಜನೆ; ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯದ್ದೂ ಸಹಯೋಗ

ರಾತ್ರಿ ಹೊತ್ತು ಬೇಕೆಂದವರಿಗೆ ಸೂರ್ಯನ ಬೆಳಕು ಮಾರುವ ಯೋಜನೆ; ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆಯದ್ದೂ ಸಹಯೋಗ

ನವದೆಹಲಿ, ನವೆಂಬರ್ 3: ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣ ಸೂರ್ಯಾಸ್ತವೆಂದು ಭಾಸವಾಗುವ ರೀತಿಯಲ್ಲಿ ಸೂರ್ಯನನ್ನು ಮರೆಮಾಚಿದ ಘಟನೆ ಹಲವರಿಗೆ ಗೊತ್ತಿರಬಹುದು. ಅಂಥದ್ದೊಂದು ರೀತಿಯ ಪರಿಕಲ್ಪನೆಯೊಂದನ್ನು ಮನುಷ್ಯ ಸಾಕಾರಗೊಳಿಸಲು ಹೊರಟಿದ್ದಾನೆ. ಇಲ್ಲಿ ಸೂರ್ಯನನ್ನು ಮರೆ ಮಾಚುವ ಸಾಹಸವಲ್ಲ, ಸೂರ್ಯನನ್ನು ಮರೆಯಿಂದ ತರುವ ಸಾಹಸದ ಕನಸು ಇದು. ಅಮೆರಿಕದ ಸ್ಟಾರ್ಟಪ್​ವೊಂದು ರಾತ್ರಿಯ ವೇಳೆ ಸೂರ್ಯನ ಬೆಳಕು ಭೂಮಿಯ ಮೇಲೆ ಹರಿಯುವಂತೆ ಮಾಡಲು ಹೊರಟಿದೆ. ಕ್ಯಾಲಿಫೋರ್ನಿಯ ಮೂಲದ ರಿಫ್ಲೆಕ್ಟ್ ಆರ್ಬಿಟಲ್ (Reflect Orbital) ಎನ್ನುವ ಸಂಸ್ಥೆ ಈ ಸಾಹಸಕ್ಕೆ ಕೈಹಾಕುತ್ತಿರುವುದು. ಈ ಪ್ರಯತ್ನದಲ್ಲಿ ಭಾರತದ ಸ್ಕೈರೂಪ್ ಏರೋಸ್ಪೇಸ್ (Skyroot Aerospace) ಎನ್ನುವ ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಪಾತ್ರವೂ ಇರಲಿದೆ ಎನ್ನುವುದು ಗಮನಾರ್ಹ.

ರಿಫ್ಲೆಕ್ಟ್ ಆರ್ಬಿಟಲ್ ಸಂಸ್ಥೆಯು ರಾತ್ರಿಯ ವೇಳೆಯೂ ಸೂರ್ಯನ ಬೆಳಕನ್ನು ವಿದ್ಯುತ್ ರೀತಿಯಲ್ಲಿ ಮಾರಾಟ ಮಾಡುವ ಮತ್ತು ಅಪೇಕ್ಷಿತ ಪ್ರದೇಶಗಳಿಗೆ ಬೆಳಕನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಹಾಕಿದೆ. ಬಾಹ್ಯಾಕಾಶದಲ್ಲಿ ಬೃಹತ್ ಗಾತ್ರದ ಕನ್ನಡಿಗಳನ್ನು (Mirrors) ಭೂಮಿಯ ಕೆಳಕಕ್ಷೆಗೆ ಕಳುಹಿಸಿ, ಸೂರ್ಯ ಮುಳುಗಿದ ನಂತರವೂ ನಿರ್ದಿಷ್ಟ ಪ್ರದೇಶಗಳಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಮೂಲಕ ಸೌರ ವಿದ್ಯುತ್ ಸ್ಥಾವರಗಳು ರಾತ್ರಿಯಲ್ಲೂ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುವುದು, ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಾತ್ರಿ ವೇಳೆ ರಕ್ಷಣಾ ಕಾರ್ಯಾಚರಣೆಗೆ ಬೆಳಕು ನೀಡುವುದು ಇದರ ಗುರಿಯಾಗಿದೆ.

ಇದನ್ನೂ ಓದಿ: ಟಾಟಾ ಗ್ರೂಪ್ ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕು, ಸರ್ಕಾರದ ಮಧ್ಯಪ್ರವೇಶದ ಅಗತ್ಯವಿಲ್ಲ: ನಿರ್ಮಲಾ ಸೀತಾರಾಮನ್

ಭಾರತದ ಸ್ಕೈರೂಟ್ ಜೊತೆ ಒಪ್ಪಂದ

ಈ ತಂತ್ರಜ್ಞಾನವನ್ನು ಪರೀಕ್ಷಿಸಲು ಮತ್ತು ಪ್ರದರ್ಶಿಸಲು ‘ರಿಫ್ಲೆಕ್ಟ್ ಆರ್ಬಿಟಲ್’ ಕಂಪನಿಯು ಭಾರತದ ಪ್ರಮುಖ ಬಾಹ್ಯಾಕಾಶ ಸ್ಟಾರ್ಟ್‌ಅಪ್ ಆದ ‘ಸ್ಕೈರೂಟ್ ಏರೋಸ್ಪೇಸ್’ ಮೂಲಕ ಎರಡು ರಾಕೆಟ್ ಉಡಾವಣೆಗಳನ್ನು ನಡೆಸಲು ಸಿದ್ಧತೆ ನಡೆಸಿದೆ.

ಈ ಮಿಷನ್​ನಲ್ಲಿ 18×18 ಮೀಟರ್ ಅಳತೆಯ ಎರಡು ಕನ್ನಡಿಗಳನ್ನು ಭೂಮಿಯ ಕೆಳಕಕ್ಷೆಗೆ ಕೂರಿಸಲಾಗುತ್ತದೆ. ಅದು ಸೂರ್ಯನಿಂದ ಪ್ರತಿಫಲಿಸುವ ಬೆಳಕು ಭೂಮಿಯ ನಿರ್ದಿಷ್ಟ 5 ಕಿಮೀ ಪ್ರದೇಶದವರಿಗೂ ಹರಿಯಬಹುದು. ಅಂದರೆ, ಆ ಎರಡು ಕನ್ನಡಿಗಳ ಸಹಾಯದಿಂದ ಯಾವುದೇ 5 ಕಿಮೀ ಪ್ರದೇಶಕ್ಕೆ ರಾತ್ರಿಯ ಹೊತ್ತಲ್ಲಿ ಸೂರ್ಯನ ಬೆಳಕು ಚೆಲ್ಲುತ್ತದೆ. ಈ ಮಹತ್ವಾಕಾಂಕ್ಷೆಯ ಮೊದಲ ಪ್ರದರ್ಶನ 2027ರ ಎರಡನೇ ತ್ರೈಮಾಸಿಕದಲ್ಲಿ ನಡೆಯಲಿದೆ.

ಇದನ್ನೂ ಓದಿ: ಸತತ ಎರಡನೇ ದಿನವೂ ಉಬ್ಬಿದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು; ಭಾರತದ ಷೇರುಪೇಟೆ ಗರಿಗೆದರಲು ಕಾರಣಗಳಿವು…

ಪರಿಸರ ಮತ್ತು ಖಗೋಳಶಾಸ್ತ್ರಜ್ಞರ ಕಳವಳ

ವಿಜ್ಞಾನಿಗಳ ಈ ಸಾಹಸದ ಯೋಜನೆಗೆ ಪ್ರಪಂಚದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಹ್ಯಾಕಾಶದಿಂದ ಪ್ರತಿಫಲಿಸುವ ಬೆಳಕು ವಾತಾವರಣದಲ್ಲಿ ಚದುರಿಹೋಗಿ (Light Scattering) ಹುಣ್ಣುಮೆಯ ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಉಂಟುಮಾಡಬಹುದು. ಇದರಿಂದ ರಾತ್ರಿ ಆಕಾಶದ ಸಹಜ ಸ್ಥಿತಿಗೆ ಧಕ್ಕೆಯಾಗಲಿದ್ದು, ಖಗೋಳ ವೀಕ್ಷಣೆ ಹಾಗೂ ರಾಚರಿಕ ಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಖಗೋಳಶಾಸ್ತ್ರಜ್ಞರು ಮತ್ತು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language