
ನವೆಂಬರ್ 19ರಿಂದ ಕತಾರ್ನಲ್ಲಿ ಆರಂಭವಾಗಲಿರುವ 50 ಓವರ್ಗಳ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತನ್ನ 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಅಬ್ದುಲ್ ಸಮದ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಹಾಂಗ್ಕಾಂಗ್ ಸಿಕ್ಸಸ್ ಟೂರ್ನಿ, ಭಾರತ ವಿರುದ್ಧದ ಏಷ್ಯನ್ ಗೇಮ್ಸ್ ಫೈನಲ್ ಹಾಗೂ ಕಳೆದ ತಿಂಗಳು ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅಬ್ದುಲ್ ಸಮದ್ ಆಡಿದ್ದರು. ಇದೀಗ ಅವರ ಹೆಗಲಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಾಝ್ ಸದಾಕತ್, ಹಸನ್ ನವಾಜ್, ಹೈದರ್ ಅಲಿ, ಶಹಜೈಬ್ ಖಾನ್, ಫರ್ಹಾನ್ ಯೂಸುಫ್ ಮತ್ತು ಶಮೈಲ್ ಹುಸೇನ್ ಅವರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ನಡೆದ ತ್ರಿಕೋನ ಸರಣಿಗಾಗಿ ಹಸನ್ ನವಾಜ್ ಪಾಕಿಸ್ತಾನದ ಏಕದಿನ ತಂಡಕ್ಕೆ ಮರಳಿದ್ದರು. ಅಲ್ಲದೆ, ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಭಾರತ ವಿರುದ್ಧ 96 ರನ್ ಗಳಿಸಿ ಗಮನ ಸೆಳೆದಿದ್ದರು.
ಯುವ ಆಟಗಾರರಿಗೆ ಅವಕಾಶ
ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಹಸ್ನೈನ್, ಅಹ್ಮದ್ ದಾನಿಯಾಲ್, ಅಕೀಫ್ ಜಾವೇದ್ ಮತ್ತು ಸಫ್ಯಾನ್ ಮೊಕೀಮ್ ಸ್ಥಾನ ಪಡೆದಿದ್ದಾರೆ. 2019ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹಸ್ನೈನ್, 2025ರ ಫೆಬ್ರವರಿಯಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಈವರೆಗೆ ಅವರು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಸಫ್ಯಾನ್ ಮೊಕೀಮ್ ತ್ರಿಕೋನ ಸರಣಿಯ ರಾವಲ್ಪಿಂಡಿ ಚರಣದಲ್ಲಿ ಪಾಕಿಸ್ತಾನ ತಂಡದ ಭಾಗವಾಗಿದ್ದರು.
ತಂಡದಲ್ಲಿ ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಹಲವು ಆಟಗಾರರಿದ್ದರೂ, ಪಾಕಿಸ್ತಾನದ ಪ್ರಮುಖ ಏಕದಿನ ತಂಡದ ಆಟಗಾರರಿಗೆ ಇಲ್ಲಿ ಸ್ಥಾನ ನೀಡಿಲ್ಲ. ರೈಸಿಂಗ್ ಸ್ಟಾರ್ಸ್ ಟೂರ್ನಿಯ ಸ್ವರೂಪಕ್ಕೆ ಅನುಗುಣವಾಗಿ ಯುವ ಹಾಗೂ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಒಂದೇ ಗುಂಪಿನಲ್ಲಿ ಭಾರತ- ಪಾಕ್
ಪಾಕಿಸ್ತಾನ ತಂಡ ‘ಬಿ’ ಗುಂಪಿನಲ್ಲಿ ಭಾರತ ‘ಎ’, ಯುಎಇ ಮತ್ತು ನೇಪಾಳ ತಂಡಗಳೊಂದಿಗೆ ಸ್ಥಾನ ಪಡೆದಿದೆ. ನವೆಂಬರ್ 20ರಂದು ಯುಎಇ ವಿರುದ್ಧ ಆಡುವ ಮೂಲಕ ಪಾಕಿಸ್ತಾನ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ನವೆಂಬರ್ 22ರಂದು ಭಾರತ ‘ಎ’ ತಂಡವನ್ನು ಎದುರಿಸಲಿದ್ದು, ನವೆಂಬರ್ 25ರಂದು ನೇಪಾಳ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯವನ್ನಾಡಲಿದೆ.
ಪಾಕಿಸ್ತಾನ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. 50 ಓವರ್ ಹಾಗೂ ಟಿ20 ಎರಡೂ ಮಾದರಿಯ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪ್ರಶಸ್ತಿಗಳನ್ನು ಪಾಕಿಸ್ತಾನ ತನ್ನಲ್ಲೇ ಉಳಿಸಿಕೊಂಡಿದೆ. 2023ರಲ್ಲಿ ಕೊಲಂಬೊದಲ್ಲಿ ನಡೆದ 50 ಓವರ್ಗಳ ಟೂರ್ನಿಯ ಫೈನಲ್ನಲ್ಲಿ ಭಾರತ ‘ಎ’ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಕಳೆದ ವರ್ಷ ದೋಹಾದಲ್ಲಿ ನಡೆದ ಟಿ20 ಟೂರ್ನಿಯ ಫೈನಲ್ನಲ್ಲಿ ಬಾಂಗ್ಲಾದೇಶ ‘ಎ’ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಅಂಡರ್-19 ಏಷ್ಯಾಕಪ್ಗೆ ಭಾರತ ತಂಡ ಪ್ರಕಟ: ಸೆಹ್ವಾಗ್, ದ್ರಾವಿಡ್ ಪುತ್ರರಿಗೆ ಸ್ಥಾನ
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ಗೆ ಪಾಕಿಸ್ತಾನ ತಂಡ: ಅಬ್ದುಲ್ ಸಮದ್ (ನಾಯಕ), ಅಹ್ಮದ್ ದಾನಿಯಾಲ್, ಅಕೀಫ್ ಜಾವೇದ್, ಡ್ಯಾನಿಶ್ ಅಜೀಜ್, ಫರ್ಹಾನ್ ಯೂಸುಫ್, ಹೈದರ್ ಅಲಿ, ಹಸನ್ ನವಾಜ್, ಮಾಝ್ ಸದಾಕತ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ಇಮ್ರಾನ್, ರೋಹೈಲ್ ನಜೀರ್ (ವಿಕೆಟ್ ಕೀಪರ್), ಸಾದ್ ಮಸೂದ್, ಶಹಜೈಬ್ ಖಾನ್, ಶಮೈಲ್ ಹುಸೇನ್, ಸಫ್ಯಾನ್ ಮೊಕೀಮ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports
