Hashtagintro

ನರ್ಸಿಂಗ್ ಹೋಂನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಅಪ್ರಾಪ್ತ ಬಾಲಕಿ

ನರ್ಸಿಂಗ್ ಹೋಂನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಅಪ್ರಾಪ್ತ ಬಾಲಕಿ

ಹೂಗ್ಲಿ, ನವೆಂಬರ್ 08: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೊಟ್ಟೆ ನೋವಿನ ಕಾರಣಕ್ಕೆ ನರ್ಸಿಂಗ್ ಹೋಂಗೆ ದಾಖಲಾಗಿದ್ದ 16 ವರ್ಷದ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದ ಪರಿಣಾಮ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಹೊಟ್ಟೆ ನೋವೆಂದು ನರ್ಸಿಂಗ್ ಹೋಂಗೆ ಬಂದಿದ್ದ ಬಾಲಕಿ
ಶುಕ್ರವಾರ ತಡರಾತ್ರಿ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ. ಹೀಗಾಗಿ ಕುಟುಂಬದವರು ಆಕೆಯನ್ನು ಉತ್ತರಪಾರ ಪುರಸಭೆ ವ್ಯಾಪ್ತಿಯ ನರ್ಸಿಂಗ್ ಹೋಂಗೆ ಕರೆತಂದಿದ್ದಾರೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಹೊಟ್ಟೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿ ಯಾರ ಸಹಾಯವೂ ಇಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ನರ್ಸಿಂಗ್ ಹೋಂ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಪಾರ್ಕ್​ನಲ್ಲಿ ರುಂಡವಿಲ್ಲದ ನವಜಾತ ಶಿಶುವನ್ನು ಎಳೆದೊಯ್ಯುತ್ತಿತ್ತು ನಾಯಿ

 

ರಕ್ತದ ಮಡುವಿನಲ್ಲಿ ಬಿದ್ದಿದ್ದ ನವಜಾತ ಶಿಶು
ಶೌಚಾಲಯದ ಹೊರಗೆ ನವಜಾತ ಶಿಶು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ದಾರಿಹೋಕರೊಬ್ಬರು ಗಮನಿಸಿದ್ದಾರೆ. ತಕ್ಷಣವೇ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನರ್ಸಿಂಗ್ ಹೋಂನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಒಳಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರಿಗೆ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲವೇ?
ತಮ್ಮ ಮಗಳು ಗರ್ಭಿಣಿಯಾಗಿರುವ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ಭಾವಿಸಿ ನರ್ಸಿಂಗ್ ಹೋಂಗೆ ಕರೆತಂದಿದ್ದಾಗಿ ತಿಳಿಸಿದ್ದಾರೆ. ನರ್ಸಿಂಗ್ ಹೋಂ ಸಿಬ್ಬಂದಿ ಕೂಡ ಬಾಲಕಿಯ ಗರ್ಭಧಾರಣೆಯ ಬಗ್ಗೆ ವಿಚಾರಿಸಿದ್ದರು. ಆದರೆ ಆಕೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸಂಸ್ಥೆಯ ಮಾಲಕಿ ಸುಚೇತಾ ಮುಖರ್ಜಿ ಹೇಳಿದ್ದಾರೆ.

ಸಿಸಿಟಿವಿ ದೃಶ್ಯ ಪರಿಶೀಲನೆಗೆ ಮುಂದಾದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನರ್ಸಿಂಗ್ ಹೋಂನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಬಾಲಕಿ, ಆಕೆಯ ಪೋಷಕರು, ಕುಟುಂಬದವರು ಹಾಗೂ ನರ್ಸಿಂಗ್ ಹೋಂ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನವಜಾತ ಶಿಶುವಿನ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ.

ಇದೇ ನರ್ಸಿಂಗ್ ಹೋಂ ಆವರಣದಲ್ಲಿ ಈ ಹಿಂದೆಯೂ ಭ್ರೂಣ ಪತ್ತೆಯಾಗಿತ್ತು ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. ಹೀಗಾಗಿ ಹಿಂದಿನ ಘಟನೆಗಳ ಬಗ್ಗೆಯೂ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಸುರಕ್ಷತೆಯ ಬಗ್ಗೆಯೂ ಪ್ರಶ್ನೆ
ಈ ಘಟನೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಪ್ರಾಪ್ತ ಬಾಲಕಿಯ ಗರ್ಭಧಾರಣೆಯ ಹಿಂದೆ ಏನಾದರೂ ಒತ್ತಡ ಅಥವಾ ದೌರ್ಜನ್ಯ ಇತ್ತೇ? ಕುಟುಂಬದವರಿಗೆ ಈ ವಿಚಾರ ತಿಳಿಯದಿರಲು ಕಾರಣವೇನು? ನರ್ಸಿಂಗ್ ಹೋಂನಲ್ಲಿ ಸೂಕ್ತ ವೈದ್ಯಕೀಯ ನೆರವು ಮತ್ತು ಮೇಲ್ವಿಚಾರಣೆ ಲಭ್ಯವಿತ್ತೇ? ಎಂಬ ಅಂಶಗಳನ್ನು ಪೊಲೀಸರು ಪರಿಶೀಲಿಸಬೇಕಿದೆ.

ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಆಕೆಯ ಗುರುತನ್ನು ಬಹಿರಂಗಪಡಿಸದೆ, ಆಕೆಯ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ. ಮಗುವಿನ ಸಾವಿನ ಜೊತೆಗೆ ಬಾಲಕಿಯ ಪರಿಸ್ಥಿತಿಯ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language