
2018ರಲ್ಲಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಸ್ಯಾಂಡ್ಪೇಪರ್ ವಿವಾದದ ಕುರಿತು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಈ ವಿವಾದದ ಬಗ್ಗೆ ಮಾತನಾಡಿದ್ದ ಉಸ್ಮಾನ್ ಖವಾಜಾ ಅವರಿಗೆ ವಾರ್ನರ್ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಚೆಂಡು ವಿರೂಪಗೊಳಿಸಿದ ಪ್ರಕರಣದ ತನಿಖೆ ನಡೆದ ರೀತಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ವಾರ್ನರ್, ಖವಾಜಾ ಹೇಳಿರುವ ವಿಚಾರಗಳು ಸಂಪೂರ್ಣ ಸತ್ಯ ಎಂದು ಹೇಳಿದ್ದಾರೆ. ಎಂಟು ವರ್ಷಗಳ ಬಳಿಕ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದೇಕೆ ಎಂದು ಪ್ರಶ್ನಿಸುವ ಬದಲು, ಅವರು ಎತ್ತಿರುವ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀವು ಹೇಳಿರುವುದು ಶೇ.100ರಷ್ಟು ಸತ್ಯ
‘ಈ ವಿಷಯದ ಬಗ್ಗೆ ನಾನು ಮಾತನಾಡಿ ಎಂಟು ವರ್ಷಗಳಾಗಿವೆ. ಉಸ್ಮಾನ್ ಖವಾಜಾ, ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ. ನೀವು ಮಾಡಿರುವ ಕೆಲಸಕ್ಕೆ ಧನ್ಯವಾದಗಳು. ನೀವು ಹೇಳಿರುವುದು ಶೇ.100ರಷ್ಟು ಸತ್ಯ. ಈಗ ಎಲ್ಲರಿಗೂ ನಿಜ ಏನೆಂಬುದು ಗೊತ್ತಾಗಿದೆ. ಜನರು ಈ ಸತ್ಯವನ್ನು ತಿಳಿದುಕೊಳ್ಳಲು ಬಯಸಿದ್ದರು. ನೀವು ಮುಂದೆ ಬಂದು ಅದನ್ನು ಹೇಳಿದ್ದೀರಿ. ಆದರೆ, ಈಗ ಎಂಟು ವರ್ಷಗಳ ಬಳಿಕ ಯಾಕೆ ಮಾತನಾಡುತ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಪುಸ್ತಕ ಮಾರಾಟಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ. ಆದರೆ, ಇದು ಉಸ್ಮಾನ್ ಅವರ ಕಥೆ. ಅವರು ನಂಬಿರುವ ವಿಚಾರವನ್ನು ಹೇಳಿದ್ದಾರೆ’ ಎಂದು ವಾರ್ನರ್ ತಿಳಿಸಿದ್ದಾರೆ.
Eight years later, the silence breaks.
David Warner has come out in full support of Usman Khawaja, confirming Khawaja’s claim that the Australian dressing room was aware of the Cape Town sandpaper plan is "100% accurate."
Warner called Cricket Australia’s original 2018 probe "rushed and botched," revealing Khawaja was sitting right next to Cameron Bancroft at the time yet was never interviewed.
Addressing the toll on his family and having to explain the fallout to his daughter, Warner’s message was blunt: stop questioning the players telling the truth and start questioning the investigation.
The Sandpapergate lid is blown wide open. Again.
— Brutal Truth (@sarkarstix) November 9, 2026
ತನಿಖೆಯಲ್ಲೂ ಹಲವು ಲೋಪಗಳಿದ್ದವು
2018ರ ಚೆಂಡು ವಿರೂಪಗೊಳಿಸಿದ ಪ್ರಕರಣದ ತನಿಖೆಯ ಬಗ್ಗೆಯೂ ವಾರ್ನರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಪಕ್ಕದಲ್ಲೇ ಕುಳಿತಿದ್ದ ಖವಾಜಾ ಅವರನ್ನು ತನಿಖೆಯ ವೇಳೆ ವಿಚಾರಣೆಗೆ ಒಳಪಡಿಸಿರಲಿಲ್ಲ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ.
‘ಈ ಪ್ರಕರಣದ ವಿಚಾರಣೆ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಯಿತು. ತನಿಖೆಯಲ್ಲೂ ಹಲವು ಲೋಪಗಳಿದ್ದವು. ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪಕ್ಕದಲ್ಲೇ ಉಸ್ಮಾನ್ ಕುಳಿತಿದ್ದರು. ಆದರೆ, ಅವರನ್ನು ವಿಚಾರಣೆಗೆ ಕರೆಸಲೇ ಇಲ್ಲ. ಇದನ್ನು ಹೇಗೆ ಸಮಗ್ರ ತನಿಖೆ ಎಂದು ಕರೆಯಲು ಸಾಧ್ಯ? ನನಗೆ ಇದು ಅಚ್ಚರಿ ಮೂಡಿಸುತ್ತದೆ. ನಾವು ಯಾರನ್ನೂ ದೂಷಿಸಲು ಅಥವಾ ಹಳೆಯ ಗಾಯಗಳನ್ನು ಮತ್ತೆ ಕೆದಕಲು ಬಯಸುತ್ತಿಲ್ಲ. ಇಲ್ಲಿ ಮುಖ್ಯವಾಗಿರುವುದು ಹೊಣೆಗಾರಿಕೆ ಮತ್ತು ಪಾರದರ್ಶಕತೆ. ಸತ್ಯವನ್ನು ಸರಿಯಾಗಿ ಪರಿಶೀಲಿಸಬೇಕು. ಜವಾಬ್ದಾರಿ ಕೇಳುತ್ತಿರುವ ವ್ಯಕ್ತಿಯನ್ನು ಪ್ರಶ್ನಿಸುವುದನ್ನು ಬಿಟ್ಟು, ತನಿಖೆಗೆ ಹೊಣೆಗಾರರಾಗಿದ್ದವರನ್ನೇ ಪ್ರಶ್ನಿಸುವ ಸಮಯ ಬಂದಿದೆ’ ಎಂದು ವಾರ್ನರ್ ಹೇಳಿದ್ದಾರೆ.
ಎರಡು ದಿನ ತಡವಾಗಿದ್ದಕ್ಕೂ ಇದೇ ಕಾರಣ
ಈ ವಿವಾದ ತಮ್ಮ ಕುಟುಂಬದ ಮೇಲೆ ಬೀರಿದ ಪರಿಣಾಮದ ಬಗ್ಗೆಯೂ ವಾರ್ನರ್ ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಪುತ್ರಿಯರು 2018ರಲ್ಲಿ ನಡೆದ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರಿಂದ ಅವರಿಗೆ ಅಂದು ನಡೆದ ಸಂಪೂರ್ಣ ಘಟನೆಯನ್ನು ವಿವರಿಸಬೇಕಾಯಿತು ಎಂದು ಹೇಳಿದ್ದಾರೆ.
‘ಕಳೆದ ಎಂಟು ವರ್ಷಗಳಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಹೇಳಿಕೆಗಳು ಬಂದಿವೆ. ಅವುಗಳಲ್ಲಿ ಕೆಲವು ತಪ್ಪು ಮಾಹಿತಿಗಳೂ ಇದ್ದವು. ಅನೇಕರು ಮೌನವಾಗಿಯೇ ಉಳಿದಿದ್ದರು. ಕಳೆದ ಕೆಲವು ದಿನಗಳಿಂದ ನಾನು ನನ್ನ ಪುತ್ರಿಯರೊಂದಿಗೆ ಮಾತನಾಡುತ್ತಿದ್ದೇನೆ. ಈ ವಿಷಯದ ಬಗ್ಗೆ ವಿಡಿಯೋ ಹಂಚಿಕೊಳ್ಳಲು ಎರಡು ದಿನ ತಡವಾಗಿದ್ದಕ್ಕೂ ಇದೇ ಕಾರಣ. ಅವರಿಗೆ ಅಂದು ನಿಜವಾಗಿ ಏನಾಯಿತು ಎಂಬುದನ್ನು ವಿವರಿಸಬೇಕಿತ್ತು. ವಿಶೇಷವಾಗಿ ನನ್ನ 12 ವರ್ಷದ ಮಗಳು ಐವಿ, ಅಂದು ನಮ್ಮನ್ನು ಯಾಕೆ ಹಿಡಿದುಕೊಂಡಿದ್ದರು? ಅಷ್ಟೊಂದು ಕ್ಯಾಮೆರಾಗಳು ಯಾಕಿದ್ದವು? ಟಿವಿಯಲ್ಲಿ ನಾವೆಲ್ಲರೂ ಯಾಕೆ ಅಳುತ್ತಿದ್ದೆವು? ಎಂದು ಪ್ರಶ್ನಿಸಿದ್ದಳು’ ಎಂದು ವಾರ್ನರ್ ಭಾವುಕರಾಗಿ ಹೇಳಿದ್ದಾರೆ.
ಅಹಮದಾಬಾದ್ ವಿಮಾನ ದುರಂತ; ಮಹತ್ವದ ನಿರ್ಧಾರ ತೆಗೆದುಕೊಂಡ ಡೇವಿಡ್ ವಾರ್ನರ್
ಏನೇ ಆಗಲಿ ಸತ್ಯವನ್ನೇ ಹೇಳಿ
ಪುತ್ರಿಯರಿಗೆ ಈ ಘಟನೆಯನ್ನು ವಿವರಿಸುವುದು ಸುಲಭವಾಗಿರಲಿಲ್ಲ ಎಂದು ಹೇಳಿದ ವಾರ್ನರ್, ಮಕ್ಕಳಿಗೆ ಸತ್ಯ ಹೇಳುವ ಮಹತ್ವವನ್ನೂ ತಿಳಿಸಿದ್ದಾಗಿ ಹೇಳಿದ್ದಾರೆ.
‘ಅವರಿಗೆ ಈ ವಿಷಯವನ್ನು ಹೇಳುವುದು ತುಂಬಾ ಕಷ್ಟವಾಗಿತ್ತು. ಆದರೆ, ನಾನು ನನ್ನ ಮಕ್ಕಳಿಗೆ ಒಂದು ಮಾತು ಹೇಳಿದೆ. ಏನೇ ಆಗಲಿ ಸತ್ಯವನ್ನೇ ಹೇಳಿ. ಏಕೆಂದರೆ, ಸುಳ್ಳು ಹೇಳಿದರೆ ಒಂದು ದಿನ ಅದು ಖಂಡಿತವಾಗಿಯೂ ಹೊರಬರುತ್ತದೆ ಎಂದು ತಿಳಿಸಿದೆ. ಅದು ನಮ್ಮ ಕುಟುಂಬಕ್ಕೆ ಅತ್ಯಂತ ಕಠಿಣ ಸಮಯವಾಗಿತ್ತು. ಇಡೀ ಆಸ್ಟ್ರೇಲಿಯಾದ ಜನರು ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಉಸ್ಮಾನ್, ನೀವು ನಡೆದಿದ್ದನ್ನು ಇದ್ದಂತೆಯೇ ಹೇಳಿದ್ದೀರಿ. ನಿಮ್ಮ ಮಾತುಗಳು ಸಂಪೂರ್ಣ ಸತ್ಯ’ ಎಂದು ವಾರ್ನರ್ ಹೇಳಿದ್ದಾರೆ.
ಈ ವಿವಾದದಿಂದ ತಮ್ಮ ಕುಟುಂಬ ಮಾತ್ರವಲ್ಲದೆ, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಕುಟುಂಬಗಳೂ ಸಾಕಷ್ಟು ಸಂಕಷ್ಟ ಅನುಭವಿಸಿವೆ ಎಂದು ವಾರ್ನರ್ ತಿಳಿಸಿದ್ದಾರೆ. ಆದರೂ, ಖವಾಜಾ ಅವರ ಹೇಳಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪುನರುಚ್ಚರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports
