
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಮತ್ತೊಮ್ಮೆ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬದಲಿಸುವಂತೆ ಒತ್ತಾಯಿಸಿದ್ದಾರೆ. ಐಪಿಎಲ್ ಆಯೋಜನೆಗೆ ಐಸಿಸಿ ಪ್ರತ್ಯೇಕ ವಿಂಡೋ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಬಿಸಿಸಿಐ ತನ್ನದೇ ಆದ ನಿರ್ಧಾರ ತೆಗೆದುಕೊಂಡು ಟೂರ್ನಿಯ ವೇಳಾಪಟ್ಟಿಯನ್ನು ನಿಗದಿಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಐಪಿಎಲ್ ಅನ್ನು ಜನವರಿಯಲ್ಲಿ ಆರಂಭಿಸಬೇಕು ಅಥವಾ ಅಕ್ಟೋಬರ್ನಿಂದ ಏಪ್ರಿಲ್ ಅವಧಿಯಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಲಲಿತ್ ಮೋದಿ ಸಲಹೆ ನೀಡಿದ್ದಾರೆ.
ಲಲಿತ್ ಮೋದಿ ಪ್ರಕಾರ, ಐಪಿಎಲ್ ಈಗ ಕೇವಲ ಕ್ರಿಕೆಟ್ ಟೂರ್ನಿಯಾಗಿ ಉಳಿದಿಲ್ಲ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಕ್ರೀಡಾ ಹಾಗೂ ವ್ಯಾಪಾರ ವೇದಿಕೆಯಾಗಿ ಬೆಳೆದಿದೆ. ಹೀಗಾಗಿ ವಿಶ್ವ ಕ್ರಿಕೆಟ್ ಕೂಡ ಐಪಿಎಲ್ನ ಮಹತ್ವವನ್ನು ಅರಿತುಕೊಂಡು, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಅದಕ್ಕೆ ತಕ್ಕಂತೆ ರೂಪಿಸಬೇಕು ಎಂಬುದು ಅವರ ಅಭಿಪ್ರಾಯ.
ಐಪಿಎಲ್ಗೆ ಐಸಿಸಿ ವಿಂಡೋ ಬೇಕಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಲಲಿತ್ ಮೋದಿ, ‘ಐಪಿಎಲ್ ಆಯೋಜಿಸಲು ಐಸಿಸಿಯಿಂದ ಪ್ರತ್ಯೇಕ ವಿಂಡೋ ಪಡೆಯುವ ಅಗತ್ಯವಿಲ್ಲ. ಟೂರ್ನಿ ಯಾವಾಗ ನಡೆಯಬೇಕು ಎಂಬುದನ್ನು ಬಿಸಿಸಿಐ ನಿರ್ಧರಿಸಬಹುದು. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಹಾಗೂ ಆಟಗಾರರ ಲಭ್ಯತೆಯನ್ನು ನಿರ್ವಹಿಸುವುದು ಬೇರೆ ವಿಚಾರ. ಅದಕ್ಕಾಗಿ ನಿರ್ದಿಷ್ಟ ಸಮಯದಲ್ಲಿ ಟೂರ್ನಿ ನಡೆಸಲು ಯಾರ ಅನುಮತಿಯನ್ನೂ ಪಡೆಯಬೇಕಾಗಿಲ್ಲ’ ಎಂದು ಮೋದಿ ಹೇಳಿದ್ದಾರೆ.
ಐಪಿಎಲ್ ವೇಳಾಪಟ್ಟಿ ಬದಲಿಸಿ
ಸದ್ಯ ಐಪಿಎಲ್ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತಿದೆ. ಈ ಸಮಯದಲ್ಲಿ ದೇಶದ ಹಲವು ಭಾಗಗಳಲ್ಲಿ ತಾಪಮಾನ ಹೆಚ್ಚಾಗುವುದರಿಂದ ಆಟಗಾರರಿಗೆ ಮೈದಾನದಲ್ಲಿ ಆಡುವುದು ಸವಾಲಿನ ಕೆಲಸವಾಗುತ್ತಿದೆ. ಹೀಗಾಗಿ ಟೂರ್ನಿಯ ಆಯೋಜನಾ ಸಮಯವನ್ನು ಬದಲಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಲಲಿತ್ ಮೋದಿ ಹೇಳಿದ್ದಾರೆ. ಇದಕ್ಕಾಗಿ ಅವರು ಎರಡು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
1. ಜನವರಿಯಲ್ಲಿ ಐಪಿಎಲ್ ಆರಂಭ: ಪ್ರತಿ ವರ್ಷ ಜನವರಿ ತಿಂಗಳಿನಿಂದಲೇ ಐಪಿಎಲ್ ಆಯೋಜಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು.
2. ಅಕ್ಟೋಬರ್ನಿಂದ ಏಪ್ರಿಲ್ವರೆಗೆ ವೇಳಾಪಟ್ಟಿ: ಅಕ್ಟೋಬರ್ನಿಂದ ಏಪ್ರಿಲ್ವರೆಗಿನ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಸೂಕ್ತ ವೇಳಾಪಟ್ಟಿ ರೂಪಿಸಬೇಕು.
ಈ ಬದಲಾವಣೆಗಳಿಂದ ಆಟಗಾರರಿಗೆ ಉತ್ತಮ ವಾತಾವರಣದಲ್ಲಿ ಆಡಲು ಅವಕಾಶ ಸಿಗಲಿದೆ. ಜೊತೆಗೆ ಪ್ರಸಾರ ಹಕ್ಕುಗಳಿಂದ ಬರುವ ಆದಾಯ ಹೆಚ್ಚಿಸುವುದರ ಜತೆಗೆ ಭಾರತೀಯ ಕ್ರಿಕೆಟ್ನ ಆರ್ಥಿಕ ಶಕ್ತಿಯನ್ನೂ ದೀರ್ಘಕಾಲದವರೆಗೆ ಬಲಪಡಿಸಬಹುದು ಎಂಬುದು ಅವರ ಅಭಿಪ್ರಾಯ.
ಐಪಿಎಲ್ ರಿಟೆನ್ಷನ್ ಗಡುವು ವಿಸ್ತರಿಸಿದ ಬಿಸಿಸಿಐ: ದಿಢೀರ್ ನಿರ್ಧಾರದ ಹಿಂದಿದೆ ಬಲವಾದ ಕಾರಣ
ಚಾಂಪಿಯನ್ಸ್ ಲೀಗ್ ಆರಂಭಕ್ಕೆ ವಿರೋಧ
ವಿಶ್ವದ ಪ್ರಮುಖ ದೇಶೀಯ ಟಿ20 ಲೀಗ್ಗಳ ವಿಜೇತ ಹಾಗೂ ಬಲಿಷ್ಠ ತಂಡಗಳ ನಡುವೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯನ್ನು ಮತ್ತೆ ಆರಂಭಿಸುವ ಪ್ರಸ್ತಾಪಕ್ಕೂ ಲಲಿತ್ ಮೋದಿ ಬೆಂಬಲ ನೀಡಿಲ್ಲ. ‘ಈ ಟೂರ್ನಿಯ ಮೂಲ ಪರಿಕಲ್ಪನೆ ರೂಪಿಸುವಲ್ಲಿ ತಾವು ಕೂಡ ಭಾಗಿಯಾಗಿದ್ದೆವು. ಆಗ ಅದಕ್ಕೆ ಉತ್ತಮ ವಾಣಿಜ್ಯ ಮೌಲ್ಯವಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಐಪಿಎಲ್ ತಂಡಗಳ ಮಾಲೀಕರು ಈಗ ವಿಶ್ವದ ಹಲವು ಟಿ20 ಲೀಗ್ಗಳಲ್ಲೂ ತಂಡಗಳನ್ನು ಹೊಂದಿದ್ದಾರೆ. ಹೀಗಾಗಿ ಒಂದೇ ಮಾಲೀಕತ್ವದಡಿ ಇರುವ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಹಿತಾಸಕ್ತಿ ಸಂಘರ್ಷ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಕ್ರಿಕೆಟ್ ವೇಳಾಪಟ್ಟಿ ತುಂಬಾ ಒತ್ತಡದಿಂದ ಕೂಡಿದೆ. ಮತ್ತೊಂದು ಟೂರ್ನಿ ಆರಂಭಿಸಿದರೆ ಆಟಗಾರರು, ಪ್ರಸಾರಕರು ಹಾಗೂ ಪ್ರಾಯೋಜಕರ ನಡುವೆ ಮತ್ತಷ್ಟು ಪೈಪೋಟಿ ಎದುರಾಗಲಿದೆ. ಹೊಸ ಟೂರ್ನಿ ಆರಂಭಿಸುವ ಬದಲು ಈಗಿರುವ ಐಪಿಎಲ್ ಅನ್ನು ಮತ್ತಷ್ಟು ಬಲಪಡಿಸುವುದು ಉತ್ತಮ ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports
