
ಬೆಂಗಳೂರು, ನವೆಂಬರ್ 11: ಸೆಮಿಕಂಡಕ್ಟರ್ ಚಿಪ್ ತಯಾರಿಸುವ ಅಮೆರಿಕದ ಕ್ವಾಲ್ಕಾಮ್ ಕಂಪನಿ ಲೇ ಆಫ್ ಪ್ರಕ್ರಿಯೆ ಆರಂಭಿಸಿದೆ. ಜಾಗತಿಕವಾಗಿ ಬಹಳಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ರಾಯ್ಟರ್ಸ್ ವರದಿ ಪ್ರಕಾರ, ಭಾರತದಲ್ಲಿ ಸುಮಾರು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಕ್ವಾಲ್ಕಾಮ್ ಉದ್ಯೋಗಿಗಳು ಮೊದಲ ಬಲಿಯಾಗುತ್ತಿದ್ದಾರೆ ಎನ್ನುವಂತಹ ವರದಿ ಇದೆ.
ಕ್ವಾಲ್ಕಾಮ್ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕಲಿರುವುದು ನಿಜವೇ ಆದರೂ ಎಷ್ಟು ಮಂದಿಯನ್ನು ಲೇ ಆಫ್ ಮಾಡಲಾಗುತ್ತಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ‘ಕಾರ್ಯಸಾಧನೆ ಆಧಾರದಲ್ಲಿ ಉದ್ಯೋಗಕಡಿತ ಮಾಡಲಾಗುತ್ತದೆ. ಕಂಪನಿಯಲ್ಲಿ ಬಹಳ ಗಟ್ಟಿಯಾದ ಪರ್ಫಾರ್ಮೆನ್ಸ್ ಕಲ್ಚರ್ ನಿರ್ಮಿಸಬೇಕಾಗಿದೆ’ ಎಂದು ಕ್ವಾಲ್ಕಾಮ್ ಸಿಇಒ ಕ್ರಿಸ್ಟಿಯಾನೊ ಆಮೊನ್ ಅವರು ಕಳೆದ ತಿಂಗಳು ಮೆಮೊವೊಂದರಲ್ಲಿ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್ನ ಸಂಕಟ
ಬೆಂಗಳೂರು, ಹೈದರಾಬಾದ್, ಚೆನ್ನೈನಲ್ಲಿರುವ ಕ್ವಾಲ್ಕಾಮ್ ಉದ್ಯೋಗಿಗಳಿಗೆ ತಳಮಳ
ಅಮೆರಿಕದ ಚಿಪ್ ತಯಾರಕರಾದ ಕ್ವಾಲ್ಕಾಮ್ ಭಾರತದ ಕೆಲ ನಗರಗಳಲ್ಲಿ ಎಂಜಿನಿಯರಿಂಗ್ ಆಪರೇಷನ್ಸ್ ಹೊಂದಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಅದರ ಕಚೇರಿಗಳಿವೆ. ರೆಡ್ಡಿಟ್ನಲ್ಲಿ ಕೆಲವರು ಲೇ ಆಫ್ ಕುರಿತು ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಕ್ವಾಲ್ಕಾಮ್ನ ಆರ್ಎಫ್, ಬ್ಲೂಟೂತ್, ವೈಫೈ, ಸೆಟಲೈಟ್ ನ್ಯಾವಿಗೇಶನ್ ಟೆಕ್ನಾಲಜಿಗಳಲ್ಲಿ ಕೆಲಸ ಮಾಡುವ ತಂಡಗಳು ಬಾಧಿತವಾಗಿವೆ. ಬೆಂಗಳೂರಿನಲ್ಲಿ ಮೊದಲ ಕತ್ತರಿ ಶುರುವಾಗಿದೆ. ನಂತರ ಬೇರೆ ನಗರಗಳಲ್ಲಿರುವ ಉದ್ಯೋಗಿಗಳನ್ನು ಗುರಿ ಮಾಡಬಹುದು ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾ ಅಪ್ಡೇಟ್ಗಳಿಂದ ತಿಳಿದುಬರುತ್ತದೆ.
ರೆಡ್ಡಿಟ್ನಲ್ಲಿ ಒಬ್ಬರು ಹೇಳಿಕೊಂಡಿರುವ ಪ್ರಕಾರ, ಕಂಪನಿಯ ನಿರ್ದೇಶಕರೊಬ್ಬರು ಮತ್ತು ಎಚ್ಆರ್, ಈ ಇಬ್ಬರು ವಿಡಿಯೋ ಕಾನ್ಫೆರೆನ್ಸ್ ಮೂಲಕ ತಮ್ಮನ್ನು ಲೇ ಆಫ್ ಮಾಡಿದ್ದಾರೆ. ಕೆಲಸದಲ್ಲಿ ತನ್ನ ಪರ್ಫಾರ್ಮೆನ್ಸ್ ಉತ್ತಮವಾಗಿತ್ತು. ಬಡ್ತಿ ಕೂಡ ನಡೆಯುವುದಿತ್ತು. ಆದರೆ, ದಿಢೀರ್ ತಮ್ಮನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಈ ವ್ಯಕ್ತಿ ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: Amazon Layoffs: ಮೈಕ್ರೋಸಾಫ್ಟ್ನಲ್ಲಿ ಬ್ಲಡ್ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು
ಕೆಲಸ ಕಳೆದುಕೊಂಡ ಉದ್ಯೋಗಿಗೆ ಪರಿಹಾರವೆಷ್ಟು?
ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಭಾರತದಲ್ಲಿ ಲೇ ಆಫ್ ಆಗುವ ಉದ್ಯೋಗಿಗೆ ಮೂರು ತಿಂಗಳವರೆಗೆ ಸಂಬಳವನ್ನು ಪರಿಹಾರವಾಗಿ ನೀಡಲಾಗುತ್ತಿದೆ. ಮೂರು ದಿನದೊಳಗೆ ನಿರ್ಗಮನ ದಾಖಲೆಗಳಿಗೆ ಸಹಿಹಾಕಿದರೆ ಒಂದು ಹೆಚ್ಚುವರಿ ತಿಂಗಳ ವೇತನವೂ ಸಿಗಲಿದೆ. ಆದರೆ, ಎಲ್ಲರಿಗೂ ಏಕರೀತಿಯ ಪರಿಹಾರ ಇಲ್ಲ. ಅವರು ಕೆಲಸ ಮಾಡಿದ ಸೇವಾವಧಿ ಹಾಗು ಅವರ ಕೆಲಸದ ಸ್ಥಳ ಇತ್ಯಾದಿ ಮೇಲೆ ಅವಲಂಬಿತವಾಗಿರುತ್ತದೆ.
ರೆಡ್ಡಿಟ್ನಲ್ಲಿ ಬಂದ ಒಂದು ಪೋಸ್ಟ್
Layoffs and market adjustments
by
u/No_Evening7672 in
qualcomm
ಕ್ವಾಲ್ಕಾಮ್ ಲೇ ಆಫ್ ಮಾಡುತ್ತಿರುವುದು ಯಾಕೆ?
ವರದಿಗಳ ಪ್ರಕಾರ, ಸ್ಮಾರ್ಟ್ಫೋನ್ ಮಾರಾಟ ಕಡಿಮೆಗೊಂಡಿದೆ. ಇದರಿಂದ ಚಿಪ್ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಹಾಗೆಯೇ, ಮೆಮೊರಿ ಚಿಪ್ಗಳ ಬೆಲೆಗಳೂ ಏರುತ್ತಿವೆ. ಸ್ಮಾರ್ಟ್ಫೋನ್ ಹ್ಯಾಂಡ್ಸೆಟ್ಗಳು ಕ್ವಾಲ್ಕಾಮ್ಗೆ ಅತಿಹೆಚ್ಚು ಆದಾಯ ತಂದುಕೊಡುತ್ತಿದ್ದವು. ಈ ಆದಾಯದಲ್ಲಿ ಶೇ. 26ರಷ್ಟು ಕಡಿಮೆ ಆಗಿದೆ. ಈ ಕಾರಣಕ್ಕೆ ನಷ್ಟ ಸರಿದೂಗಿಸಲು ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುತ್ತಿರಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
