Hashtagintro

1779 ದಿನಗಳ ಪ್ರಶಸ್ತಿ ಬರ ನೀಗಿಸಲು ಭಾರತಕ್ಕೆ ಸುವರ್ಣಾವಕಾಶ; ಫೈನಲ್‌ನಲ್ಲಿ ಪಾಕ್ ಸವಾಲು

1779 ದಿನಗಳ ಪ್ರಶಸ್ತಿ ಬರ ನೀಗಿಸಲು ಭಾರತಕ್ಕೆ ಸುವರ್ಣಾವಕಾಶ; ಫೈನಲ್‌ನಲ್ಲಿ ಪಾಕ್ ಸವಾಲು

ಒಮಾನ್‌ನ ಅಲ್ ಅಮೆರಾತ್‌ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಡಿಸೆಂಬರ್ 14ರಂದು ನಡೆಯಲಿರುವ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟಕ್ಕೇರುವ ಅವಕಾಶವಿದೆ. ಬರೋಬ್ಬರಿ 1779 ದಿನಗಳ ಪ್ರಶಸ್ತಿ ಬರವನ್ನು ನೀಗಿಸುವ ಗುರಿಯೊಂದಿಗೆ ಯುವ ಆಟಗಾರರು ಕಣಕ್ಕಿಳಿಯಲಿದ್ದಾರೆ. ಭಾರತ ಕೊನೆಯ ಬಾರಿಗೆ ಐದು ವರ್ಷಗಳ ಹಿಂದೆ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದಿತ್ತು. ಇದೀಗ ಪಾಕಿಸ್ತಾನವನ್ನು ಮಣಿಸಿದರೆ ಭಾರತದ ಪ್ರಶಸ್ತಿ ಬರಕ್ಕೆ ತೆರೆ ಬೀಳಲಿದೆ.

ಭಾರತಕ್ಕೆ ಕಠಿಣ ಸವಾಲು

ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಗೆಲ್ಲುವುದು ಭಾರತಕ್ಕೆ ಸುಲಭದ ಕೆಲಸವಲ್ಲ. ಏಕೆಂದರೆ ಈ ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 3 ವಿಕೆಟ್‌ಗಳ ಸೋಲು ಕಂಡಿತ್ತು. ಪ್ರಸಕ್ತ ಟೂರ್ನಿಯಲ್ಲಿ ಭಾರತ ಅನುಭವಿಸಿದ ಏಕೈಕ ಸೋಲು ಕೂಡ ಪಾಕಿಸ್ತಾನದ ವಿರುದ್ಧವೇ ಬಂದಿತ್ತು. ಅಷ್ಟೇ ಅಲ್ಲ, ಹಿಂದಿನ ಆವೃತ್ತಿಯ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲೂ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಭಾರತ ಬರೋಬ್ಬರಿ 191 ರನ್‌ಗಳಿಂದ ಸೋಲು ಕಂಡಿತ್ತು. ಹೀಗಾಗಿ ಈ ಬಾರಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕಿದೆ.

ಅಫ್ಘನ್ ಮಣಿಸಿದ ಭಾರತ

ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಭಾರತ ಹೇಗೆ ಆಡಲಿದೆ ಎಂಬ ಕುತೂಹಲ ಒಂದೆಡೆಯಾದರೆ, ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 227 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು 37ನೇ ಓವರ್‌ನಲ್ಲೇ ಗೆಲುವಿನ ದಡ ಸೇರಿತು. ಭಾರತದ ಪರ ನಾಯಕ ಲಕ್ಷಯ್ ರಾಯ್‌ಚಂದಾನಿ 93 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಯವೀರ್ ಸೆಹ್ವಾಗ್ 51 ರನ್ ಗಳಿಸಿದರೆ, ವಿಕೆ ವಿನೀತ್ ಅಜೇಯ 57 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

4 ಪಂದ್ಯ, 303 ರನ್, 16 ಸಿಕ್ಸರ್; ಅಂಡರ್-19 ಏಷ್ಯಾಕಪ್‌ನಲ್ಲಿ ಸೆಹ್ವಾಗ್ ಪುತ್ರನ ಆರ್ಭಟ

ಬೌಲಿಂಗ್‌ನಲ್ಲೂ ಮಿಂಚಿದ ಯುವ ಆಟಗಾರರು

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಭಾರತೀಯ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ವೇಗದ ಬೌಲರ್ ಇಶಾನ್ ಸೂದ್ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಆರ್ಯನ್ ಸವ್ಸಾನಿ ಎರಡು ವಿಕೆಟ್ ಪಡೆದರು. ಇನ್ನು ಕಾವ್ಯಾ ಪಟೇಲ್, ಯಶವರ್ಧನ್ ಮತ್ತು ಅರ್ಜುನ್ ರಜಪೂತ್ ತಲಾ ಒಂದು ವಿಕೆಟ್ ಪಡೆದು ಅಫ್ಘಾನಿಸ್ತಾನದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಒಟ್ಟಿನಲ್ಲಿ ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತ, ಇದೀಗ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಅಂಡರ್-19 ಏಷ್ಯಾಕಪ್ ಟ್ರೋಫಿ ಎತ್ತಿಹಿಡಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language