
ಏಷ್ಯಾದ ಬ್ಯಾಟರ್ಗಳಿಗೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ (SENA ದೇಶಗಳು) ಪ್ರವಾಸ ಯಾವಾಗಲೂ ಅಗ್ನಿಪರೀಕ್ಷೆಯೇ ಸರಿ. ಈ ನಾಲ್ಕೂ ಕಠಿಣ ನೆಲಗಳಲ್ಲಿ ತಮ್ಮ ಛಾಪು ಮೂಡಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ನಲ್ಲಿ ಅಸಾಧ್ಯವಾದುದನ್ನು ಸಾಧಿಸಿದ್ದಾರೆ. ಆದರೆ, ಇವರಿಬ್ಬರ ನ್ಯೂಝಿಲೆಂಡ್ ಏಕದಿನ ಪಯಣ ಅಂತ್ಯಗೊಳ್ಳುವ ಹೊತ್ತಿಗೆ, SENA ದೇಶಗಳ ಪರಿಪೂರ್ಣ ದಾಖಲೆಯ ಪಟ್ಟಿಯಲ್ಲಿ ಇಬ್ಬರಿಗೂ ತಲಾ ಒಂದೊಂದು ಮೈಲಿಗಲ್ಲು ಕೇವಲ ಕೂದಲಳೆಯ ಅಂತರದಲ್ಲಿ ಕೈತಪ್ಪಿ ಹೋಗಿದೆ. ಆ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ…
SENA ದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಯಾವಾಗಲೂ ದೊಡ್ಡ ಸವಾಲಾಗಿರುತ್ತದೆ. ಅಲ್ಲಿನ ವೇಗ ಮತ್ತು ಬೌನ್ಸ್ ಪಿಚ್ಗಳಿಗೆ ಹೊಂದಿಕೊಂಡು ಶತಕ ಬಾರಿಸುವುದು ಅಥವಾ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವುದು ಶ್ರೇಷ್ಠತೆಯ ಸಂಕೇತವಾಗಿದೆ.
- ಎಲ್ಲಾ SENA ದೇಶಗಳಲ್ಲಿ ಏಕದಿನ ಶತಕ ಬಾರಿಸಿದ ಭಾರತೀಯರು: ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಮಾತ್ರ ಈ ಸಾಧನೆ ಮಾಡಿದ್ದಾರೆ.
- ಎಲ್ಲಾ SENA ದೇಶಗಳಲ್ಲಿ ಏಕದಿನ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಗೆದ್ದ ಭಾರತೀಯರು: ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಈ ವಿಶೇಷ ಪಟ್ಟಿಯಲ್ಲಿದ್ದಾರೆ.
‘ರೋ-ಕೊ’ ಜೋಡಿಯ ಕನಸು ನುಚ್ಚು ನೂರು:
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ SENA ದೇಶಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದರೂ, ನ್ಯೂಝಿಲೆಂಡ್ ನೆಲದಲ್ಲಿ ಮಾತ್ರ ಅವರಿಗೆ ಒಂದು ಸಣ್ಣ ಕೊರತೆ ಹಾಗೆಯೇ ಉಳಿದುಬಿಟ್ಟಿದೆ.
- ರೋಹಿತ್ ಶರ್ಮಾ ಅವರ ಶತಕದ ಕನಸು: ರೋಹಿತ್ ಶರ್ಮಾ ಸೌತ್ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಏಕದಿನ ಶತಕಗಳನ್ನು ಸಿಡಿಸಿದ್ದಾರೆ. ಆದರೆ ನ್ಯೂಝಿಲೆಂಡ್ ನೆಲದಲ್ಲಿ ಅವರಿಗೆ ಒಂದೇ ಒಂದು ಏಕದಿನ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ.
- ವಿರಾಟ್ ಕೊಹ್ಲಿ ಅವರ ಪಂದ್ಯಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ ನ್ಯೂಝಿಲೆಂಡ್ನಲ್ಲಿ ಏಕದಿನ ಶತಕ ಬಾರಿಸಿದ್ದರೂ, ಅಲ್ಲಿ ಒಮ್ಮೆಯೂ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾಗಲಿಲ್ಲ. ಉಳಿದ ಮೂರು SENA ದೇಶಗಳಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದಾರೆ.
ಅಂದರೆ, ಈ ಬಾರಿಯ ಸರಣಿಯ ಮೂಲಕ ಈ ಇಬ್ಬರೂ ದಿಗ್ಗಜರು ತಮ್ಮ ವೃತ್ತಿಜೀವನದ ಬಹುದೊಡ್ಡ ಮೈಲಿಗಲ್ಲನ್ನು ತಲುಪಲಿದ್ದಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಆಡಿದ 4 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಫಲರಾಗಿದ್ದಾರೆ.
- ನ್ಯೂಝಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 7 ರನ್ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ 5 ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.
ಕಿವೀಸ್ ನಾಡಿನಲ್ಲಿ ಯುಗಾಂತ್ಯ:
ವಯಸ್ಸು ಮತ್ತು ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ನೋಡಿದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದು ನ್ಯೂಝಿಲೆಂಡ್ ನೆಲದಲ್ಲಿ ಕೊನೆಯ ಏಕದಿನ ಸರಣಿಯಾಗಿದೆ. ಈ ಇಬ್ಬರು ದಿಗ್ಗಜರು ಒಟ್ಟಾಗಿ ಆಡಿದ ಈ ಸರಣಿಯಲ್ಲಿ ತಮ್ಮ ಹೆಸರಿನ ಮುಂದಿದ್ದ ಆ ಒಂದು ‘ಶೂನ್ಯ’ವನ್ನು ಅಳಿಸಿಹಾಕುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.
ಇದನ್ನೂ ಓದಿ: ಹೊಸ ಚರ್ಚೆ ಹುಟ್ಟುಹಾಕಿದ ಟೀಮ್ ಇಂಡಿಯಾದ ಆಕ್ರಮಣಕಾರಿ ಸಂಭ್ರಮಾಚರಣೆ!
ಆದರೆ ಕ್ರಿಕೆಟ್ ಅನಿಶ್ಚಿತತೆಗಳ ಆಟ. ಎಲ್ಲಾ ದಾಖಲೆಗಳನ್ನು ಯಾರಿಂದಲೂ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಈ ಎರಡು ಸಣ್ಣ ಮೈಲಿಗಲ್ಲುಗಳು ಕೈತಪ್ಪಿದರೂ, ವಿಶ್ವ ಕ್ರಿಕೆಟ್ನಲ್ಲಿ ಮತ್ತು ವಿದೇಶಿ ಪಿಚ್ಗಳಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನೀಡಿರುವ ಕೊಡುಗೆ ಎಂದಿಗೂ ಅಜರಾಮರ.
Source: TV9 Kannada Sports
