
ಹಾಲಿವುಡ್ನ ಬಹುನಿರೀಕ್ಷಿತ ಹಾಗೂ ಅತ್ಯಂತ ಜನಪ್ರಿಯ ‘ಜೇಮ್ಸ್ ಬಾಂಡ್’ ಫ್ರಾಂಚೈಸಿಯ 26ನೇ ಸಿನಿಮಾಗೆ ಸಂಬಂಧಿಸಿದಂತೆ ಅಚ್ಚರಿಯ ಹಾಗೂ ರೋಚಕ ಸುದ್ದಿಯೊಂದು ಹೊರಬಿದ್ದಿದೆ. ಡೇನಿಯಲ್ ಕ್ರೇಗ್ ಅವರ ನಂತರದಲ್ಲಿ ಖ್ಯಾತ ನಟ ರಾಬರ್ಟ್ ಪ್ಯಾಟಿನ್ಸನ್ ಅವರು ಹೊಸ ಜೇಮ್ಸ್ ಬಾಂಡ್ ಆಗಿ ಆಯ್ಕೆಯಾಗಿದ್ದಾರೆ ಎಂದು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಈ ಮೂಲಕ ಅವರು ಜೇಮ್ಸ್ ಬಾಂಡ್ ಪಾತ್ರವನ್ನು ನಿರ್ವಹಿಸಲಿರುವ 7ನೇ ನಟ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಬಾಂಡ್ ಪಾತ್ರಕ್ಕೆ ರಾಬರ್ಟ್ ಪ್ಯಾಟಿನ್ಸನ್ ಆಯ್ಕೆಯಾಗಿರುವುದು ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ದಿಗ್ಗಜ ನಟ ಬ್ರಾಡ್ ಪಿಟ್ ನೀಡಿರುವ ಹೇಳಿಕೆ ಹಾಲಿವುಡ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
‘ಕಾಂಪ್ಲೆಕ್ಸ್’ ಜತೆಗಿನ ಸಂದರ್ಶನದಲ್ಲಿ ರಾಬರ್ಟ್ ಪ್ಯಾಟಿನ್ಸನ್ ಅವರ ಆಯ್ಕೆಯ ಬಗ್ಗೆ ಮಾತನಾಡಿದ ಬ್ರಾಡ್ ಪಿಟ್, ರಾಬರ್ಟ್ ಅವರ ನಟನಾ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಇದು ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ. ಅವರು ಮಾಡುತ್ತಿರುವ ಕೆಲಸಗಳು ನನಗೆ ತುಂಬಾ ಇಷ್ಟ. ಅವರು ಅತ್ಯಂತ ಕುತೂಹಲಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಬ್ರಾಡ್ ಪಿಟ್ ಪ್ರಶಂಸಿಸಿದ್ದಾರೆ.
View this post on Instagram
ಇದೇ ವೇಳೆ ಸಂದರ್ಶನದಲ್ಲಿ, ಚಿತ್ರದಲ್ಲಿ ಬಾಂಡ್ ವಿರೋಧಿ ಪಾತ್ರದಲ್ಲಿ ಯಾರು ನಟಿಸಿದರೆ ಚೆನ್ನಾಗಿರುತ್ತದೆ ಎಂದು ಕೇಳಿದಾಗ, ಬ್ರಾಡ್ ಪಿಟ್ ತಾವೇ ಖಳನಾಯಕನಾಗಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ‘ಬಾಂಡ್ ಗರ್ಲ್ ಪಾತ್ರಕ್ಕೆ ನಾನೇನು ಹೇಳಲಿ? ಆದರೆ ವಿಲನ್ ಪಾತ್ರಕ್ಕೆ ನನ್ನನ್ನು ಸೈನ್ ಮಾಡಿಕೊಳ್ಳುವಂತೆ ನಿರ್ದೇಶಕರಿಗೆ ತಿಳಿಸಿ’ ಎಂದು ಬ್ರಾಡ್ ಪಿಟ್ ಉತ್ಸಾಹದಿಂದ ಹೇಳಿದ್ದಾರೆ.
ಬ್ರಾಡ್ ಪಿಟ್ ಅವರ ಈ ಹೇಳಿಕೆ ಹೊರಬಿದ್ದ ತಕ್ಷಣ ಜಾಲತಾಣಗಳಲ್ಲಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ‘ಬ್ರಾಡ್ ಪಿಟ್ ವಿಲನ್ ಆದರೆ ಸಿನಿಮಾ ಬೇರೆ ಲೆವೆಲ್ಗೆ ಹೋಗುತ್ತದೆ’, ‘ಅವರಿಗೆ ಯಾವುದೇ ಆಡಿಷನ್ ಬೇಕಿಲ್ಲ, ಬ್ರಾಡ್ ಪಿಟ್ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ’ ಎಂದು ಅಭಿಮಾನಿಗಳು ಕಾಮೆಂಟ್ಗಳ ಮೂಲಕ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಇವರೇ ನೋಡಿ ಹೊಸ ಜೇಮ್ಸ್ ಬಾಂಡ್, ಆಯ್ಕೆ ಅಧಿಕೃತ
ಜೇಮ್ಸ್ ಬಾಂಡ್ ಸರಣಿಯಲ್ಲಿ ನಾಯಕರಷ್ಟೇ ವಿಲನ್ಗಳ ಪಾತ್ರಗಳೂ ಕೂಡ ಪ್ರಮುಖ ಹಾಗೂ ಸ್ಮರಣೀಯವಾಗಿರುತ್ತವೆ. ಸರಣಿಯ ಮುಂದಿನ ಚಿತ್ರದಲ್ಲಿ ರಾಬರ್ಟ್ ಪ್ಯಾಟಿನ್ಸನ್ ಮತ್ತು ಬ್ರಾಡ್ ಪಿಟ್ ಮುಖಾಮುಖಿಯಾದರೆ, ಅದು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯ ಈ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗಗನಕ್ಕೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
