
ಕಾಬೂಲ್, ಅಕ್ಟೋಬರ್ 18: ಅಫ್ಘಾನಿಸ್ತಾನದಲ್ಲಿ 2021 ರಲ್ಲಿ ತಾಲಿಬಾನ್ ಪಡೆ ಅಧಿಕಾರ ವಹಿಸಿಕೊಂಡ ನಂತರದ ಐದು ವರ್ಷಗಳ ಅವಧಿಯಲ್ಲಿ ಸುಮಾರು 2.6 ಮಿಲಿಯನ್‌ಗಿಂತಲೂ (26 ಲಕ್ಷಕ್ಕೂ ಹೆಚ್ಚು) ಅಧಿಕ ಬಾಲಕಿಯರು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್)ಕಳವಳಕಾರಿ ವರದಿ ಬಿಡುಗಡೆ ಮಾಡಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಮಾಧ್ಯಮಿಕ ಹಾಗೂ ವಿಶ್ವವಿದ್ಯಾಲಯ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಏಕೈಕ ದೇಶ ಅಫ್ಘಾನಿಸ್ತಾನವಾಗಿದೆ.
ಸೆಪ್ಟೆಂಬರ್ 2021: 6 ನೇ ತರಗತಿಯ ನಂತರ ಬಾಲಕಿಯರು ಔಪಚಾರಿಕ ಶಿಕ್ಷಣ ಪಡೆಯುವುದನ್ನು ಅಧಿಕೃತವಾಗಿ ನಿಷೇಧಿಸಲಾಯಿತು.
ಡಿಸೆಂಬರ್ 2022: ಮಹಿಳೆಯರು ಕಾಲೇಜು ಹಾಗೂ ವಿಶ್ವವಿದ್ಯಾಲಯ ಪ್ರವೇಶಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಯಿತು.
ದೀರ್ಘಾವಧಿ ನಷ್ಟ: ತರಗತಿಯಿಂದ ಸತತ ಐದು ವರ್ಷಗಳ ಕಾಲ ಹೊರಗುಳಿದಿರುವುದು ಒಂದು ಇಡೀ ಪೀಳಿಗೆಯ ಬಾಲಕಿಯರ ಭವಿಷ್ಯವನ್ನು ಶಾಶ್ವತವಾಗಿ ಕಸಿದುಕೊಂಡಂತಾಗಿದೆ ಎಂದು ಯುನಿಸೆಫ್ ಬಣ್ಣಿಸಿದೆ. ಶಾಲೆಗಳಿಂದ ವಂಚಿತರಾಗಿರುವ ಬಾಲಕಿಯರು ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಾನವ ಕಳ್ಳಸಾಗಣೆ, ಶೋಷಣೆ ಮತ್ತು ಲಿಂಗ ಆಧಾರಿತ ದೌರ್ಜನ್ಯಗಳಿಗೆ ಬಲಿಯಾಗುವ ಅಪಾಯ ತೀವ್ರಗೊಂಡಿದೆ.
ಇದನ್ನೂ ಓದಿ:
ಪಾಕಿಸ್ತಾನದಲ್ಲಿ ತಾಲಿಬಾನ್ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ
2023 ರಿಂದ ಈಚೆಗೆ ನೆರೆಯ ಇರಾನ್ ಮತ್ತು ಪಾಕಿಸ್ತಾನದಿಂದ ಸುಮಾರು 27 ಲಕ್ಷ ಜನರು ಬಲವಂತವಾಗಿ ಅಫ್ಘಾನಿಸ್ತಾನಕ್ಕೆ ಮರಳಿದ್ದು, ಇವರಲ್ಲಿ ಶೇ. 60 ರಷ್ಟು ಮಕ್ಕಳು ಹಾಗೂ ಯುವಕರೇ ಆಗಿದ್ದಾರೆ. ಮನೆಯ ಬಡತನ ಹಾಗೂ ಸ್ಥಳಾಂತರದ ನಡುವೆ ಹೆಣ್ಣುಮಕ್ಕಳ ರಕ್ಷಣೆ ಸಂಪೂರ್ಣವಾಗಿ ಕುಸಿದಿದೆ. ದೇಶದ ಇತಿಹಾಸದಲ್ಲಿ 5 ವರ್ಷ ಚಿಕ್ಕದಿರಬಹುದು, ಆದರೆ ಬೆಳೆಯುವ ಬಾಲಕಿಯ ಜೀವನದಲ್ಲಿ ಇದು ಅತ್ಯಂತ ನಿರ್ಣಾಯಕ ಘಟ್ಟ. ತರಗತಿ ಕೊಠಡಿ ಬರೀ ಕಲಿಕೆಯ ಜಾಗವಲ್ಲ, ಅದು ಬಾಲ್ಯವಿವಾಹ, ಹಿಂಸೆ ಮತ್ತು ಶೋಷಣೆಯ ವಿರುದ್ಧ ಹೆಣ್ಣುಮಕ್ಕಳಿಗೆ ನೀಡುವ ರಕ್ಷಣಾ ಕವಚವಾಗಿತ್ತು. ಶಾಲೆ ಮುಚ್ಚಿದ್ದರಿಂದ ಆ ರಕ್ಷಣೆ ಮಾಯವಾಗಿದೆ” ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಮತ್ತು ಆರೋಗ್ಯ ವ್ಯವಸ್ಥೆಯ ಮೇಲಿನ ಹೊಡೆತ
ಆರ್ಥಿಕ ನಷ್ಟ: ಯುನಿಸೆಫ್‌ನ ‘ಬಾಲಕಿಯರ ಶಿಕ್ಷಣ ಮತ್ತು ಮಹಿಳಾ ಕಾರ್ಮಿಕ ಬಲ’ ವಿಶ್ಲೇಷಣೆಯ ಪ್ರಕಾರ, ಮಹಿಳೆಯರ ಶಿಕ್ಷಣ ಹಾಗೂ ಉದ್ಯೋಗ ನಿರ್ಬಂಧಗಳಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆಗೆ ವಾರ್ಷಿಕ ಕನಿಷ್ಠ 84 ಮಿಲಿಯನ್ ಅಮೆರಿಕನ್ ಡಾಲರ್ ಉತ್ಪಾದನಾ ನಷ್ಟವಾಗುತ್ತಿದೆ. 2030 ರ ವೇಳೆಗೆ ದೇಶದಲ್ಲಿ 20,000 ಮಹಿಳಾ ಶಿಕ್ಷಕಿಯರು ಮತ್ತು 5,400 ಮಹಿಳಾ ಆರೋಗ್ಯ ಕಾರ್ಯಕರ್ತೆಯರ ತೀವ್ರ ಕೊರತೆ ಎದುರಾಗಲಿದೆ. ಮೂಲಭೂತ ಶಿಕ್ಷಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಶಿಕ್ಷಕಿಯರ ಸಂಖ್ಯೆ 2022 ರಲ್ಲಿ 73,000 ಇದ್ದದ್ದು, 2024 ರ ವೇಳೆಗೆ 66,000 ಕ್ಕೆ (ಶೇ. 9 ಕ್ಕಿಂತ ಹೆಚ್ಚು ಕುಸಿತ) ಇಳಿದಿದೆ.
ನಾಗರಿಕ ಸೇವೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಶೇ. 21 ರಿಂದ ಶೇ. 17.7 ಕ್ಕೆ ಕುಸಿದಿದೆ. ಅಕ್ಷರಸ್ಥ ತಾಯಂದಿರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ನವಜಾತ ಶಿಶುಗಳಲ್ಲಿ ಕಡಿಮೆ ತೂಕ, ಅಪೌಷ್ಟಿಕತೆ, ಲಸಿಕೆಗಳ ಕೊರತೆ ಮತ್ತು ಬೆಳವಣಿಗೆ ಕುಂಠಿತಗೊಳ್ಳುವ ಪ್ರಕರಣಗಳು ಹೆಚ್ಚಾಗಲಿದ್ದು, ದೇಶದ ಮುಂದಿನ ಪೀಳಿಗೆಯ ಆರೋಗ್ಯ ವ್ಯವಸ್ಥೆಯೇ ಅಪಾಯದಂಚಿಗೆ ತಲುಪಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada World
