Hashtagintro

‘ಆರ್‌ಸಿಬಿಯ ಜನಪ್ರಿಯತೆ, ಅಷ್ಟೊಂದು ಹಣ’; ಕಷ್ಟದ ದಿನಗಳನ್ನು ನೆನೆದ ರೇಣುಕಾ

‘ಆರ್‌ಸಿಬಿಯ ಜನಪ್ರಿಯತೆ, ಅಷ್ಟೊಂದು ಹಣ’; ಕಷ್ಟದ ದಿನಗಳನ್ನು ನೆನೆದ ರೇಣುಕಾ

ಭಾರತ ಮಹಿಳಾ ತಂಡದ ಅನುಭವಿ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಪ್ರಸ್ತುತ ತಂಡದಿಂದ ಹೊರಗಿದ್ದಾರೆ. ಕಳೆದೊಂದು ವರ್ಷದಿಂದ ಅವರಿಗೆ ತಂಡದಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಈ ನಡುವೆ ಫಿಲ್ಮಿಜ್ಞಾನಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ರೇಣುಕಾ, ಗಾಯದ ಸಮಸ್ಯೆ ಹಾಗೂ ಸತತ ಕಳಪೆ ಪ್ರದರ್ಶನದಿಂದಾಗಿ ಆ ಸಂದರ್ಭದಲ್ಲಿ ತಾವು ಮಾನಸಿಕವಾಗಿ ಸಾಕಷ್ಟು ಕುಗ್ಗಿಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡದ ಪರ ಆಡಿದ ಆವೃತ್ತಿಗಳಲ್ಲಿ ಎದುರಿಸಿದ ಸವಾಲುಗಳು, ಕಳಪೆ ಪ್ರದರ್ಶನದಿಂದ ಉಂಟಾದ ಒತ್ತಡದ ಬಗ್ಗೆಯೂ ರೇಣುಕಾ ಮಾತನಾಡಿದ್ದಾರೆ.

ಕುಗ್ಗಿ ಹೋಗಿದ್ದ ರೇಣುಕಾ

ರೇಣುಕಾ ಡಬ್ಲ್ಯುಪಿಎಲ್​ನ ಮೊದಲ ಮೂರು ಆವೃತ್ತಿಗಳನ್ನು ಆರ್​ಸಿಬಿ ಪರ ಆಡಿದ್ದರು. ಆದರೆ ಮೊದಲೆರಡು ಆವೃತ್ತಿಗಳಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಇದರಿಂದ ಕುಗ್ಗಿ ಹೋಗಿದ್ದ ರೇಣುಕಾ, ಒಂದು ಹಂತದಲ್ಲಿ ತಮ್ಮಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರದಿಂದ ಕ್ರಿಕೆಟ್ ಆಡುವುದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು. ಈ ವಿಚಾರವನ್ನು ಅವರು ತಂಡದ ನಾಯಕಿ ಸ್ಮೃತಿ ಮಂದಾನಾ ಅವರ ಬಳಿಯೂ ಹೇಳಿಕೊಂಡಿದ್ದರು.

ಆರ್‌ಸಿಬಿ ಸತತವಾಗಿ ಪಂದ್ಯಗಳನ್ನು ಸೋಲುತ್ತಿದ್ದರೆ, ಮತ್ತೊಂದೆಡೆ ನಾಯಕಿ ಸ್ಮೃತಿ ಮಂದಾನಾ ಅವರ ಬ್ಯಾಟಿಂಗ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಅವರು ಸುಮಾರು 18ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಪರಿಣಾಮ ತಂಡ ಮೊದಲ ಸುತ್ತನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಈ ಕಠಿಣ ಸಮಯದಲ್ಲಿ ಸ್ಮೃತಿ ಮಂದಾನಾ ಅವರೊಂದಿಗೆ ನಡೆದ ಮಾತುಕತೆಯನ್ನು ರೇಣುಕಾ ಸಿಂಗ್ ಫಿಲ್ಮಿಜ್ಞಾನಕ್ಕೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ದಯವಿಟ್ಟು ನನ್ನನ್ನು ಮನೆಗೆ ಕಳುಹಿಸಿ

‘ನಾನು ಸ್ಮೃತಿ ಬಳಿ ಹೋಗಿ, ಸ್ಮೃತಿ, ನನ್ನಿಂದ ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಕ್ರಿಕೆಟ್ ಆಡಲು ನನಗೆ ಇಷ್ಟವಿಲ್ಲ ಎಂದು ಹೇಳಿದೆ. ಅದಕ್ಕೆ ಸ್ಮೃತಿ ಕೂಡ, ನನ್ನಿಂದಲೂ ಉತ್ತಮ ಪ್ರದರ್ಶನ ಬರುತ್ತಿಲ್ಲ ಎಂದು ಉತ್ತರಿಸಿದರು. ಆದರೆ ದಿನ ಕಳೆದಂತೆ ನನ್ನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ನಾನು ಮತ್ತೆ ಸ್ಮೃತಿ ಬಳಿ ಹೋಗಿ, ಯಾರ್, ನನಗೆ ಆಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಮನೆಗೆ ಕಳುಹಿಸಿ. ನನ್ನಿಂದ ಇದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಕೇಳಿಕೊಂಡೆ. ಆದರೆ ಸ್ಮೃತಿ ಮಂಧಾನ ನನ್ನನ್ನು ಸುಮ್ಮನೆ ಮನೆಗೆ ಕಳುಹಿಸಲಿಲ್ಲ. ಬದಲಿಗೆ ನನ್ನೊಂದಿಗೆ ಕುಳಿತು ಮಾತನಾಡಿ, ವೃತ್ತಿಜೀವನದ ಮಹತ್ವವನ್ನು ತಿಳಿಸಿಕೊಟ್ಟರು. ಸ್ಮೃತಿ ನೀಡಿದ ಆ ಸಲಹೆಯೇ ನನ್ನನ್ನು ಕ್ರಿಕೆಟ್‌ನಲ್ಲಿ ಮುಂದುವರಿಯುವಂತೆ ಮಾಡಿತು ಎಂದು ರೇಣುಕಾ ಹೇಳಿದ್ದಾರೆ.

ಅಷ್ಟೊಂದು ಹಣವನ್ನು ಪಡೆದಿರಲಿಲ್ಲ

ಆರ್‌ಸಿಬಿ ತಂಡ ಅವರನ್ನು ಖರೀದಿಸಲು ನೀಡಿದ್ದ ದೊಡ್ಡ ಮೊತ್ತವೂ ರೇಣುಕಾ ಅವರ ಮೇಲಿನ ಒತ್ತಡವನ್ನು ಹೆಚ್ಚಿಸಿತ್ತು ಎಂಬುದನ್ನು ಅವರೇ ಹೇಳಿಕೊಂಡಿದ್ದು, ‘ನಾನು ಹಿಂದೆಂದೂ ಅಷ್ಟೊಂದು ಹಣವನ್ನು ಪಡೆದಿರಲಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ತಂಡ ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿದೆ. ಆದರೆ ನನ್ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಯೋಚನೆ ಕಾಡುತ್ತಿತ್ತು. ತಂಡವೂ ಪಂದ್ಯಗಳನ್ನು ಗೆಲ್ಲುತ್ತಿರಲಿಲ್ಲ. ಇದೆಲ್ಲವೂ ನನ್ನ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು’ ಎಂದು ರೇಣುಕಾ ಹೇಳಿದ್ದಾರೆ.

2024ರ ಆವೃತ್ತಿಯಲ್ಲೂ ಅವರ ಕಳಪೆ ಪ್ರದರ್ಶನ ಮುಂದುವರಿದಿತ್ತು. ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆಯಲಷ್ಟೇ ಸಾಧ್ಯವಾಗಿತ್ತು. ಆದರೆ ಮುಂದಿನ ಆವೃತ್ತಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಅವರು, ಏಳು ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದರು. 2026ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ರೇಣುಕಾ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಬಳಿಕ ಗುಜರಾತ್ ಜೈಂಟ್ಸ್ ತಂಡ 60 ಲಕ್ಷ ರೂಪಾಯಿ ನೀಡಿ ಅವರನ್ನು ಖರೀದಿಸಿತು. ಇದರೊಂದಿಗೆ ಬೆಂಗಳೂರಿನಲ್ಲಿ ಮೂರು ಆವೃತ್ತಿಗಳ ಕಾಲ ಆಡಿದ್ದ ಅವರ ಪಯಣ ಅಂತ್ಯಗೊಂಡಿತು.

ಭಾರತ ತಂಡಕ್ಕೆ ಭುವನೇಶ್ವರ್ ಆಯ್ಕೆ; ತಲೆಕೆಳಗಾಯ್ತು ಆರ್​ಸಿಬಿ ಲೆಕ್ಕಾಚಾರ..!

ತಮ್ಮ ಮೇಲಿನ ಒತ್ತಡಕ್ಕೆ ಮತ್ತೊಂದು ಕಾರಣ

ಆರ್‌ಸಿಬಿ ತಂಡಕ್ಕಿದ್ದ ಅಪಾರ ಅಭಿಮಾನಿ ಬಳಗವೂ ತಮ್ಮ ಮೇಲಿನ ಒತ್ತಡಕ್ಕೆ ಮತ್ತೊಂದು ಕಾರಣವಾಗಿತ್ತು ಎಂದು ರೇಣುಕಾ ಹೇಳಿದ್ದಾರೆ. ಎರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವುದು ಕಷ್ಟವಾಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ‘ಆರ್‌ಸಿಬಿಯಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಆ ತಂಡಕ್ಕಿರುವ ಅಭಿಮಾನಿಗಳ ಸಂಖ್ಯೆ ತುಂಬಾ ದೊಡ್ಡದು. ಆರ್‌ಸಿಬಿ ಪರ ಆಡಿದ ಎರಡು ಆವೃತ್ತಿಗಳು ನನಗೆ ಉತ್ತಮವಾಗಿರಲಿಲ್ಲ. ನಾವು ಉತ್ತಮವಾಗಿ ಆಡದಿದ್ದಾಗ ಸಹಜವಾಗಿಯೇ ಒತ್ತಡ ಎದುರಾಗುತ್ತದೆ. ಅದರಲ್ಲೂ ಅಭಿಮಾನಿಗಳ ನಿರೀಕ್ಷೆ ಹೆಚ್ಚಿರುವಾಗ ಈ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಆದರೆ ಆರ್‌ಸಿಬಿ ತಂಡದ ವಾತಾವರಣದ ಬಗ್ಗೆ ರೇಣುಕಾ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾಯಕಿ ಸ್ಮೃತಿ ಮಂದಾನಾ ತಂಡದಲ್ಲಿ ಉತ್ತಮ ವಾತಾವರಣ ನಿರ್ಮಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಜರಾತ್ ಜೈಂಟ್ಸ್ ತಂಡದಲ್ಲಿಯೂ ಇದೇ ರೀತಿಯ ಉತ್ತಮ ವಾತಾವರಣವಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language