
ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 2018ರ ‘ಸ್ಯಾಂಡ್‌ಪೇಪರ್ ಗೇಟ್’ (ಚೆಂಡು ವಿರೂಪಗೊಳಿಸಿದ) ಹಗರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅತ್ಯಂತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯ ನಡುವೆಯೇ ಬಂದಿರುವ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಪ್ರೈಮ್ ವಿಡಿಯೋದ ‘ದಿ ಮಿಡಲ್ ವಿತ್ ವ್ಯಾಟೋ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಲ್ಯಾಂಗರ್, ಅಂದು ಶಿಕ್ಷೆಗೆ ಒಳಗಾಗಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಕೇವಲ ಆಸ್ಟ್ರೇಲಿಯಾ ತಂಡಕ್ಕಾಗಿ ಮಾತ್ರವಲ್ಲ, ಇಡೀ ವಿಶ್ವದ ಕ್ರಿಕೆಟಿಗರಿಗಾಗಿ ಬಲಿಯಾದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳ್ಳಾಟದಲ್ಲಿ ಎಲ್ಲರೂ ಭಾಗಿಯಾಗಿದ್ದರು!
ಹಗರಣದ ಬಗ್ಗೆ ಮುಕ್ತವಾಗಿ ಮಾತನಾಡಿದ ಜಸ್ಟನ್ ಲ್ಯಾಂಗರ್, “ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಕೇವಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತಪ್ಪಿಗಾಗಿ ಶಿಕ್ಷೆ ಅನುಭವಿಸಲಿಲ್ಲ. ಅವರು ಇಡೀ ವಿಶ್ವದ ಕ್ರಿಕೆಟಿಗರಿಗಾಗಿ ಬಲಿಯಾದರು. ಅಂದರೆ, ಚೆಂಡನ್ನು ವಿರೂಪಗೊಳಿಸುವ ಅಭ್ಯಾಸ ಕೇವಲ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ವಿಶ್ವದ ಬಹುತೇಕ ಎಲ್ಲಾ ತಂಡಗಳು ಇದನ್ನು ಮಾಡುತ್ತಿದ್ದವು. ಅಂದರೆ ಚೆಂಡು ವಿರೂಪಗೊಳಿಸಿ ಆಡುವ ಕಳ್ಳಾಟದಲ್ಲಿ ಎಲ್ಲರೂ ಭಾಗಿಯಾಗಿದ್ದರು ” ಎಂದು ಲ್ಯಾಂಗರ್ ಹೇಳಿದ್ದಾರೆ.
‘ಸ್ಯಾಂಡ್‌ಪೇಪರ್ ಗೇಟ್’ ವಿಡಿಯೋ:
‘ರಿವರ್ಸ್ ಸ್ವಿಂಗ್’ ಮಾಯವಾಗಿದ್ದೇಕೆ?
ತಮ್ಮ ವಾದಕ್ಕೆ ಪೂರಕವಾಗಿ ಜಸ್ಟಿನ್ ಲ್ಯಾಂಗರ್ ಒಂದು ಆಸಕ್ತಿದಾಯಕ ಅಂಶವನ್ನು ಎತ್ತಿ ತೋರಿಸಿದ್ದಾರೆ. “ಆ ಘಟನೆಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ‘ರಿವರ್ಸ್ ಸ್ವಿಂಗ್’ ಎಂಬ ಕಲೆಯೇ ಸಂಪೂರ್ಣವಾಗಿ ನಾಶವಾಯಿತು. ಯಾಕೆ ಗೊತ್ತಾ? ಅಂದು ಆಸ್ಟ್ರೇಲಿಯಾ ಆಟಗಾರರಿಗೆ ನೀಡಿದ ಕಠಿಣ ಶಿಕ್ಷೆಯನ್ನು ನೋಡಿ ವಿಶ್ವದ ಉಳಿದ ತಂಡಗಳು ಹೆದರಿದವು.
“ಅಂದರೆ ಚೆಂಡನ್ನು ವಿರೂಪಗೊಳಿಸಿ ಅಕ್ರಮವಾಗಿ ಬಾಲ್ ಅನ್ನು ಮೈಂಟೇನ್ ಮಾಡುವ ಸಾಹಸಕ್ಕೆ ಯಾರೂ ಕೈಹಾಕಲಿಲ್ಲ. ಹೀಗಾಗಿಯೇ ಅಂದಿನಿಂದ ಇಂದಿನವರೆಗೆ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವಿಂಗ್ ಕಾಣಿಸುತ್ತಿಲ್ಲ” ಎಂದು ಲ್ಯಾಂಗರ್ ಪ್ರತಿಪಾದಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅಂದು ಹೇಳಿದ್ದ “ಗಾಜಿನ ಮನೆಯಲ್ಲಿರುವವರು ಇತರರ ಮೇಲೆ ಕಲ್ಲು ಎಸೆಯಬಾರದು” ಎಂಬ ಮಾತನ್ನು ನೆನಪಿಸಿದ ಲ್ಯಾಂಗರ್, ಬೇರೆ ದೇಶಗಳೂ ಇದನ್ನೇ ಮಾಡುತ್ತಿದ್ದವು ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.
ಸೌತ್ ಅಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಆಕ್ರೋಶ:
‘ಸ್ಯಾಂಡ್‌ಪೇಪರ್ ಗೇಟ್’ ಪ್ರಕರಣದ ಬಳಿಕ ಅಂದು ಆಸ್ಟ್ರೇಲಿಯಾ ಆಟಗಾರರನ್ನು ಇತರೆ ದೇಶದವರು ನಡೆಸಿಕೊಂಡ ರೀತಿಯ ಬಗ್ಗೆ ಜಸ್ಟಿನ್ ಲ್ಯಾಂಗರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ
ಸೌತ್ ಆಫ್ರಿಕಾದ ಡಾಕ್ಯುಮೆಂಟರಿ: ಈ ಹಗರಣದ ಬಗ್ಗೆ ಸೌತ್ ಆಫ್ರಿಕಾದವರು ಮಾಡಿದ ಡಾಕ್ಯುಮೆಂಟರಿಯನ್ನು ನೋಡಿದಾಗ ನನಗೆ ವಾಂತಿ ಬಂದಂತಾಗಿತ್ತು. ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಅಣಕದ ವರ್ತನೆ ಅಸಹ್ಯವಾಗಿತ್ತು ಎಂದು ಲ್ಯಾಂಗರ್ ಕಿಡಿಕಾರಿದ್ದಾರೆ.
ಇಂಗ್ಲೆಂಡ್ ಪ್ರೇಕ್ಷಕರ ವರ್ತನೆ: 2019ರ ವಿಶ್ವಕಪ್ ವೇಳೆ ಸ್ಮಿತ್ ಮತ್ತು ವಾರ್ನರ್ ಇಂಗ್ಲೆಂಡ್ ಅಂಗಳಕ್ಕೆ ಮರಳಿದಾಗ ಅಲ್ಲಿನ ಪ್ರೇಕ್ಷಕರು ಅವರನ್ನು ಲೇವಡಿ ಮಾಡಿದ ರೀತಿ ಅತ್ಯಂತ ಕೀಳುಮಟ್ಟದ್ದಾಗಿತ್ತು. ಹಿರಿಯರು ಮತ್ತು ಜವಾಬ್ದಾರಿಯುತ ಪ್ರಜೆಗಳು ಅಷ್ಟು ಕೆಟ್ಟದಾಗಿ ವರ್ತಿಸುವುದನ್ನು ನಾನು ನನ್ನ ಜೀವನದಲ್ಲೇ ನೋಡಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯನ್ನರು:
2018ರ ಕೇಪ್‌ಟೌನ್ ಟೆಸ್ಟ್‌ನಲ್ಲಿ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್ ಬಳಸಿ ಸಿಂಡಿಬಿದ್ದಾಗ, ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ಗೆ ತಲಾ ಒಂದು ವರ್ಷ ಹಾಗೂ ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ಕಾಲ ನಿಷೇಧ ಹೇರಿತ್ತು.
ಇದನ್ನೂ ಓದಿ: ಫಿಫ್ಟಿಯನ್ನೇ ಮೀರಿ ನಿಂತ ಸೆಂಚುರಿ: ಮುಂದುವರೆದ ಸರ್ಫರಾಝ್ ಖಾನ್ ಅಬ್ಬರ
ಈ ಘಟನೆಯ ಬೆನ್ನಲ್ಲೇ ಜಸ್ಟಿನ್ ಲ್ಯಾಂಗರ್ ಅವರು ಆಸ್ಟ್ರೇಲಿಯಾ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡು, ಕುಸಿದಿದ್ದ ತಂಡವನ್ನು ಮತ್ತೆ ಕಟ್ಟಿ ಬೆಳೆಸಿದ್ದರು. ಇದೀಗ ವರ್ಷಗಳ ಬಳಿಕ ಅದೇ ಹಳೆಯ ಪ್ರಕರಣದ ಬಗ್ಗೆ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಲ್ಯಾಂಗರ್ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
Source: TV9 Kannada Sports
