Hashtagintro

ಇಡೀ ತಂಡಕ್ಕೆ ಗೊತ್ತಿತ್ತು! ಸ್ಯಾಂಡ್ ಪೇಪರ್ ಹಗರಣದ ಬಗ್ಗೆ ಬ್ಯಾನ್‌ಕ್ರಾಫ್ಟ್ ಸ್ಫೋಟಕ ಆರೋಪ

ಇಡೀ ತಂಡಕ್ಕೆ ಗೊತ್ತಿತ್ತು! ಸ್ಯಾಂಡ್ ಪೇಪರ್ ಹಗರಣದ ಬಗ್ಗೆ ಬ್ಯಾನ್‌ಕ್ರಾಫ್ಟ್ ಸ್ಫೋಟಕ ಆರೋಪ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಹಲವು ವರ್ಷಗಳ ಹಿಂದೆ ಬೆಚ್ಚಿಬೀಳಿಸಿದ್ದ ಸ್ಯಾಂಡ್ ಪೇಪರ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರ ಹೇಳಿಕೆಗಳ ಬೆನ್ನಲ್ಲೇ, ಈ ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಈಗ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಚೆಂಡು ವಿರೂಪಗೊಳಿಸುವ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ತಂಡದ ಬಹುತೇಕ ಎಲ್ಲ ಆಟಗಾರರಿಗೂ ಮಾಹಿತಿ ಇತ್ತು ಎಂದು ಅವರು ಹೇಳಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದ ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಶಿಕ್ಷೆಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಸ್ಮಿತ್ ಮತ್ತು ವಾರ್ನರ್‌ಗೆ ತಲಾ ಒಂದು ವರ್ಷ ನಿಷೇಧ ವಿಧಿಸಲಾಗಿತ್ತು. ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ನಿಷೇಧ ಹೇರಲಾಗಿತ್ತು.

ಇಡೀ ತಂಡಕ್ಕೆ ಗೊತ್ತಿತ್ತು

‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ತಮ್ಮ ಹಳೆಯ ಆರೋಪವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಹಗರಣದಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಭಾಗಿಯಾಗಿರಲಿಲ್ಲ. ತಂಡದ ಇತರ ಆಟಗಾರರಿಗೂ ಚೆಂಡು ವಿರೂಪಗೊಳಿಸುವ ವಿಚಾರ ತಿಳಿದಿತ್ತು ಎಂದು ಆರೋಪಿಸಿದ್ದಾರೆ. ‘ಈ ಪ್ರಕರಣದಲ್ಲಿ ನಾವು ಮೂವರು ಮಾತ್ರ ಭಾಗಿಯಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಾನು ಸ್ಯಾಂಡ್ ಪೇಪರ್ ಬಳಸುತ್ತಿದ್ದ ವಿಚಾರ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ಗೆ ಮಾತ್ರ ತಿಳಿದಿರಲಿಲ್ಲ. ಇಡೀ ತಂಡಕ್ಕೆ ಇದರ ಬಗ್ಗೆ ಮಾಹಿತಿ ಇತ್ತು’ ಎಂದು ಬ್ಯಾನ್‌ಕ್ರಾಫ್ಟ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಕಮ್ಮಿನ್ಸ್ ವಿರುದ್ಧವೂ ಗಂಭೀರ ಆರೋಪ

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ವಿರುದ್ಧವೂ ಬ್ಯಾನ್‌ಕ್ರಾಫ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮ್ಮಿನ್ಸ್, ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಇತರ ಆಟಗಾರರು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯೇ ಬ್ಯಾನ್‌ಕ್ರಾಫ್ಟ್ ಅವರನ್ನು ಮತ್ತಷ್ಟು ಕೆರಳಿಸಿದೆ ಎನ್ನಲಾಗಿದೆ.

ಈ ಬಗ್ಗೆ ಬರೆದಿರುವ ಅವರು, ‘ಉಸ್ಮಾನ್ ಖವಾಜಾ ಅವರ ‘ಸಬರ್’ ಪುಸ್ತಕ ನನ್ನ ಹಳೆಯ ನೆನಪುಗಳನ್ನು ಮತ್ತೆ ಕೆದಕಿತು. ಹಲವು ವರ್ಷಗಳಿಂದ ಮನಸ್ಸಿನಲ್ಲಿದ್ದ ನೋವನ್ನು ಮತ್ತೊಮ್ಮೆ ನೆನಪಿಸಿತು. ಆದರೆ ಈ ಲೇಖನ ಬರೆಯಲು ಅಂತಿಮವಾಗಿ ಕಾರಣವಾದದ್ದು ಆಸ್ಟ್ರೇಲಿಯಾ ಕ್ರಿಕೆಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಪತ್ರಿಕಾಗೋಷ್ಠಿ. ಅವರ ಮಾತುಗಳು ನನಗೆ ಕೋಪ, ದ್ರೋಹ ಮತ್ತು ಒಂಟಿತನದ ಭಾವನೆ ಮೂಡಿಸಿದವು’ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸ್ಯಾಂಡ್ ಪೇಪರ್ ಬಳಸುತ್ತಿದ್ದೆ

ತಮ್ಮ ಲೇಖನದಲ್ಲಿ ‘ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಮಾರ್ಷ್ ಸೇರಿದಂತೆ ತಂಡದ ವೇಗದ ಬೌಲರ್‌ಗಳೊಂದಿಗೆ ಚೆಂಡು ರಿವರ್ಸ್ ಸ್ವಿಂಗ್ ಆಗುವಷ್ಟು ಸಿದ್ಧವಾಗಿದೆಯೇ ಎಂಬ ಬಗ್ಗೆ ನಾನು ಚರ್ಚೆ ನಡೆಸುತ್ತಿದ್ದೆ. ಚೆಂಡಿನ ಮೇಲೆ ನಾನು ಮಾಡುತ್ತಿದ್ದ ಕೆಲಸ ಸರಿಯಾಗಿ ಫಲ ನೀಡುತ್ತಿದೆಯೇ ಎಂಬುದರ ಬಗ್ಗೆ ಎಲ್ಲಾ ಬೌಲರ್‌ಗಳು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು.

ಚೆಂಡು ಈಗ ರಿವರ್ಸ್ ಸ್ವಿಂಗ್ ಆಗುತ್ತಿದೆಯೇ? ಇನ್ನೂ ಆಗುತ್ತಿಲ್ಲ, ಮತ್ತಷ್ಟು ಕೆಲಸ ಮಾಡಬೇಕು’ ಎಂದು ಅವರು ಹೇಳುತ್ತಿದ್ದರು. ಅವರ ಸಲಹೆ ನನಗೆ ಸಹಾಯಕವಾಗುತ್ತಿತ್ತು. ಹೀಗಾಗಿ ಚೆಂಡಿನ ಮೇಲೆ ಇನ್ನಷ್ಟು ಸ್ಯಾಂಡ್ ಪೇಪರ್ ಬಳಸುತ್ತಿದ್ದೆ’ ಎಂದು ಬ್ಯಾನ್‌ಕ್ರಾಫ್ಟ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ

ಈ ಆಟಗಾರರಿಗೂ ಹಗರಣದ ಬಗ್ಗೆ ತಿಳಿದಿತ್ತಾ?

2018ರ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಜೊತೆಗೆ ಇತರ ಆಟಗಾರರಿಗೂ ಚೆಂಡು ವಿರೂಪಗೊಳಿಸುವ ಪ್ರಕರಣದ ಬಗ್ಗೆ ಮಾಹಿತಿ ಇತ್ತು ಎಂಬುದು ಬ್ಯಾನ್‌ಕ್ರಾಫ್ಟ್ ಅವರ ಆರೋಪ. ಆ ಪಂದ್ಯದಲ್ಲಿ ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಟಿಮ್ ಪೈನ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಜಲ್‌ವುಡ್ ಕೂಡ ಆಡಿದ್ದರು. ಇದರ ಜೊತೆಗೆ ಪೀಟರ್ ಹ್ಯಾಂಡ್ಸ್‌ಕಾಂಬ್, ಜಾನ್ ಹೊಲಾಂಜ್, ಜೇ ರಿಚರ್ಡ್‌ಸನ್, ಚಾಡ್ ಸೇಯರ್ಸ್ ಮತ್ತು ಜಾಕ್ಸನ್ ಬರ್ಡ್ ಕೂಡ ತಂಡದ ಭಾಗವಾಗಿದ್ದರು.

ಬ್ಯಾನ್‌ಕ್ರಾಫ್ಟ್ ಅವರ ಈ ಹೊಸ ಆರೋಪಗಳು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿವೆ. ಈ ಗಂಭೀರ ಆರೋಪಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಸಂಬಂಧಪಟ್ಟ ಆಟಗಾರರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language