
ಜೆರುಸಲೇಮ್, ಅಕ್ಟೋಬರ್ 19: ಪ್ರಸ್ತುತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಬಾಕಿ ಉಳಿದಿರುವ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತದಂತಹ ಪ್ರಮುಖ ದೇಶಗಳೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಇಸ್ರೇಲ್ ವಿರೋಧಿ ಧೋರಣೆ ಹೊಂದಿರುವ ಅಧ್ಯಕ್ಷರು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಮುಂಬರುವ ಇಸ್ರೇಲ್ ಪ್ರಧಾನಿ ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಅಮೆರಿಕದೊಂದಿಗಿನ ಬಾಂಧವ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 27ರಂದು ನಡೆಯಲಿರುವ ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಗೆ ಕೇವಲ 9 ದಿನಗಳು ಬಾಕಿ ಇರುವಾಗ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ. ಮಾಜಿ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಗಾದಿ ಐಸೆನ್‌ಕೋಟ್ ಅವರಿಂದ ನೆತನ್ಯಾಹು ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ. ನೆತನ್ಯಾಹು ಅವರ ಭಾಷಣದ ಕೆಲವೇ ಗಂಟೆಗಳ ಮೊದಲು, ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರ ಮರುಚುನಾವಣೆಯ ಸ್ಪರ್ಧೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು.
“ಇನ್ನೂ 2 ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ತೀವ್ರ ವಿರೋಧಿ ಧೋರಣೆ ಹೊಂದಿರುವ ವ್ಯಕ್ತಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರಬಹುದು” ಎಂದಿರುವ ನೆತನ್ಯಾಹು, ಅಂತಹ ರಾಜಕೀಯ ಬದಲಾವಣೆಯನ್ನು ಇಸ್ರೇಲ್ ಹೇಗೆ ನಿರ್ವಹಿಸಬೇಕು ಎಂಬ ಕುರಿತು ಮಾತನಾಡಿದ್ದಾರೆ. ಟ್ರಂಪ್ ಅಧ್ಯಕ್ಷತೆಯ ಉಳಿದ ಅವಧಿಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಜೊತೆಗೆ, ಭವಿಷ್ಯದಲ್ಲಿ ಅಮೆರಿಕದ ಬೆಂಬಲ ಕಡಿಮೆಯಾದರೂ ಸ್ವತಂತ್ರವಾಗಿ ನಿಲ್ಲಲು ಅನುಕೂಲವಾಗುವಂತೆ ಹೊಸ ಸಂಬಂಧಗಳನ್ನು ವಿಸ್ತರಿಸಬೇಕಿದೆ ಎಂದು ನೆತನ್ಯಾಹು ವಾದಿಸಿದ್ದಾರೆ.
ಭಾರತದ ಬಗ್ಗೆ ಮೆಚ್ಚುಗೆ:
“ಮೊದಲನೆಯದಾಗಿ, ಈ ಎರಡು ವರ್ಷಗಳಲ್ಲಿ ಮತ್ತು ಮುಂಬರುವ ದಿನಗಳಲ್ಲಿ ಅಮೆರಿಕದ ಅಖಾಡದಲ್ಲಿ ಪರಿಸ್ಥಿತಿಗಳು ಉತ್ತಮವಾಗಿರಲಿ ಅಥವಾ ಕೆಟ್ಟದಾಗಿರಲಿ, ನಾವು ಮಾಡಬಹುದಾದ ಎಲ್ಲವನ್ನೂ ಮಾಡಬೇಕು. ಎರಡನೆಯದಾಗಿ, ಇತರ ಬಲವಾದ ಮೈತ್ರಿಗಳನ್ನು ಸೃಷ್ಟಿಸಿಕೊಳ್ಳಬೇಕು. ನಮ್ಮ ಪ್ರದೇಶದಲ್ಲಿ ಮತ್ತು ಹೊರಗಿನ ಅನೇಕ ದೇಶಗಳೊಂದಿಗೆ ನಾನು ಕೆಲಸ ಮಾಡುತ್ತಿರುವುದು ಇದನ್ನೇ. ಭಾರತವೇನೂ ಚಿಕ್ಕ ದೇಶವಲ್ಲ. ಮೈತ್ರಿಗೆ ಭಾರತದಂತಹ ಅನೇಕ ದೇಶಗಳಿವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ನಿಕಟ ಬಾಂಧವ್ಯವನ್ನು ಉಲ್ಲೇಖಿಸಿರುವ ಅವರು, ಜಾಗತಿಕ ಸವಾಲುಗಳ ನಡುವೆಯೂ ಇಸ್ರೇಲ್ ಬೆಂಬಲಕ್ಕೆ ಪ್ರಬಲ ಮಿತ್ರರಿದ್ದಾರೆ ಎಂಬುದಕ್ಕೆ ಭಾರತವೇ ಸಾಕ್ಷಿ ಎಂದಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಭಾರತ-ಇಸ್ರೇಲ್ ಬಾಂಧವ್ಯವನ್ನು ‘ಅನನ್ಯ’ ಎಂದು ಬಣ್ಣಿಸಿದ್ದ ನೆತನ್ಯಾಹು, ಭಾರತವನ್ನು ‘ಮಹಾಶಕ್ತಿ’ ಎಂದು ಕರೆದಿದ್ದರು. ಅಷ್ಟೇ ಅಲ್ಲದೆ, ಭಾರತದಲ್ಲಿ ಇಸ್ರೇಲ್ ಮೇಲೆ ಅಪಾರ ಪ್ರೀತಿ ಹಾಗೂ ಆದರ ಇದೆ ಎಂದಿದ್ದರು.
ಲ್ಯಾಟಿನ್ ಅಮೆರಿಕದಲ್ಲೂ ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು, ಇಸ್ರೇಲ್‌ಗೆ ಜಾಗತಿಕ ಮೈತ್ರಿ ವಿಸ್ತರಿಸಲು ಇದು ದೊಡ್ಡ ಅವಕಾಶವಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. “ಕೆಲವೇ ದಿನಗಳಲ್ಲಿ ಬ್ರೆಜಿಲ್‌ನಲ್ಲಿ ಬೃಹತ್ ಬದಲಾವಣೆ ಉಂಟಾಗಬಹುದು. ನಾವು ನಮ್ಮ ಮೈತ್ರಿಗಳ ಜಾಲವನ್ನು ವಿಸ್ತರಿಸಬೇಕು ಮತ್ತು ಪ್ರತಿಯೊಬ್ಬರಿಗೂ ಇಸ್ರೇಲ್ ಅತ್ಯಗತ್ಯವಾಗುವಂತಹ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada World
