
ಬೆಂಗಳೂರು, ಅ.19: ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ (SSLC) ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ತಮ್ಮ 11 ಅಂಕಿಗಳ ಕಾಯಂ ಶಿಕ್ಷಣ ಸಂಖ್ಯೆ (PEN) ಹಾಗೂ ಲಭ್ಯವಿದ್ದಲ್ಲಿ 12 ಅಂಕಿಗಳ ‘ಅಪಾರ್’ (APAAR) ಐಡಿಯನ್ನು ನಮೂದಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಅಪಾರ್ ಐಡಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪೆನ್ ಮತ್ತು ಅಪಾರ್ ಐಡಿ ಎಂದರೇನು?:
ಪೆನ್ ಇದು ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳನ್ನು ಗುರುತಿಸಲು ನೀಡಲಾಗುವ 11 ಅಂಕಿಗಳ ಕಾಯಂ ಸಂಖ್ಯೆಯಾಗಿದೆ. ಶಾಲೆ ಬದಲಾಯಿಸಿದಾಗ ಹಾಗೂ ಶಾಲಾ ದಾಖಲಾತಿ ನಿರ್ವಹಣೆಗೆ ಇದು ಅತ್ಯಗತ್ಯವಾಗಿದ್ದು, SSLC ನೋಂದಣಿಗೆ ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ನಮೂದಿಸಬೇಕು. ಅಪಾರ್ ‘ಒಂದು ದೇಶ, ಒಂದು ವಿದ್ಯಾರ್ಥಿ ಐಡಿ’ (One Nation, One Student ID) ಯೋಜನೆಯಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಅಂಕಪಟ್ಟಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಒಂದೇ ಐಡಿಗೆ ಲಿಂಕ್ ಮಾಡಲು ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಎಸ್ಎಸ್ಎಲ್‌ಸಿ-ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಎರಡೇ ಮುಖ್ಯ ಪರೀಕ್ಷೆ!
ಅಪಾರ್ ಐಡಿ ಇಲ್ಲದಿದ್ದರೆ ಗೊಂದಲ ಬೇಡ
ಅನೇಕ ವಿದ್ಯಾರ್ಥಿಗಳಲ್ಲಿ ಇನ್ನೂ ಅಪಾರ್ ಐಡಿ ಲಭ್ಯವಿಲ್ಲದಿರುವುದರಿಂದ ಗೊಂದಲ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ SSLC ನೊಡಲ್ ಅಧಿಕಾರಿ ಲಕ್ಷ್ಮೀನಾರಾಯಣ್ ಅವರು, “ಅಪಾರ್ ಐಡಿ ಇಲ್ಲದಿದ್ದರೂ ವಿದ್ಯಾರ್ಥಿಗಳು PEN ಸಂಖ್ಯೆಯನ್ನು ಮಾತ್ರ ನಮೂದಿಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಐಡಿ ಇಲ್ಲದಿರುವುದು ನೋಂದಣಿಗೆ ಯಾವುದೇ ತಡೆ ಉಂಟುಮಾಡುವುದಿಲ್ಲ” ಎಂದು ನೊಡಲ್ ಅಧಿಕಾರಿ ತಿಳಿಸಿದ್ದಾರೆ.
ಕೆಲ ವಿದ್ಯಾರ್ಥಿಗಳ ಆಧಾರ್ ಹಾಗೂ ಶಾಲಾ ದಾಖಲೆಗಳಲ್ಲಿ ಹೆಸರು ಅಥವಾ ಜನ್ಮ ದಿನಾಂಕ ವ್ಯತ್ಯಾಸವಿರುವುದರಿಂದ ಅಪಾರ್ ಐಡಿ ರಚನೆಯಾಗದೆ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಅಪಾರ್ ಐಡಿ ಹಾಗೂ ಭಾವಚಿತ್ರ ಆಧರಿಸಿ ಡಿಜಿಲಾಕರ್ ಮೂಲಕ ಭೌತಿಕವಲ್ಲದ ಡಿಜಿಟಲ್ ಅಂಕಪಟ್ಟಿಗಳನ್ನು ಪಡೆಯಲು ಇದು ನೆರವಾಗಲಿದೆ. ಅಪಾರ್ ಐಡಿ ನಮೂದಿಸದಿದ್ದರೂ ವಿದ್ಯಾರ್ಥಿಗಳಿಗೆ ಹಾರ್ಡ್ ಕಾಪಿ ಅಂಕಪಟ್ಟಿಗಳು ದೊರೆಯಲಿವೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Education
