Hashtagintro

ಎಸ್​ಐಆರ್ ಬಳಿಕ 5 ರಾಜ್ಯಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಯಾವ ರಾಜ್ಯದಲ್ಲಿ ಎಷ್ಟು ಹೆಸರು ಕೈಬಿಡಲಾಗಿದೆ?

ಎಸ್​ಐಆರ್ ಬಳಿಕ 5 ರಾಜ್ಯಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಯಾವ ರಾಜ್ಯದಲ್ಲಿ ಎಷ್ಟು ಹೆಸರು ಕೈಬಿಡಲಾಗಿದೆ?

ನವದೆಹಲಿ, ನವೆಂಬರ್ 03: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿದೆ. ಈ ಪರಿಷ್ಕರಣೆ ಬಳಿಕ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌ ಮತ್ತು ಮಣಿಪುರ ರಾಜ್ಯಗಳ ಒಟ್ಟು ಮತದಾರರ ಸಂಖ್ಯೆ ಸುಮಾರು 2.29 ಕೋಟಿಯಷ್ಟು ಕಡಿಮೆಯಾಗಿದೆ. ಅಂದರೆ, ಪರಿಷ್ಕರಣೆಗೂ ಮೊದಲು 18.71 ಕೋಟಿ ಇದ್ದ ಮತದಾರರ ಸಂಖ್ಯೆ ಈಗ 16.43 ಕೋಟಿಗೆ ಇಳಿದಿದೆ. ಒಟ್ಟಾರೆ ಶೇ. 12.2ರಷ್ಟು ಇಳಿಕೆ ದಾಖಲಾಗಿದೆ ಎಂದು ಚುನಾವಣಾ ಆಯೋಗ ಮತ್ತು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಬಿಡುಗಡೆ ಮಾಡಿರುವ ಅಂಕಿಅಂಶಗಳು ತಿಳಿಸಿವೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಇಳಿಕೆ ಕಂಡುಬಂದಿದೆ.

ಉತ್ತರ ಪ್ರದೇಶದಲ್ಲೇ 2.04 ಕೋಟಿ ಮತದಾರರ ಇಳಿಕೆ

ಐದು ರಾಜ್ಯಗಳ ಒಟ್ಟು ಇಳಿಕೆಯಲ್ಲಿ ಸುಮಾರು ಶೇ. 90ರಷ್ಟು ಪಾಲು ಉತ್ತರ ಪ್ರದೇಶದ್ದಾಗಿದೆ. ಎಸ್​ಐಆರ್ ಆರಂಭಕ್ಕೂ ಮೊದಲು ಉತ್ತರ ಪ್ರದೇಶದಲ್ಲಿ 15.44 ಕೋಟಿ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 12.56 ಕೋಟಿಗೆ ಇಳಿದಿತ್ತು. ಆಕ್ಷೇಪಣೆ ಮತ್ತು ಪರಿಶೀಲನೆಯ ಬಳಿಕ 84 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಮತ್ತೆ ಸೇರಿಸಲಾಯಿತು. ಹೀಗಾಗಿ ಅಂತಿಮ ಪಟ್ಟಿಯಲ್ಲಿ 13.40 ಕೋಟಿ ಮತದಾರರು ದಾಖಲಾಗಿದ್ದಾರೆ. ಆದರೂ ಹಿಂದಿನ ಪಟ್ಟಿಗೆ ಹೋಲಿಸಿದರೆ ಸುಮಾರು 2.04 ಕೋಟಿ ಮತದಾರರ ಇಳಿಕೆಯಾಗಿದೆ. ಇದು ಶೇ. 13.24ರಷ್ಟು ಕಡಿತವಾಗಿದೆ.

ಪಂಜಾಬ್‌ನಲ್ಲಿ 14 ಲಕ್ಷ ಹೆಸರುಗಳ ಇಳಿಕೆ

ಪಂಜಾಬ್‌ನಲ್ಲಿ  ಎಸ್​ಐಆರ್​ಗೂ ಮೊದಲು 2.15 ಕೋಟಿ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 1.94 ಕೋಟಿಗೆ ಇಳಿದಿತ್ತು. ಬಳಿಕ ಸುಮಾರು 7 ಲಕ್ಷ ಹೆಸರುಗಳನ್ನು ಮತ್ತೆ ಸೇರಿಸಿದ ಪರಿಣಾಮ ಅಂತಿಮ ಪಟ್ಟಿಯಲ್ಲಿ 2.01 ಕೋಟಿ ಮತದಾರರು ದಾಖಲಾಗಿದ್ದಾರೆ. ಒಟ್ಟಾರೆ ಸುಮಾರು 14 ಲಕ್ಷ ಮತದಾರರ ಇಳಿಕೆಯಾಗಿದ್ದು, ಇದು ಶೇ. 6.34ರಷ್ಟಿದೆ. ಐದು ರಾಜ್ಯಗಳಲ್ಲಿ ಕರಡು ಪಟ್ಟಿಯಿಂದ ಕೈಬಿಟ್ಟ ಹೆಸರುಗಳನ್ನು ಮರಳಿ ಸೇರಿಸುವ ಪ್ರಮಾಣ ಪಂಜಾಬ್‌ನಲ್ಲಿ ಹೆಚ್ಚಾಗಿದೆ.

ಇದನ್ನೂ ಓದಿ: ಎಸ್​ಐಆರ್ ಗಡುವು ವಿಸ್ತರಣೆ: ದೆಹಲಿ ಸೇರಿ 6 ರಾಜ್ಯಗಳಿಗೆ ಚುನಾವಣಾ ಆಯೋಗದಿಂದ ಹೊಸ ಡೆಡ್‌ಲೈನ್

ಉತ್ತರಾಖಂಡದಲ್ಲಿ 8 ಲಕ್ಷ ಮತದಾರರ ಇಳಿಕೆ

ಉತ್ತರಾಖಂಡದಲ್ಲಿ ಎಸ್​ಐಆರ್​ಗೂ ಮೊದಲು 80 ಲಕ್ಷ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 71 ಲಕ್ಷಕ್ಕೆ ಇಳಿದಿತ್ತು. ಅಂತಿಮ ಪಟ್ಟಿಯಲ್ಲಿ 72 ಲಕ್ಷ ಮತದಾರರು ದಾಖಲಾಗಿದ್ದಾರೆ. ಅಂದರೆ, ಒಟ್ಟಾರೆ ಸುಮಾರು 8 ಲಕ್ಷ ಮತದಾರರ ಇಳಿಕೆಯಾಗಿದ್ದು, ಶೇ. 10.07ರಷ್ಟು ಕಡಿತವಾಗಿದೆ. ಕರಡು ಪಟ್ಟಿಯಿಂದ ತೆಗೆದುಹಾಕಿದ್ದ ಹೆಸರುಗಳಲ್ಲಿ ಸುಮಾರು 25 ಸಾವಿರ ಹೆಸರುಗಳನ್ನು ಮಾತ್ರ ಮರಳಿ ಸೇರಿಸಲಾಗಿದೆ.

ಮಣಿಪುರದಲ್ಲಿ 1.3 ಲಕ್ಷ ಮತದಾರರ ಇಳಿಕೆ

ಮಣಿಪುರದಲ್ಲಿ ಎಸ್​ಐಆರ್​ಗೂ ಮುನ್ನ 20.9 ಲಕ್ಷ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 19.3 ಲಕ್ಷಕ್ಕೆ ಇಳಿದಿತ್ತು. ಅಂತಿಮ ಪಟ್ಟಿಯಲ್ಲಿ 19.6 ಲಕ್ಷ ಮತದಾರರು ದಾಖಲಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಸುಮಾರು 1.3 ಲಕ್ಷ ಮತದಾರರ ಇಳಿಕೆಯಾಗಿದ್ದು, ಶೇ. 6.33ರಷ್ಟು ಕಡಿತವಾಗಿದೆ. ಕರಡು ಪಟ್ಟಿಯಿಂದ ತೆಗೆದುಹಾಕಿದ್ದ ಹೆಸರುಗಳಲ್ಲಿ ಸುಮಾರು ಶೇ. 17ರಷ್ಟು ಹೆಸರುಗಳನ್ನು ಮತ್ತೆ ಸೇರಿಸಲಾಗಿದೆ.

ಗೋವಾದಲ್ಲಿ 1.3 ಲಕ್ಷ ಹೆಸರುಗಳ ಕಡಿತ

ಗೋವಾದಲ್ಲಿ ಎಸ್​ಐಆರ್​ಗೂ ಮುನ್ನ  11.85 ಲಕ್ಷ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 10.85 ಲಕ್ಷಕ್ಕೆ ಇಳಿದಿತ್ತು. ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿ 10.58 ಲಕ್ಷಕ್ಕೆ ತಲುಪಿದೆ. ಒಟ್ಟಾರೆ ಸುಮಾರು 1.3 ಲಕ್ಷ ಮತದಾರರ ಇಳಿಕೆಯಾಗಿದ್ದು, ಶೇ. 10.76ರಷ್ಟು ಕಡಿತವಾಗಿದೆ. ಈ ಐದು ರಾಜ್ಯಗಳ ಪೈಕಿ ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲೂ ಮತದಾರರ ಸಂಖ್ಯೆ ಕಡಿಮೆಯಾದ ಏಕೈಕ ರಾಜ್ಯ ಗೋವಾ.

ಎಸ್​ಐಆರ್ ಎಂದರೇನು? ಯಾಕೆ ಮಾಡಲಾಗುತ್ತದೆ?

ಎಸ್​ಐಆರ್ ಎಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸುವುದು ಇದರ ಉದ್ದೇಶ. ಮೃತಪಟ್ಟವರು, ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಅಥವಾ ಅರ್ಹತೆ ಇಲ್ಲದವರ ಹೆಸರುಗಳನ್ನು ಪರಿಶೀಲಿಸಿ ಪಟ್ಟಿಯಿಂದ ತೆಗೆದುಹಾಕಬಹುದು. ಅದೇ ರೀತಿ, ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಅವಕಾಶವನ್ನೂ ನೀಡಲಾಗುತ್ತದೆ.

ಕರಡು ಪಟ್ಟಿಯಿಂದ ಹೆಸರು ತೆಗೆದರೆ ಮತದಾನದ ಹಕ್ಕು ಶಾಶ್ವತವಾಗಿ ಕಳೆದುಹೋಗುತ್ತದೆಯೇ? ಇಲ್ಲ. ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಿ, ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಯಲ್ಲಿಯೇ ಕೆಲವು ಹೆಸರುಗಳನ್ನು ಅಂತಿಮ ಪಟ್ಟಿಗೆ ಮರಳಿ ಸೇರಿಸಲಾಗಿದೆ.

ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಚುನಾವಣೆ

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌ ಮತ್ತು ಮಣಿಪುರದಲ್ಲಿ 2027ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ವಿಧಾನಸಭೆಯ ಅವಧಿ 2027ರ ಮೇ 22ರಂದು ಮುಕ್ತಾಯವಾಗಲಿದೆ. ಮಣಿಪುರ, ಗೋವಾ, ಪಂಜಾಬ್‌ ಮತ್ತು ಉತ್ತರಾಖಂಡ ವಿಧಾನಸಭೆಗಳ ಅವಧಿ 2027ರ ಮಾರ್ಚ್‌ನಲ್ಲಿ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ.

ಚುನಾವಣಾ ಆಯೋಗದ ಮುಂದಿನ ಪರಿಷ್ಕರಣೆ ಪ್ರಕ್ರಿಯೆಯಲ್ಲಿಯೂ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹರಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶ ಸಿಗಲಿದೆ. ಜನವರಿ 1ರೊಳಗೆ 18 ವರ್ಷ ತುಂಬುವ ಯುವಜನರೂ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು. ಹೀಗಾಗಿ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language