
ಮಂಡ್ಯ, ನವೆಂಬರ್ 15: ಕಾಲೇಜು ಮುಗಿಸಿಕೊಂಡು ಸಂತೋಷದಿಂದ ಮನೆಗೆ ಮರಳಬೇಕಿದ್ದ 19 ವರ್ಷದ ಯುವತಿ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾದ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಲಿಖಿತಾ ಮೃತ ದುರ್ದೈವಿ.
ನಡೆದಿದ್ದೇನು?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಲಿಖಿತಾ ಪಾಂಡವಪುರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಳು. ಚಂದಗಿರಿ ಕೊಪ್ಪಲು ಗ್ರಾಮದ ಬಳಿ ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ಲಿಖಿತಾ ಹಳಿ ದಾಟಲು ಮುಂದಾಗಿದ್ದಾಳೆ. ಅಷ್ಟರಲ್ಲೇ ಸಮೀಪಿಸುತ್ತಿದ್ದ ರೈಲು ಕ್ಷಣಾರ್ಧದಲ್ಲಿ ಆಕೆಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಕುಟುಂಬಕ್ಕೆ ಬರಸಿಡಿಲು ಬಡಿದಂತಾದ ಘಟನೆ
ಇನ್ನೇನು ಕಾಲೇಜು ಮುಗಿಸಿ ಮಗಳು ಮನೆಗೆ ಬರುತ್ತಾಳೆ ಎಂದು ಕಾಯುತ್ತಿದ್ದ ಕುಟುಂಬಕ್ಕೆ ಇದೀಗ ಬರಸಿಡಿಲು ಬಡಿದಂತಾಗಿದೆ. ಮನೆಯವರ ಕನಸುಗಳೆಲ್ಲಾ ಕ್ಷಣಮಾತ್ರದಲ್ಲಿ ನುಚ್ಚುನೂರಾಗಿವೆ. ವಾಹನ ಸವಾರರೊಬ್ಬರು ರೈಲು ಹೋಗುವ ದೃಶ್ಯ ಸೆರೆ ಹಿಡಿಯುತ್ತಿದ್ದಾಗ ಈ ದುರ್ಘಟನೆ ಭೀಕರ ದೃಶ್ಯ ಕೂಡ ಸೆರೆಯಾಗಿದೆ.
ಇದನ್ನೂ ಓದಿ: ಕಂತು ಕಟ್ಟಲಾಗದ ವೃದ್ಧೆಯ ಮನೆ ಸೀಜ್: ಜಗಳೂರಿನಲ್ಲಿ 15 ದಿನಗಳಿಂದ ಬೀದಿಯಲ್ಲಿ ಕುಟುಂಬ, ಮೈಕ್ರೋ ಫೈನಾನ್ಸ್ ವಿರುದ್ಧ ಆಕ್ರೋಶ
ಇನ್ನು ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ರೈಲ್ವೆ ಗೇಟ್ ಹಾಕಿದ್ದರೂ ಹಳಿ ದಾಟಲು ಮುಂದಾಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ರೈಲು ಬರುವುದನ್ನು ಲೆಕ್ಕಿಸದೆ ಹಳಿ ದಾಟುವ ಆತುರ ಎಂತಹ ಭೀಕರ ಪರಿಣಾಮಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
