Hashtagintro

ಕಬ್ಬಿಗೆ ಸೂಕ್ತ ಬೆಲೆ ಹೋರಾಟದ ನಡುವೆಯೇ ಭಾರಿ ಅನಾಹುತ: ಬಾಗಲಕೋಟೆಯಲ್ಲಿ ಸುಟ್ಟು ಭಸ್ಮವಾಯ್ತು 3.41 ಕೋಟಿ ರೂ. ಮೌಲ್ಯದ ಕಬ್ಬು

ಕಬ್ಬಿಗೆ ಸೂಕ್ತ ಬೆಲೆ ಹೋರಾಟದ ನಡುವೆಯೇ ಭಾರಿ ಅನಾಹುತ: ಬಾಗಲಕೋಟೆಯಲ್ಲಿ ಸುಟ್ಟು ಭಸ್ಮವಾಯ್ತು 3.41 ಕೋಟಿ ರೂ. ಮೌಲ್ಯದ ಕಬ್ಬು

ಬಾಗಲಕೋಟೆ, ನ.2: ಒಂದೆಡೆ ಭೀಕರ ಬರಗಾಲ, ಮತ್ತೊಂದೆಡೆ ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಸಿಗದೆ ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿರುವ ಬಾಗಲಕೋಟೆ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಭಾರಿ ಆತಂಕ ಎದುರಾಗಿದೆ. ಕಬ್ಬಿಗೆ ಸೂಕ್ತ ಬೆಲೆಗಾಗಿ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಜಿಲ್ಲಾದ್ಯಂತ ಕಬ್ಬಿನ ಹೊಲಗಳಿಗೆ ಬೆಂಕಿ ಬಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ. ಜಿಲ್ಲೆಯಲ್ಲಿ ಕಬ್ಬಿಗೆ ಯೋಗ್ಯ ಬೆಲೆ ಸಿಗದೆ ರೈತರು ರೊಚ್ಚಿಗೆದ್ದಿರುವ ಹೊತ್ತಲ್ಲೇ ಎದುರಾಗಿರುವ ಈ ‘ಬೆಂಕಿ ಕಂಟಕ’ದಿಂದಾಗಿ ರೈತರು ಆರ್ಥಿಕವಾಗಿ ಮತ್ತಷ್ಟು ಜರ್ಜರಿತರಾಗಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಾದ್ಯಂತ ಭಾರಿ ಅನಾಹುತ ಸಂಭವಿಸಿದೆ. ಜಿಲ್ಲೆಯಲ್ಲಿ ಬರೋಬ್ಬರಿ 135 ಕಡೆಗಳಲ್ಲಿ ಕಬ್ಬಿನ ಹೊಲಗಳಿಗೆ ಬೆಂಕಿ ತಗಲಿದ್ದು, ಒಟ್ಟು ₹11 ಕೋಟಿ 62 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಬಲಿಯಾಗಿದೆ.ಇದರಲ್ಲಿ ₹3 ಕೋಟಿ 41 ಲಕ್ಷ ಮೌಲ್ಯದ ಕಬ್ಬು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ದಿನಂಪ್ರತಿ ಒಂದಲ್ಲಾ ಒಂದು ಕಡೆ ಬೆಂಕಿ ಬೀಳುತ್ತಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರೈತರು ಬೆಂಕಿ ನಂದಿಸುವುದೇ ಫುಲ್ ಟೈಮ್ ಕಾಯಕ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕುವಾರು ಬೆಂಕಿ ಅವಘಡಗಳ ಸರಣಿ (ಒಟ್ಟು 135 ಸ್ಥಳಗಳು):

ಬಾಗಲಕೋಟೆ: 24 ಸ್ಪಾಟ್

ಬಾದಾಮಿ: 24 ಸ್ಪಾಟ್

ಮುಧೋಳ: 22 ಸ್ಪಾಟ್

ಬೀಳಗಿ: 21 ಸ್ಪಾಟ್

ಜಮಖಂಡಿ: 19 ಸ್ಪಾಟ್

ರಬಕವಿ-ಬನಹಟ್ಟಿ: 13 ಸ್ಪಾಟ್

ಹುನಗುಂದ-ಇಳಕಲ್: 06 ಸ್ಪಾಟ್

ಅಮೀನಗಢ: 06 ಸ್ಪಾಟ್

ಇದನ್ನೂ ಓದಿ: “ಆಗ್ತಾ ಇಲ್ಲ ನಮ್ಮ ಕೈಯಲ್ಲಿ, ಬಸ್ ದರ ಏರಿಕೆ ಮಾಡಲೇಬೇಕು”: ಸಾರಿಗೆ ಸಂಸ್ಥೆಗಳ ಸಂಕಷ್ಟ ಬಿಚ್ಚಿಟ್ಟ ಸಚಿವ ಭೈರತಿ ಸುರೇಶ್

ಕೆಲವು ಕಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದ್ದರೆ, ಹಲವೆಡೆ ಉದ್ದೇಶಪೂರ್ವಕವಾಗಿಯೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮ ಹಾಗೂ ತುಮ್ಮರಮಟ್ಟಿ ಬಳಿ ನಿನ್ನೆ ರಾತ್ರಿಯೇ ಕಿಡಿಗೇಡಿಗಳು ರೈತರ ಕಬ್ಬಿನ ಹೊಲಕ್ಕೆ ಬೆಂಕಿ ಇಟ್ಟಿದ್ದಾರೆ. “ರೈತರ ಸುಧೀರ್ಘ ಹೋರಾಟವನ್ನು ಹತ್ತಿಕ್ಕಲು, ಹೋರಾಟನಿರತ ರೈತರನ್ನು ಆತಂಕಗೊಳಿಸಲು ಸೈತಾನಿ ಸಂಚು ನಡೆದಿದೆ. ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಬರುವ ಕಿಡಿಗೇಡಿಗಳು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದಾರೆ,” ಎಂದು ರೈತ ಸಂಘದ ಮುಖಂಡ ಶಿವನಗೌಡ ಪಾಟೀಲ್ ಹಾಗೂ ರೈತ ಬಸವರಾಜ ಛಬ್ಬಿ ಆರೋಪಿಸಿದ್ದಾರೆ.

ಕಬ್ಬು ಸುಟ್ಟು ಹೋಗಿರುವುದರಿಂದ ತೂಕ ಕಡಿಮೆಯಾಗುವುದರ ಜೊತೆಗೆ, ಸಕ್ಕರೆ ಕಾರ್ಖಾನೆಗಳು ಸುಟ್ಟ ಕಬ್ಬಿಗೆ ಅತ್ಯಂತ ಕಡಿಮೆ ಬೆಲೆ ನೀಡುತ್ತವೆ. ಇದರಿಂದ ರೈತರಿಗೆ ಎರಡೂ ಕಡೆಯಿಂದ ಭಾರಿ ನಷ್ಟವಾಗುತ್ತಿದೆ. “ಜಿಲ್ಲೆಯಲ್ಲಿ ಕಬ್ಬಿನ ಹೊಲಗಳಿಗೆ ಬೆಂಕಿ ತಗಲುತ್ತಿರುವ ಘಟನೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ತಾಲೂಕುವಾರು ಮಾಹಿತಿ ಸಂಗ್ರಹಿಸಿದ್ದು, ಶಾರ್ಟ್ ಸರ್ಕ್ಯೂಟ್ ಹಾಗೂ ಇತರ ಕಾರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.” ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದ್ದಾರೆ.

ಕಬ್ಬಿನ ಬೆಲೆಗಾಗಿ ಹೋರಾಟ ನಡೆಸುತ್ತಿರುವಾಗಲೇ ಕೋಟ್ಯಾಂತರ ರೂಪಾಯಿ ಬೆಳೆ ಸುಟ್ಟು ಕರಕಲಾಗಿರುವುದು ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿ ಹಚ್ಚುವ ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language