
ಬೆಂಗಳೂರು, (ಅಕ್ಟೋಬರ್ 19): ಕರ್ನಾಟಕದಲ್ಲೂ ಸಹ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್)ವಿರುದ್ಧ ರೈತ ಹಾಗೂ ದಲಿತ ಸಂಘಟನೆಗಳು ಸಿಡಿದೆದ್ದಿದ್ದು, ರಾಜ್ಯಾದ್ಯಂತ ಬೃಹತ್ ಹೋರಾಟಕ್ಕೆ ಕರೆ ನೀಡಿವೆ. ಅಕ್ಟೋಬರ್ 23ರಂದು ರಾಜ್ಯಾದ್ಯಂತ ಪ್ರಜಾಪ್ರಭುತ್ವ ಉಳಿವಿಗಾಗಿ ಜನತಾ ರ್ಯಾಲಿ ಮಾಡಲು ನಿರ್ಧರಿಸಿವೆ. ಚುನಾವಣಾ ಆಯೋಗದ ವಿರುದ್ಧ ಜಂತರ್ ಮಂತರ್ ಮಾದರಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮೆರವಣಿಗೆ ಮಾಡಲು ತೀರ್ಮಾನಿಸಿವೆ. ಈ ಸಂಬಂಧ ಬೆಂಗಳೂರಿನಲ್ಲಿಂದು ರೈತ ಮತ್ತು ದಲಿತ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿವೆ.
ಜಂತರ್ ಮಂತರ್ ಮಾದರಿಯಲ್ಲಿ ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, SIR ವಿರೋಧಿ ಹೋರಾಟಕ್ಕೆ ರೈತ ಮತ್ತು ದಲಿತ ಸಂಘಟನೆಗಳ ಬೆಂಬಲ ಘೋಷಿಸಿದ್ದು,ಅಕ್ಟೋಬರ್ 23 ಶುಕ್ರವಾರ ರಾಜ್ಯಾದ್ಯಂತ ಪ್ರಜಾಪ್ರಭುತ್ವ ಉಳಿವಿಗಾಗಿ ಜನತಾ ಮೆರವಣಿಗೆ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಂತರ್ ಮಂತರ್ ಮಾದರಿ ಪ್ರತಿಭಟನೆ ಮಾಡಲಾಗುತ್ತದೆ. ದೆಹಲಿಯಲ್ಲಿ ಪ್ರತಿಭಟನೆ ಹತ್ತಿಕ್ಕುತ್ತಿರುವುದು ಖಂಡನೀಯ. ಜಂತರ್ ಮಂತರ್ ನಿಷೇಧಿಸಿ ದೆಹಲಿಯನ್ನು ಪೊಲೀಸ್ ನಗರವನ್ನಾಗಿ ಪರಿವರ್ತನೆ ಮಾಡಿದ್ದಾರೆ. ಯುವ ಜನರು, ಮಹಿಳಾ ಪತ್ರಕರ್ತೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಸ್‌ಐಆರ್ ವಿವಾದದ ಬೆನ್ನಲ್ಲೇ 17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಎಸ್ಆರ್ ಘೋಷಿಸಿದ ಚುನಾವಣಾ ಆಯೋಗ
ರೈತರು ಮತ್ತೆ ಬರ್ತಾರೆ ಎಂದ ಪ್ರಕಾಶ್ ರಾಜ್
ಶಿಕ್ಷಣ ವ್ಯವಸ್ಥೆ ವಿರುದ್ಧ ಯುವ ಸಮೂಹ ಹೋರಾಟ ಕೈಗೆತ್ತಿಕೊಂಡಿದ್ದಾರೆ. ದೇಶಾದ್ಯಂತ ಯುವ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅದೇ ರೀತಿ SIR ವಿರುದ್ಧ ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ರೈತರು, ದಲಿತ ಸಂಘಟನೆಗಳು ಬೆಂಬಲ ನೀಡುತ್ತಿವೆ.ಪ್ರತಿಭಟನಾನಿರತ ಮಕ್ಕಳ ಮೇಲೆ ಹೊಡೆಯುತ್ತಿದ್ದರೂ ಸುಮ್ಮನಿದ್ದಾರೆ. ದೆಹಲಿಯಲ್ಲಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದರೂ ಸರ್ಕಾರ ಮೌನ ವಹಿಸಿದೆ. ಜಂತರ್ ಮಂತರ್ಗೆ ಹೋರಾಟಗಾರರು ಹೋಗದಂತೆ ನಿರ್ಬಂಧಿಸಿದ್ದಾರೆ. ಹೋರಾಟ ತಡೆಯಲು 30 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ. ಜೈಲಿನಲ್ಲಿರುವ ಗೂಂಡಾಗಳನ್ನು ಹೊರಗೆ ಕಳಿಸಿ ಲಾಠಿ ಕೊಟ್ಟು ಹೊಡೆಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡಲೂ ಬಿಡುತ್ತಿಲ್ಲ. ಈ ಹಿಂದೆ ರೈತರ ಮೇಲೆ ದಾಳಿ ಮಾಡಿದ್ರಿ, ಅಶ್ರುವಾಯು ಪ್ರಯೋಗಿಸಿದ್ರಿ. ನಂತರ ರೈತರ ಹೋರಾಟಕ್ಕೆ ಮಣಿದು ಹಲವು ವಿಧೇಯಕ ಹಿಂಪಡೆದ್ರಿ. ನಿಮ್ಮ ದುರಾಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ, ರೈತರು ಮತ್ತೆ ಬರ್ತಾರೆ ಎಂದು ಎಚ್ಚರಿಕೆ ನೀಡಿದರು.
ಎಸ್ಐಆರ್ ರದ್ದು ಮಾಡಬೇಕು ಎಂದ ರೈತ ಮುಖಂಡ
ಈ ವೇಳೆ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೇಸರಿಮಯವಾಗಿದೆ. ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಸಿಇಸಿ ನೇಮಕಾತಿ ಮಾಡಬೇಕು. ಸಿಇಸಿ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಕೂಡಲೇ ಎಸ್ಐಆರ್ ಪ್ರಕ್ರಿಯೆಯನ್ನು ರದ್ದು ಮಾಡಬೇಕು. ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ಮಾಡಲು ಯಾಕೆ ಬಿಡುತ್ತಿಲ್ಲ. ಜನವಿರೋಧಿ ನಡೆ ಅನುಸರಿಸಿದರೆ ಜನ ಮತ್ತೆಲ್ಲಿ ಹೋರಾಟ ಮಾಡಬೇಕು? ಕೇಂದ್ರ ಸರ್ಕಾರ ನಡೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಪ್ರತಿ ಹಳ್ಳಿಹಳ್ಳಿಯಲ್ಲೂ ಜಂತರ್ ಮಂತರ್ ಮಾದರಿ ಹೋರಾಟ ಮಾಡುತ್ತೇವೆ. ರೈತರು, ಪ್ರಗತಿಪರ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
