Hashtagintro

ಕೃಷ್ಣಮೃಗ ಬೇಟೆಯಿಂದ ಶುರುವಾದ ಹಗೆ: 28 ವರ್ಷ ಕಳೆದರೂ ಸಲ್ಮಾನ್ ಬೆನ್ನುಬಿಡದ ಬಿಷ್ಣೋಯ್ ಗ್ಯಾಂಗ್, ಈಗ ಟೈಗರ್ ಶ್ರಾಫ್ ಮೇಲೂ ದಾಳಿ

ಕೃಷ್ಣಮೃಗ ಬೇಟೆಯಿಂದ ಶುರುವಾದ ಹಗೆ: 28 ವರ್ಷ ಕಳೆದರೂ ಸಲ್ಮಾನ್  ಬೆನ್ನುಬಿಡದ ಬಿಷ್ಣೋಯ್ ಗ್ಯಾಂಗ್, ಈಗ ಟೈಗರ್ ಶ್ರಾಫ್ ಮೇಲೂ ದಾಳಿ

ನವದೆಹಲಿ, ಅಕ್ಟೋಬರ್ 19: ರವಿವಾರ ಸಂಜೆ ಬಾಲಿವುಡ್​ ನಟ ಟೈಗರ್​ ಶ್ರಾಫ್​ ಅವರನ್ನು ಹತ್ಯೆಗೈಯುವ ಪ್ರಯತ್ನ ವಿಫಲವಾದ ಬೆನ್ನಲ್ಲೇ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್ ಬಗ್ಗೆ ಎಲ್ಲೆಲ್ಲೂ ಚರ್ಚೆ ಪ್ರಾರಂಭವಾಗಿದೆ. ಟೈಗರ್​ ಶ್ರಾಫ್​ ಅವರನ್ನು ಹತ್ಯೆ ಮಾಡುವ ವಿಫಲ ಯತ್ನದ ಹಿಂದೆ ತಾವಿದ್ದೇವೆ ಎಂದು ಈಗಾಗಲೇ ಬಿಷ್ಣೋಯ್​ ಗ್ಯಾಂಗ್​ ಹೇಳಿದೆ. ಈ ಗ್ಯಾಂಗ್​ ಹೇಗೆ ಕೆಲಸ ಮಾಡುತ್ತೆ? ಯಾರೆಲ್ಲ ಇಲ್ಲ ಇದ್ದಾರೆ ಎನ್ನುವ ಕುತೂಹಲ ಮೂಡಿದೆ.

ಈ ಕುರಿತು, ಟಿವಿ9 ಡಿಜಿಟಲ್​ ವಿವರವನ್ನು ಕಲೆಹಾಕಿ ಓದುಗರ ಮುಂದೆ ಇಡುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವಿನ ಹಗೆತನಕ್ಕೆ ಮೂಲ ಕಾರಣ 1998 ರ ಕೃಷ್ಣಮೃಗ ಬೇಟೆ ಪ್ರಕರಣ. ಈ ದ್ವೇಷವು ಕೇವಲ ವ್ಯಕ್ತಿಗತ ರೌಡಿಸಂ ಅಲ್ಲದೆ, ಬಿಷ್ಣೋಯ್ ಸಮುದಾಯದ ಧಾರ್ಮಿಕ ನಂಬಿಕೆ ಹಾಗೂ ಲಾರೆನ್ಸ್ ಬಿಷ್ಣೋಯ್‌ನ ಅಂಡರ್‌ವರ್ಲ್ಡ್ ಪ್ರಾಬಲ್ಯ ಮೆರೆಯುವ ತಂತ್ರದೊಂದಿಗೆ ನೇರವಾಗಿ ಬೆಸೆದುಕೊಂಡಿದೆ.

1998ರ ಜೋಧ್‌ಪುರ ಘಟನೆ

1998 ರ ಸೆಪ್ಟೆಂಬರ್: ಅಕ್ಟೋಬರ್‌ನಲ್ಲಿ ರಾಜಸ್ಥಾನದ ಜೋಧ್‌ಪುರ ಸಮೀಪ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ತಬು, ನೀಲಂ ಮತ್ತಿತರರು ಕಂಕಣಿ ಗ್ರಾಮದ ಬಳಿ ಸಂರಕ್ಷಿತ ವನ್ಯಜೀವಿಯಾದ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂತು. ಗುಂಡಿನ ಸದ್ದು ಕೇಳಿದ ಸ್ಥಳೀಯ ಬಿಷ್ಣೋಯ್ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರಾಣಿಗಳನ್ನು ರಕ್ಷಿಸಲು ಯತ್ನಿಸಿದರು ಹಾಗೂ ವಾಹನವನ್ನು ಬೆನ್ನಟ್ಟಿದರು. ಗ್ರಾಮಸ್ಥರ ದೂರಿನ ಮೇರೆಗೆ ಸಲ್ಮಾನ್ ಖಾನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಅವರನ್ನು ಬಂಧಿಸಿ ಜೈಲಿಗೂ ಕಳುಹಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ನ್ಯಾಯಾಲಯದ ಸುದೀರ್ಘ ಕದನ

2018 ರಲ್ಲಿ ಜೋಧ್‌ಪುರ ವಿಚಾರಣಾ ನ್ಯಾಯಾಲಯವು ಸಲ್ಮಾನ್ ಖಾನ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ನಂತರ ಅವರಿಗೆ ಜಾಮೀನು ದೊರೆಯಿತು. ಈ ಪ್ರಕರಣ ಸದ್ಯ ಮೇಲ್ಮನವಿ ಹಂತದಲ್ಲಿದೆ.

ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗ ಏಕೆ ಅಷ್ಟು ಪವಿತ್ರ?

29 ನಿಯಮಗಳು ಮತ್ತು ಪ್ರಕೃತಿ ಆರಾಧನೆ: ರಾಜಸ್ಥಾನ ಮೂಲದ ಬಿಷ್ಣೋಯ್ ಸಮುದಾಯವು 15ನೇ ಶತಮಾನದ ಗುರು ಜಂಭೇಶ್ವರ (ಜಾಂಭೋಜಿ) ಅವರು ಬೋಧಿಸಿದ 29 ನಿಯಮಗಳನ್ನು (ಬಿಶ್ = 20, ನೊಯ್ = 9) ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ನಿಯಮಗಳಲ್ಲಿ ಮರಗಳನ್ನು ಕಡಿಯದಿರುವುದು ಹಾಗೂ ವನ್ಯಜೀವಿಗಳನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವುದು ಮುಖ್ಯ ಧರ್ಮವಾಗಿದೆ.

ಕೃಷ್ಣಮೃಗ ದೇವರ ಸಮಾನ: ಬಿಷ್ಣೋಯ್ ಸಮುದಾಯದಲ್ಲಿ ಕೃಷ್ಣಮೃಗಗಳನ್ನು ತಮ್ಮ ಧಾರ್ಮಿಕ ಗುರು ಜಾಂಭೋಜಿಯವರ ಪುನರ್ಜನ್ಮದ ರೂಪವೆಂದು ನಂಬಲಾಗುತ್ತದೆ. ಇಲ್ಲಿನ ಮಹಿಳೆಯರು ತಬ್ಬಲಿ ಜಿಂಕೆ ಮರಿಗಳಿಗೆ ತಮ್ಮ ಎದೆಹಾಲು ಕುಡಿಸಿ ಸಾಕುವುದು ಇಂದಿಗೂ ರೂಢಿಯಲ್ಲಿದೆ. ಅಂತಹ ಪವಿತ್ರ ಪ್ರಾಣಿಯನ್ನು ಸಲ್ಮಾನ್ ಕೊಂದಿರುವುದು ಅವರ ಧಾರ್ಮಿಕ ಭಾವನೆಗೆ ಬಿದ್ದ ದೊಡ್ಡ ಪೆಟ್ಟು ಎಂದು ಸಮುದಾಯ ಭಾವಿಸಿದೆ.

ಇದನ್ನೂ ಓದಿ:

ಬಾಲಿವುಡ್‌ನಿಂದ ಕೆನಡಾವರೆಗೆ ಬಿಷ್ಣೋಯ್ ಗ್ಯಾಂಗ್ ಹಾವಳಿ, ಜೈಲಿನಲ್ಲೇ ಕೂತು 700 ಶೂಟರ್‌ಗಳ ನಿಯಂತ್ರಣ

 

2018 ರ ಬಹಿರಂಗ ಬೆದರಿಕೆ: ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ವೇಳೆ ಲಾರೆನ್ಸ್ ಬಿಷ್ಣೋಯ್, ನಾವು ಸಲ್ಮಾನ್ ಖಾನ್‌ನನ್ನು ಜೋಧ್‌ಪುರದಲ್ಲೇ ಹತ್ಯೆ ಮಾಡುತ್ತೇವೆ, ಆಗ ಎಲ್ಲರಿಗೂ ನಮ್ಮ ನಿಜವಾದ ಶಕ್ತಿ ತಿಳಿಯುತ್ತದೆ ಎಂದು ಮಾಧ್ಯಮಗಳ ಕ್ಯಾಮೆರಾ ಮುಂದೆಯೇ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ.

ಲಾರೆನ್ಸ್ ಬಿಷ್ಣೋಯ್ ವಿಧಿಸಿರುವ ಷರತ್ತು

ಸಲ್ಮಾನ್ ಖಾನ್ ನಮ್ಮ ಕುಲದೇವರಾದ ಮುಕಾಮ್ ಮುಕ್ತಿ ಧಾಮ್ ದೇವಸ್ಥಾನಕ್ಕೆ ಬಂದು ಇಡೀ ಬಿಷ್ಣೋಯ್ ಸಮುದಾಯದ ಕ್ಷಮೆ ಯಾಚಿಸಬೇಕು. ತಪ್ಪೊಪ್ಪಿಕೊಳ್ಳದಿದ್ದರೆ ಅವರನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೈಲಿನ ಸಂದರ್ಶನದಲ್ಲಿ ಲಾರೆನ್ಸ್ ಹೇಳಿದ್ದ.

ಸಲ್ಮಾನ್ ಖಾನ್ ಅವರ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ರೇಖಿ (ಪರಿಶೀಲನೆ) ನಡೆಸಿ, ಶೂಟರ್‌ಗಳನ್ನು ನಿಯೋಜಿಸಲಾಗಿತ್ತು. 2024 ರ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಮನೆ ಮೇಲೆ ಬಿಷ್ಣೋಯ್ ಗ್ಯಾಂಗ್ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದರು. ಸಲ್ಮಾನ್ ಖಾನ್‌ಗೆ ಆಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮುಂಬೈನಲ್ಲಿ ಹತ್ಯೆ ಮಾಡಿ, ಸಲ್ಮಾನ್‌ಗೆ ಸಹಾಯ ಮಾಡುವವರಿಗೂ ಇದೇ ಗತಿ ಎಂದು ಗ್ಯಾಂಗ್ ಎಚ್ಚರಿಕೆ ನೀಡಿತ್ತು.

ಅಪರಾಧ ಲೋಕದ ಪ್ರಚಾರದ ತಂತ್ರ

ಕೃಷ್ಣಮೃಗ ಬೇಟೆಯ ವಿಷಯವನ್ನು ಲಾರೆನ್ಸ್ ಬಿಷ್ಣೋಯ್ ತನ್ನ ಗ್ಯಾಂಗ್‌ನ ಹಿತಾಸಕ್ತಿಗೂ ಬಳಸಿಕೊಳ್ಳುತ್ತಿದ್ದಾನೆ. ದೇಶದ ಅತಿ ದೊಡ್ಡ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕುವ ಮೂಲಕ ದೇಶಾದ್ಯಂತ ಸುದ್ದಿ ಸೃಷ್ಟಿಸುವುದು, ವ್ಯಾಪಾರಿಗಳು ಮತ್ತು ಬಾಲಿವುಡ್ ಮಂದಿಯಲ್ಲಿ ಭೀತಿ ಹುಟ್ಟಿಸಿ ಕೋಟ್ಯಂತರ ರೂಪಾಯಿ ಸುಲಿಗೆ ವಸೂಲಿ ಮಾಡುವುದು ಹಾಗೂ ತನ್ನನ್ನು ತಾನು ಸಮುದಾಯದ ನಾಯಕನಂತೆ ಬಿಂಬಿಸಿಕೊಳ್ಳುವುದು ಈ ಗ್ಯಾಂಗ್‌ನ ಪ್ರಮುಖ ತಂತ್ರವಾಗಿದೆ.

ಸಲ್ಮಾನ್ ಖಾನ್ ಪ್ರಕರಣದಲ್ಲಿರುವಂತೆ ಟೈಗರ್ ಶ್ರಾಫ್ ವಿರುದ್ಧ ಯಾವುದೇ ಕೃಷ್ಣಮೃಗ ಬೇಟೆಯಂತಹ ಧಾರ್ಮಿಕ ಅಥವಾ ಹಳೆಯ ವೈಯಕ್ತಿಕ ದ್ವೇಷದ ಹಿನ್ನೆಲೆ ಇಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಷ್ಣೋಯ್ ಗ್ಯಾಂಗ್ ಟೈಗರ್ ಶ್ರಾಫ್ ಸೇರಿದಂತೆ ಬಾಲಿವುಡ್‌ನ ಯುವ ನಟರ ಮೇಲೂ ಕಣ್ಣಿಡಲು ಕಾರಣಗಳಿವೆ.

ಸಲ್ಮಾನ್ ಖಾನ್ ಜೊತೆಗಿನ ಆಪ್ತತೆ ಮತ್ತು ಬೆಂಬಲ

ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಬಿಷ್ಣೋಯ್ ಗ್ಯಾಂಗ್, “ಸಲ್ಮಾನ್ ಖಾನ್‌ಗೆ ಯಾರು ಬೆಂಬಲವಾಗಿ ನಿಲ್ಲುತ್ತಾರೋ ಅಥವಾ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೋ ಅವರನ್ನು ಗುರಿಯಾಗಿಸುತ್ತೇವೆ” ಎಂದು ಎಚ್ಚರಿಕೆ ನೀಡಿತ್ತು. ಟೈಗರ್ ಶ್ರಾಫ್ ಮತ್ತು ಅವರ ಕುಟುಂಬ (ಜಾಕಿ ಶ್ರಾಫ್) ಸಲ್ಮಾನ್ ಖಾನ್ ಅವರೊಂದಿಗೆ ಅತ್ಯಂತ ಆಪ್ತ ಒಡನಾಟ ಹೊಂದಿದ್ದು, ಸಾರ್ವಜನಿಕವಾಗಿ ಸಲ್ಮಾನ್ ಪರ ನಿಂತಿರುವುದು ಗ್ಯಾಂಗ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language