Hashtagintro

ಕೈಗೆ ಗಾಯ, ಎದುರಾಳಿ ಪಾಕಿಸ್ತಾನ; ಆದರೂ ಆರ್ಯವೀರ್ ಆಟಕ್ಕೆ ಫ್ಯಾನ್ಸ್ ಫಿದಾ

ಕೈಗೆ ಗಾಯ, ಎದುರಾಳಿ ಪಾಕಿಸ್ತಾನ; ಆದರೂ ಆರ್ಯವೀರ್ ಆಟಕ್ಕೆ ಫ್ಯಾನ್ಸ್ ಫಿದಾ

ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಹಾಗೂ ಭಾರತ ಅಂಡರ್-19 ತಂಡದ ಆರಂಭಿಕ ಬ್ಯಾಟರ್ ಆರ್ಯವೀರ್ ಸೆಹ್ವಾಗ್ ಪಾಕಿಸ್ತಾನ ವಿರುದ್ಧದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಶನಿವಾರ ಅಲ್ ಅಮೆರತ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್ಯವೀರ್ ಕೇವಲ 51 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಮೊದಲ ವಿಕೆಟ್​ಗೆ ನಾಯಕ ಲಕ್ಷ್ಯ ರೈಚಂದಾನಿ ಜೊತೆಗೂಡಿ 95 ರನ್​​ಗಳ ಜೊತೆಯಾಟವನ್ನು ಕಟ್ಟಿದರು. ಈ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

61 ಎಸೆತಗಳಲ್ಲಿ 58 ರನ್

ಈ ಟೂರ್ನಿಯಲ್ಲಿ ಆರ್ಯವೀರ್ ದಾಖಲಿಸಿದ ನಾಲ್ಕನೇ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಇದಾಗಿದೆ. ಪಂದ್ಯದ 15ನೇ ಓವರ್‌ನಲ್ಲಿ ರಿಜ್ವಾನುಲ್ಲಾ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವ ಮೂಲಕ ಅವರು ಅರ್ಧಶತಕದ ಗಡಿ ದಾಟಿದರು. ಬಳಿಕವೂ ಉತ್ತಮ ಬ್ಯಾಟಿಂಗ್ ಮುಂದುವರಿಸಿದ ಆರ್ಯವೀರ್, ಅಂತಿಮವಾಗಿ 61 ಎಸೆತಗಳಲ್ಲಿ 58 ರನ್ ಗಳಿಸಿ ಲಾಂಗ್ ಆನ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳನ್ನು ಸಿಡಿಸಿದ ಆರ್ಯವೀರ್, ಬಲಗೈಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ತಂಡಕ್ಕಾಗಿ ಹೋರಾಡಿದರು. ಈ ಮೂಲಕ ತಮ್ಮ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದರು.

ಟೂರ್ನಿಯಲ್ಲಿ ಆರ್ಯವೀರ್ ಭರ್ಜರಿ ಪ್ರದರ್ಶನ

ಈ ಬಾರಿಯ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ ಒಟ್ಟು 356 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕವೂ ಸೇರಿದೆ. ನಾಲ್ಕು ಬಾರಿ 50ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಟೂರ್ನಿಯ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಆರ್ಯವೀರ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ನಾಯಕ ಲಕ್ಷ್ಯ ರೈಚಂದಾನಿ ಜೊತೆ ಮೊದಲ ವಿಕೆಟ್‌ಗೆ 117 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ಅವರು 57 ಎಸೆತಗಳಲ್ಲಿ 51 ರನ್ ಗಳಿಸಿದ್ದರು.

ಭಾರತಕ್ಕೆ 338 ರನ್‌ಗಳ ಬೃಹತ್ ಗುರಿ

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಏಷ್ಯಾಕಪ್ ಪ್ರಶಸ್ತಿ ಗೆಲ್ಲಲು 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ದಾಖಲೆಯ ಒಂಬತ್ತನೇ ಬಾರಿ ಅಂಡರ್-19 ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language