Hashtagintro

ಗದಗದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: 12 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಕ್ಕೆ ಅಡಿಗಲ್ಲು

ಗದಗದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: 12 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಕ್ಕೆ ಅಡಿಗಲ್ಲು

ಗದಗ, ನವೆಂಬರ್​​ 18: ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಮೈದಾನಕ್ಕಾಗಿ ಕಾಯುತ್ತಿದ್ದ ಗದಗ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಬೆಟಗೇರಿ ನರ್ಸಾಪುರ ಬಳಿ 12 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದ್ದಾರೆ. ಎರಡು ವರ್ಷದೊಳಗೆ ಮೈದಾನ ಪೂರ್ಣಗೊಳಿಸಿ ಗದಗದಲ್ಲೇ ರಣಜಿ ಟ್ರೋಫಿ ಪಂದ್ಯ ಆಯೋಜಿಸುವ ಭರವಸೆಯನ್ನು ಅವರು ನೀಡಿದ್ದು, ಈ ಮೂಲಕ ಗದಗದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುವ ನಿರೀಕ್ಷೆ ಮೂಡಿದೆ.

ಕ್ರಿಕೆಟ್​​ ಕ್ರೀಡಾಂಗಣ ಇಲ್ಲೇ ನಿರ್ಮಾಣ ಯಾಕೆ?

ನೂತನ ಕ್ರೀಡಾಂಗಣದ ನಿರ್ಮಾಣದಿಂದ ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಲು, ತರಬೇತಿ ಪಡೆಯಲು ಹುಬ್ಬಳ್ಳಿ, ಬೆಂಗಳೂರಿನತ್ತ ಮುಖ ಮಾಡಬೇಕಿದ್ದ ಗದಗದ ಯುವ ಪ್ರತಿಭೆಗಳಿಗೆ ಇದೀಗ ತವರು ಜಿಲ್ಲೆಯಲ್ಲೇ ಅವಕಾಶ ಸಿಗಲಿದೆ. ಶಾಸಕ ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಪಂಡಿತ್ ಭೀಮಸೇನ್ ಜೋಶಿ, ಪುಟ್ಟರಾಜ ಗವಾಯಿಗಳಂತಹ ಮಹನೀಯರ ನಾಡು, ಸುನೀಲ್ ಜೋಶಿಯಂತಹ ಕ್ರಿಕೆಟಿಗನ ತವರು ಗದಗ. ಸುನೀಲ್ ಜೋಶಿ ಕ್ರಿಕೆಟ್ ಕಲಿಯಲು ಬೆಂಗಳೂರಿಗೆ ತೆರಳಿ ಕಷ್ಟಪಟ್ಟಿದ್ದಾರೆ. ಮುಂದಿನ ಪೀಳಿಗೆಗೆ ಅಂತಹ ಪರಿಸ್ಥಿತಿ ಬರಬಾರದು ಎಂಬ ಆಶಯದೊಂದಿಗೆ ಕ್ರೀಡಾಂಗಣ ನಿರ್ಮಿಸುತ್ತಿರುವುದಾಗಿ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ:

ಉತ್ತರ ಕರ್ನಾಟಕದ ಜನರ ಪ್ರೀತಿಗೆ ವೆಂಕಟೇಶ್ ಪ್ರಸಾದ್ ಫಿದಾ

ಇನ್ನು ಉತ್ತರ ಕರ್ನಾಟಕದ ಜನರು ತೋರಿದ ಪ್ರೀತಿಗೆ ವೆಂಕಟೇಶ್ ಪ್ರಸಾದ್ ಫಿದಾ ಆಗಿದ್ದಾರೆ. ಬೆಳಗಾವಿಯಿಂದ ಗದಗದವರೆಗೆ ಒಂದೇ ದಿನದಲ್ಲಿ ಇಷ್ಟೊಂದು ಸನ್ಮಾನ, ಪ್ರೀತಿ ಎಂದೂ ಸಿಕ್ಕಿರಲಿಲ್ಲ. ಸನ್ಮಾನದ ಮೇಲೆ ಸನ್ಮಾನ ಮಾಡಿ ತನ್ನನ್ನು ಜನ ಪ್ರೀತಿಯಿಂದ ಬರಮಾಡಿಕೊಂಡಿರುವುದಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಯೋಜನೆ ಪೂರ್ಣಗೊಳ್ಳುವವರೆಗೆ ಎಲ್ಲ ರೀತಿಯ ಸಹಕಾರ’

ಇನ್ನು ವೆಂಕಟೇಶ್ ಪ್ರಸಾದ್ ಅವರ ಮಾತಿಗೆ ಶಾಸಕ ಎಚ್.ಕೆ. ಪಾಟೀಲ್ ಕೂಡ ಧ್ವನಿಗೂಡಿಸಿದ್ದು, ಗದಗ ಭಾಗದಲ್ಲಿ ಸೈಕ್ಲಿಂಗ್, ಕುಸ್ತಿ, ಕಬಡ್ಡಿಯಲ್ಲಿ ಈಗಾಗಲೇ ಹಲವರು ಸಾಧನೆ ಮಾಡಿದ್ದಾರೆ. ಕ್ರಿಕೆಟ್‌ನಲ್ಲೂ ಇಲ್ಲಿನ ಪ್ರತಿಭೆಗಳು ಬೆಳಕಿಗೆ ಬರಬೇಕಿದೆ. ಯೋಜನೆ ಪೂರ್ಣಗೊಳ್ಳುವವರೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗದಗ ಮಾತ್ರವಲ್ಲ, ದಾವಣಗೆರೆ, ತುಮಕೂರು, ಹಾಸನದಲ್ಲೂ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಕೆಎಸ್‌ಸಿಎ ಮುಂದಾಗಿರುವುದು ಸಂತಸದ ವಿಚಾರ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language