Hashtagintro

ಗಾಯಗೊಂಡರೂ ಕಾಕ್‌ಪಿಟ್ ಬಾಗಿಲು ತೆರೆದು ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್ ಮಚ್ಚರ್​ಗೆ ಯುಎಇಯ ಪ್ರತಿಷ್ಠಿತ ಗೌರವ

ಗಾಯಗೊಂಡರೂ ಕಾಕ್‌ಪಿಟ್ ಬಾಗಿಲು ತೆರೆದು ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್ ಮಚ್ಚರ್​ಗೆ ಯುಎಇಯ ಪ್ರತಿಷ್ಠಿತ ಗೌರವ

ಅಬುಧಾಬಿ, ಅಕ್ಟೋಬರ್ 28: ವಿಮಾನ ಹಾರಾಟದ ವೇಳೆ ಕಾಕ್​ಪಿಟ್​ನಲ್ಲಿ ನಡೆದ ಹಠಾತ್ ದಾಳಿಯ ಸಂದರ್ಭದಲ್ಲಿ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟರ್ ಸ್ಮಿತ್ ಮಚ್ಚರ್ ಹಾಗೂ ಫ್ಲೈದುಬೈ ಸಿಬ್ಬಂದಿಯನ್ನು ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ಜಾಯೆದ್ II ಪ್ರಶಸ್ತಿ ಯನ್ನು ಘೋಷಿಸಿದ್ದರು. ದುಬೈನ ಕ್ರೌನ್ ಪ್ರಿನ್ಸ್, ಉಪ ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರಾದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸೆಪ್ಟೆಂಬರ್ 30 ರಂದು ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು?
ಸೆಪ್ಟೆಂಬರ್ 30 ರಂದು ಫ್ಲೈದುಬೈ ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಅನಿರೀಕ್ಷಿತ ದಾಳಿ ಮತ್ತು ತುರ್ತು ಪರಿಸ್ಥಿತಿ ಉಂಟಾಯಿತು. ದುಷ್ಕರ್ಮಿಯ ದಾಳಿಯಿಂದಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದರು. ರಕ್ತಸ್ರಾವ ಹಾಗೂ ತೀವ್ರ ಗಾಯಗಳ ನಡುವೆಯೂ ಅವರು ಹೇಗೋ ನಿಯಂತ್ರಣ ಕಳೆದುಕೊಳ್ಳದೆ ಕಾಕ್‌ಪಿಟ್‌ನ ಒಳಗಿನ ಲಾಕ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.

ಬಾಗಿಲು ತೆರೆದ ತಕ್ಷಣವೇ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಒಂದು ವೇಳೆ ಬಾಗಿಲು ತೆರೆಯದಿದ್ದರೆ ವಿಮಾನವು ಭೀಕರ ಅಪಘಾತಕ್ಕೆ ಈಡಾಗುವ ಸಂಭವವಿತ್ತು. ಮಚ್ಚರ್ ಅವರ ಸಾಹಸದಿಂದಾಗಿ ಸಂಭಾವ್ಯ ಭಾರೀ ದುರಂತ ತಪ್ಪಿತು.

ಯುಎಇ ನಾಯಕತ್ವದಿಂದ ಶ್ಲಾಘನೆ
ರಾಷ್ಟ್ರಪತಿ ಮತ್ತು ಪ್ರಧಾನಿ ಭೇಟಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಹಾಗೂ ಯುಎಇ ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಮ್ಮುಖದಲ್ಲಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಾನವ ಜೀವವನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವುದು ಯುಎಇಯ ಪ್ರಮುಖ ಆದ್ಯತೆ ಎಂದು ನಾಯಕರು ಶ್ಲಾಘಿಸಿದರು. ಇದಕ್ಕೂ ಮುನ್ನ, ಕ್ಯಾಪ್ಟನ್ ಮಚ್ಚರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅಕ್ಟೋಬರ್ 3 ರಂದು ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಸ್ವತಃ ಆಸ್ಪತ್ರೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ಮಚ್ಚರ್ ಅವರ ಧೈರ್ಯ ಮತ್ತು ಜವಾಬ್ದಾರಿ ಯುಎಇ ವಾಯುಯಾನ ಕ್ಷೇತ್ರದ ಹೆಮ್ಮೆ ಎಂದು ಕೊಂಡಾಡಿದ್ದರು.

ಇದನ್ನೂ ಓದಿ: ಪ್ಲಂಬರ್ ವಿಮಾನ ಲ್ಯಾಂಡ್ ಮಾಡಿದ್ರಾ?: ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಚ್ಚರಿಯ ಹೇಳಿಕೆ

ಜಾಗತಿಕ ನಾಯಕರಿಂದ ಮೆಚ್ಚುಗೆಯ ಸುರಿಮಳೆ
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅಸಾಧಾರಣ ಸಾಹಸಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ: ಭಾರತದ ಹೆಮ್ಮೆಯ ಪುತ್ರ, ಸಂಕಷ್ಟದ ಸಮಯದಲ್ಲಿ ನೂರಾರು ಜೀವ ಉಳಿಸಿದ ‘ರಿಯಲ್ ಹೀರೋ’ ಎಂದು ಬಣ್ಣಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಗಂಭೀರವಾಗಿ ಗಾಯಗೊಂಡಿದ್ದರೂ ಎದೆಗುಂದದೆ ಕಾಕ್‌ಪಿಟ್ ಬಾಗಿಲು ತೆರೆದು ಎಲ್ಲರನ್ನೂ ರಕ್ಷಿಸಿದ ಭಾರತೀಯ ಕ್ಯಾಪ್ಟನ್‌ನ ಅಪ್ರತಿಮ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಇಸ್ರೇಲ್ ನಾಗರಿಕ ಶೌರ್ಯ ಪ್ರಶಸ್ತಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಚ್ಚರ್ ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಸ್ರೇಲ್ ಸರ್ಕಾರವು ಅವರಿಗೆ ಅಧಿಕೃತ ‘ನಾಗರಿಕ ಶೌರ್ಯ ಪ್ರಶಸ್ತಿ’ ನೀಡುವುದಾಗಿ ಘೋಷಿಸಿದೆ. ಮಚ್ಚರ್ ಸಂಪೂರ್ಣ ಚೇತರಿಸಿಕೊಂಡ ನಂತರ ಈ ಗೌರವ ಪ್ರದಾನ ಮಾಡಲಾಗುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language