Hashtagintro

ಗೋಕರ್ಣ ಸಮುದ್ರದಲ್ಲಿ ಮುಳುಗಿ ಜಾರ್ಖಂಡ್​ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು

ಗೋಕರ್ಣ ಸಮುದ್ರದಲ್ಲಿ ಮುಳುಗಿ ಜಾರ್ಖಂಡ್​ನ ಯುವತಿ ಸೇರಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳು ಸಾವು

ಉತ್ತರ ಕನ್ನಡ, ನವೆಂಬರ್ 2: ವಾರಾಂತ್ಯದ ಮೋಜು-ಮಸ್ತಿಗಾಗಿ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳ ತಂಡದ ಪ್ರವಾಸ ದುರಂತಮಯವಾಗಿ ಕೊನೆಗೊಂಡಿದೆ. ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಐವರು ಉದ್ಯೋಗಿಗಳು ಕೊಚ್ಚಿಹೋಗಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿತ್ತು. ದುಬ್ಬಣಶಶಿ ಬೀಚ್‌ನಲ್ಲಿರುವ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಸಿಲುಕಿ ಕೊಚ್ಚಿಹೋಗಿದ್ದರು.

ಘಟನೆ ತಿಳಿಯುತ್ತಿದ್ದಂತೆ ರೆಸಾರ್ಟ್‌ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ಕರೆತಂದಿದ್ದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಜಾರ್ಖಂಡ್ ಮೂಲದ 22 ವರ್ಷದ ಶೋಭಾ ದಾಸ್ ಆಸ್ಪತ್ರೆಯಲ್ಲಿ ಮೃತಪಟ್ಟರು. ತಂಡದ ನಾಯಕ ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟರು.

ನಾಪತ್ತೆಯಾಗಿದ್ದ ವಿಶ್ವನ ಶವ ಪತ್ತೆ

ಘಟನೆಯಲ್ಲಿ ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಇದೀಗ ಶೋಧ ಕಾರ್ಯಾಚರಣೆ ವೇಳೆ ಅವರ ಮೃತದೇಹ ಪತ್ತೆಯಾಗಿದೆ. ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಗೋಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಗೋಕರ್ಣದಲ್ಲಿ ಮೂವರು ಮೀನುಗಾರರ ಮರಣದ ಬೆನ್ನಲ್ಲೇ ಮತ್ತೊಂದು ದುರಂತ! ಮೀನಿನ ವಿಷಾನಿಲಕ್ಕೆ ಮತ್ತೆ ಇಬ್ಬರ ಸಾವು

ಘಟನೆ ಬೆನ್ನಲ್ಲೇ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಕುರಿತು ರೆಸಾರ್ಟ್ ಹಾಗೂ ಹೋಮ್‌ಸ್ಟೇ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ತೀವ್ರತೆಯನ್ನು ಲೆಕ್ಕಿಸದೆ ನೀರಿಗಿಳಿಯುವುದು ಅಪಾಯಕಾರಿಯಾಗಬಹುದು ಎಂಬುದು ಈ ದುರಂತದಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language