Hashtagintro

ಟೀ ಮತ್ತು ಬಿಸ್ಕತ್ತುಗಳನ್ನೇ ಬೆಳಗಿನ ಉಪಾಹಾರವಾಗಿ ಸೇವಿಸುತ್ತಿದ್ದೀರಾ? ಈ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ!

ಟೀ ಮತ್ತು ಬಿಸ್ಕತ್ತುಗಳನ್ನೇ ಬೆಳಗಿನ ಉಪಾಹಾರವಾಗಿ ಸೇವಿಸುತ್ತಿದ್ದೀರಾ? ಈ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ!

ಬೆಳಗ್ಗೆ ಎದ್ದ ತಕ್ಷಣ ಟೀ ಜೊತೆ ಬಿಸ್ಕತ್ತು ತಿನ್ನುವುದು ಹಲವರ ದಿನಚರಿಯ ಭಾಗವಾಗಿದೆ. ಈ ಅಭ್ಯಾಸ ತಾತ್ಕಾಲಿಕವಾಗಿ ಹಸಿವನ್ನು ಕಡಿಮೆ ಮಾಡಿದರೂ, ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುವುದಿಲ್ಲ. ವಿಶೇಷವಾಗಿ ಪ್ಯಾಕೆಟ್ ಬಿಸ್ಕತ್ತುಗಳಲ್ಲಿ ಮೈದಾ, ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರಬಹುದು. ಟೀಗೆ ಹೆಚ್ಚು ಸಕ್ಕರೆ ಸೇರಿಸಿದರೆ ಹೆಚ್ಚುವರಿ ಕ್ಯಾಲೊರಿಗಳೂ ದೇಹ ಸೇರುತ್ತವೆ. ಹಾಗಾದರೆ ಈ ರೀತಿಯ ಅಭ್ಯಾಸ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಮತ್ತು ಇದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ

ಮೈದಾ ಮತ್ತು ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸಿದಾಗ ಕೆಲವರಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ವೇಗವಾಗಿ ಏರಬಹುದು. ಇದನ್ನು ನಿಯಂತ್ರಿಸಲು ದೇಹ ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಇಂತಹ ಆಹಾರ ಪದ್ಧತಿ ನಿರಂತರವಾಗಿದ್ದು, ಒಟ್ಟಾರೆ ಜೀವನಶೈಲಿಯೂ ಅಸಮತೋಲನವಾಗಿದ್ದರೆ ಇನ್ಸುಲಿನ್ ಪ್ರತಿರೋಧದ ಅಪಾಯ ಹೆಚ್ಚಾಗಬಹುದು. ಈಗಾಗಲೇ ಪ್ರೀಡಯಾಬಿಟಿಸ್ ಇರುವವರು ಆಹಾರದ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಪೌಷ್ಟಿಕಾಂಶಗಳ ಕೊರತೆ ಉಂಟಾಗಬಹುದೇ?

ಟೀ ಮತ್ತು ಬಿಸ್ಕತ್ತುಗಳನ್ನೇ ಪ್ರತಿದಿನ ಪೂರ್ಣ ಉಪಾಹಾರವಾಗಿ ಸೇವಿಸಿದರೆ ಪ್ರೋಟೀನ್, ನಾರಿನಂಶ, ಆರೋಗ್ಯಕರ ಕೊಬ್ಬುಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಸಾಕಷ್ಟು ದೊರೆಯದೇ ಇರಬಹುದು.

ಪ್ರೋಟೀನ್ ಕೊರತೆ: ಬಿಸ್ಕತ್ತುಗಳಲ್ಲಿ ಪ್ರೋಟೀನ್ ಕಡಿಮೆ ಇರುವುದರಿಂದ ಕೇವಲ ಇವುಗಳನ್ನು ಸೇವಿಸುವುದು ಸ್ನಾಯುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ.

ಜೀರ್ಣಕ್ರಿಯೆ ಸಮಸ್ಯೆ: ನಾರಿನಂಶ ಕಡಿಮೆ ಇರುವುದರಿಂದ ಕೆಲವರಲ್ಲಿ ಮಲಬದ್ಧತೆ ಉಂಟಾಗಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಕ್ಯಾರೆಟ್ ಮಿಸ್ ಮಾಡ್ದೆ ತಿನ್ನಿ! ಆರೋಗ್ಯಕ್ಕೆ ಸಿಗುತ್ತೆ ನೀವು ಊಹಿಸಲೂ ಸಾಧ್ಯವಾಗದ ಪ್ರಯೋಜನ

ಕಬ್ಬಿಣದ ಹೀರಿಕೊಳ್ಳುವಿಕೆ: ಟೀಯಲ್ಲಿರುವ ಟ್ಯಾನಿನ್‌ಗಳು ಆಹಾರದಲ್ಲಿನ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು. ಕಬ್ಬಿಣದ ಕೊರತೆ ಇರುವವರು ಊಟದ ಜೊತೆಗೆ ಟೀ ಕುಡಿಯುವುದನ್ನು ತಪ್ಪಿಸುವುದು ಉತ್ತಮ.

ತೂಕ ಹೆಚ್ಚಳ: ಸಕ್ಕರೆ ಮತ್ತು ಕೊಬ್ಬು ಹೆಚ್ಚಿರುವ ಬಿಸ್ಕತ್ತುಗಳನ್ನು ಹೆಚ್ಚು ಸೇವಿಸುವುದರಿಂದ ಹೆಚ್ಚುವರಿ ಕ್ಯಾಲೊರಿಗಳು ದೇಹ ಸೇರುತ್ತವೆ.

ಟೀ ಜೊತೆ ಬಿಸ್ಕತ್ತು ಬದಲು ಏನು ತಿನ್ನಬಹುದು?

ಟೀ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಆದರೆ ಬಿಸ್ಕತ್ತುಗಳ ಬದಲು ಪೌಷ್ಟಿಕ ಆಹಾರಗಳನ್ನು ಆಯ್ಕೆ ಮಾಡಬಹುದು.

  • ಬಾದಾಮಿ ಮತ್ತು ಇತರ ಬೀಜಗಳು
  • ಕಡಿಮೆ ಎಣ್ಣೆಯಲ್ಲಿ ಹುರಿದ ಮಖಾನಾ
  • ಒಂದು ಬೇಯಿಸಿದ ಮೊಟ್ಟೆ
  • ಶೇಂಗಾ ಹಿಟ್ಟು ಅಥವಾ ಕಡಲೆಹಿಟ್ಟಿನ ಚಿಲ್ಲಾ
  • ಸೀಬೆಹಣ್ಣು ಅಥವಾ ಬಾಳೆಹಣ್ಣು
  • ಸೌತೆಕಾಯಿ ಮತ್ತು ಕ್ಯಾರೆಟ್ ತುಂಡುಗಳು

ಪ್ರತಿದಿನದ ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಿ

ಬೆಳಗ್ಗೆ ಟೀ ಜೊತೆ ಬಿಸ್ಕತ್ತು ತಿನ್ನುವುದು ಕೆಲವೊಮ್ಮೆ ದೊಡ್ಡ ಸಮಸ್ಯೆಯಾಗದಿದ್ದರೂ, ಅದನ್ನೇ ಪ್ರತಿದಿನದ ಪೂರ್ಣ ಉಪಾಹಾರವನ್ನಾಗಿ ಮಾಡಿಕೊಳ್ಳುವುದು ಸೂಕ್ತವಲ್ಲ. ಪ್ರೋಟೀನ್, ನಾರಿನಂಶ ಮತ್ತು ಇತರ ಪೌಷ್ಟಿಕಾಂಶಗಳಿರುವ ಸಮತೋಲಿತ ಉಪಾಹಾರ ಸೇವಿಸುವುದು ಉತ್ತಮ. ಸಕ್ಕರೆಯನ್ನು ಕಡಿಮೆ ಮಾಡುವುದು ಮತ್ತು ಆಹಾರದಲ್ಲಿ ವೈವಿಧ್ಯತೆ ಕಾಯ್ದುಕೊಳ್ಳುವುದು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುತ್ತದೆ.

ಸೂಚನೆ: ಇದು ಸಾಮಾನ್ಯ ಆರೋಗ್ಯ ಮಾಹಿತಿ ಮಾತ್ರ. ಮಧುಮೇಹ ಅಥವಾ ಕಬ್ಬಿಣದ ಕೊರತೆಯಂತಹ ಸಮಸ್ಯೆಗಳಿರುವವರು ವೈದ್ಯರು ಅಥವಾ ಆಹಾರ ತಜ್ಞರ ಸಲಹೆಯಂತೆ ಆಹಾರ ಬದಲಾವಣೆ ಮಾಡಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language