
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುಂಬೈನ ಜುಹು ನಿವಾಸದ ಬಳಿ ನಡೆದ ಭೀಕರ ಗುಂಡಿನ ದಾಳಿಯ ನಂತರ, ನಟಿ ದಿಶಾ ಪಟಾಣಿ ತಕ್ಷಣವೇ ಅವರ ಮನೆಗೆ ದೌಡಾಯಿಸಿ ಸಾಂತ್ವನ ಹೇಳಿದ್ದಾರೆ. ದಾಳಿಯ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ದಿಶಾ ಪಟಾಣಿ, ಪಾಪರಾಜಿಗಳ ಕಡೆಗೆ ಗಮನ ನೀಡದೇ ನೇರವಾಗಿ ಟೈಗರ್ ಶ್ರಾಫ್ ಅವರ ಮನೆಯೊಳಗೆ ತೆರಳಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ (ಅಕ್ಟೋಬರ್ 18) ಸಂಜೆ ಮುಂಬೈನ ಜುಹುವಿನ ಪುಷ್ಪಾ ಪಾರ್ಕ್ ಬಳಿ ಇರುವ ಕ್ಲಬ್‌ನಲ್ಲಿ ಫುಟ್‌ಬಾಲ್ ಆಟ ಮುಗಿಸಿ ವಾಪಸ್ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಅನಿರೀಕ್ಷಿತ ದಾಳಿಯಲ್ಲಿ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಚಾಲಕ ಹಾಗೂ ಆಟೋರಿಕ್ಷಾ ಚಾಲಕನಿಗೆ ಗಾಯಗಳಾಗಿವೆ. ಚಾಲಕನಿಗೆ ಗುಂಡೇಟು ತಗುಲಿದ ತಕ್ಷಣ ಎಚ್ಚೆತ್ತುಕೊಂಡ ನಟ ಟೈಗರ್ ಶ್ರಾಫ್ ತಾವೇ ಸ್ವತಃ ಸ್ಟೀರಿಂಗ್ ಹಿಡಿದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ಗಾಯಾಳುಗಳನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
View this post on Instagram
ಘಟನೆ ತಿಳಿಯುತ್ತಿದ್ದಂತೆ ಟೈಗರ್ ಶ್ರಾಫ್ ಅವರ ಮಾಜಿ ಗೆಳತಿ ದಿಶಾ ಪಟಾಣಿ ಆತಂಕದಿಂದ ಅವರ ಮನೆಗೆ ಬಂದಿಳಿದರು. ಕಾರಿನಿಂದಿಳಿದ ಕೂಡಲೇ ಪಾಪರಾಜಿಗಳ ಕ್ಯಾಮೆರಾ ಹಾಗೂ ಪ್ರಶ್ನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ ದಿಶಾ, ಅತ್ಯಂತ ಗಂಭೀರ ಹಾಗೂ ನೊಂದ ಮುಖಭಾವದೊಂದಿಗೆ ನೇರವಾಗಿ ಟೈಗರ್ ನಿವಾಸದ ಒಳಗಡೆ ಪ್ರವೇಶಿಸಿದರು. ಸುದೀರ್ಘ ಕಾಲದಿಂದ ಒಟ್ಟಿಗೆ ಡೇಟಿಂಗ್ ಮಾಡಿದ್ದ ಈ ಜೋಡಿ, 2022ರಲ್ಲಿ ಬೇರ್ಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದರೂ ಸಹ, ಟೈಗರ್ ಕಷ್ಟದ ಕಾಲದಲ್ಲಿ ದಿಶಾ ತಕ್ಷಣವೇ ಧಾವಿಸಿಬಂದಿರುವುದು ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಗುಂಡಿನ ದಾಳಿಯ ಆಘಾತಕಾರಿ ಘಟನೆಯ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಟೈಗರ್ ಶ್ರಾಫ್ ಅವರನ್ನು ದೂರವಾಣಿ ಮೂಲಕ ಹಾಗೂ ನೇರವಾಗಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಮತ್ತೊಂದೆಡೆ, ಈ ಕೃತ್ಯದ ಹೊಣೆಯನ್ನು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆಪ್ತರು ಹೊತ್ತುಕೊಂಡಿದ್ದಾರೆ. ಅನಿಲ್ ಪಂಡಿತ್ ಹಾಗೂ ಹರ್ಮನ್ ಸಂಧು ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಾವೇ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಮುಂಬೈ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
