
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೈವಾಡವಿರುವುದು ದೃಢಪಟ್ಟಿದ್ದು, ಈ ಕೃತ್ಯದ ಪ್ರಮುಖ ರೂವಾರಿ ಅನಿಲ್ ಪಂಡಿತ್ ಎಂಬಾತನಾಗಿದ್ದಾನೆ. ಅಚ್ಚರಿಯ ಸಂಗತಿಯೆಂದರೆ, 2023ರವರೆಗೆ ಯಾವುದೇ ಗಂಭೀರ ಅಪರಾಧ ಹಿನ್ನೆಲೆ ಹೊಂದಿರದ ಈತ, ಈಗ ವಿದೇಶದಿಂದಲೇ ಕುಕೃತ್ಯಗಳನ್ನು ಎಸಗುತ್ತಿದ್ದು, 12ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ದೆಹಲಿ ಪೊಲೀಸರು ಸೋಮವಾರ (ಅಕ್ಟೋಬರ್ 19) ತಿಳಿಸಿದ್ದಾರೆ.
30ರ ಹರೆಯದ ಅನಿಲ್ ಪಂಡಿತ್, ಹರಿಯಾಣದ ಪಾಣಿಪತ್ ಜಿಲ್ಲೆಯ ರೈ ಕಲಾನ್ ಗ್ರಾಮದ ನಿವಾಸಿ. 2023ರಲ್ಲಿ ಭಾರತ ತೊರೆದು ವಿದೇಶಕ್ಕೆ ತೆರಳಿದ್ದ ಈತನ ಮೇಲೆ ಆಗ ಯಾವುದೇ ದೊಡ್ಡ ಅಪರಾಧ ಪ್ರಕರಣಗಳಿರಲಿಲ್ಲ. ಆದರೆ, ವಿದೇಶಕ್ಕೆ ಹೋದ ಬಳಿಕ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಂಪರ್ಕಕ್ಕೆ ಬಂದಿದ್ದು, ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಗ್ಯಾಂಗ್‌ನ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿರುವ ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ಕಲಾವಿದರನ್ನು ಬೆದರಿಸಿ, ರಕ್ಷಣೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುವುದು ಮತ್ತು ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಗುಂಡಿನ ದಾಳಿಗಳನ್ನು ನಡೆಸುವುದು ಈತನ ಮುಖ್ಯ ಕಸುಬಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಪಾಣಿಪತ್, ಸೋನಿಪತ್ ಮತ್ತು ಕರ್ನಾಲ್‌ನಲ್ಲಿ ಉದ್ಯಮಿಗಳನ್ನು ಬೆದರಿಸಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸುಲಿಗೆ ಮಾಡಿದ ಸುಮಾರು 10ರಿಂದ 12 ಪ್ರಕರಣಗಳಲ್ಲಿ ಅನಿಲ್ ಪಂಡಿತ್ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದಾನೆ. ಸದ್ಯ ದೆಹಲಿ ಮತ್ತು ಮುಂಬೈ ಪೊಲೀಸರು ಈ ನಂಟು ಕುರಿತು ತೀವ್ರ ತನಿಖೆ ಮುಂದುವರೆಸಿದ್ದಾರೆ.
ಭಾನುವಾರ (ಅಕ್ಟೋಬರ್ 18) ಸಂಜೆ ಮುಂಬೈನ ಜುಹುವಿನಲ್ಲಿ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಟೈಗರ್ ಶ್ರಾಫ್ ಪಾರಾಗಿದ್ದರೂ, ಅವರ ಚಾಲಕ ಹಾಗೂ ಸ್ಥಳದಲ್ಲಿದ್ದ ಅಭಿಮಾನಿಯೊಬ್ಬರಿಗೆ ಗುಂಡೇಟು ತಗುಲಿತ್ತು. ಈ ಕೃತ್ಯದ ಬೆನ್ನಲ್ಲೇ ಅನಿಲ್ ಪಂಡಿತ್ ಹಾಗೂ ಆತನ ಸಹಚರ ಹರ್ಮನ್ ಸಂಧು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಸಂದೇಶ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರು. ಅಲ್ಲದೆ, ಚಿತ್ರರಂಗದವರು ಕೆಲವು ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಂಡರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಸಾಂತ್ವನ ಹೇಳಲು ಬಂದ ದಿಶಾ ಪಟಾಣಿ
ಕೇವಲ ಮುಂಬೈ ದಾಳಿ ಮಾತ್ರವಲ್ಲದೆ, 2026ರ ಜೂನ್‌ನಲ್ಲಿ ದೆಹಲಿಯ ಪಶ್ಚಿಮ ಭಾಗದಲ್ಲಿ ಪಂಜಾಬಿ ಗಾಯಕ ಗುರು ರಂಧವಾ ಅವರಿಗೆ ಸೇರಿದ ‘24HS ಫಿಟ್‌ನೆಸ್’ ಜಿಮ್‌ನ ಹೊರಗೆ ನಡೆದ ಗುಂಡಿನ ದಾಳಿಯ ಹಿಂದೆಯೂ ಅನಿಲ್ ಪಂಡಿತ್ ಕೈವಾಡವಿರುವುದು ತನಿಖೆಯಿಂದ ಬಯಲಾಗಿದೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಈಗಾಗಲೇ ಶೂಟರ್‌ಗಳನ್ನು ಬಂಧಿಸಿದ್ದು, ಅನಿಲ್ ಪಂಡಿತ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
