Hashtagintro

ತಿರುಪತಿ ಭಕ್ತರಿಗೆ ಮಹತ್ವದ ಮಾಹಿತಿ: ಫೆಬ್ರವರಿ ತಿಂಗಳ ಶ್ರೀವಾರಿ ದರ್ಶನ ಮತ್ತು ಸೇವಾ ಟಿಕೆಟ್‌ಗಳ ವೇಳಾಪಟ್ಟಿ ಪ್ರಕಟ

ತಿರುಪತಿ ಭಕ್ತರಿಗೆ ಮಹತ್ವದ ಮಾಹಿತಿ: ಫೆಬ್ರವರಿ ತಿಂಗಳ ಶ್ರೀವಾರಿ ದರ್ಶನ ಮತ್ತು ಸೇವಾ ಟಿಕೆಟ್‌ಗಳ ವೇಳಾಪಟ್ಟಿ ಪ್ರಕಟ

ತಿರುಮಲ: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಮುಂಬರುವ ಫೆಬ್ರವರಿ ತಿಂಗಳಿನ ಶ್ರೀವಾರಿ ದರ್ಶನ, ಅರ್ಜಿತ ಸೇವೆಗಳು ಹಾಗೂ ವಸತಿ ಕೊಠಡಿಗಳ ಆನ್‌ಲೈನ್ ಕೋಟಾ ಬಿಡುಗಡೆಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಕ್ತರ ಅನುಕೂಲಕ್ಕಾಗಿ ನವೆಂಬರ್ 18 ರಿಂದ ನವೆಂಬರ್ 24 ರವರೆಗೆ ಹಂತ ಹಂತವಾಗಿ ವಿವಿಧ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಯಾತ್ರೆಗೆ ಯೋಜಿಸುತ್ತಿರುವ ಭಕ್ತರು ನಿಗದಿತ ದಿನಾಂಕ ಮತ್ತು ಸಮಯಕ್ಕೆ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.

ನವೆಂಬರ್ 18 ರಂದು ಎಲೆಕ್ಟ್ರಾನಿಕ್ ಡಿಪ್ ಸೇವೆಗಳ ಬಿಡುಗಡೆ:

ಸುಪ್ರಭಾತ, ಅರ್ಚನ ಮತ್ತು ಅಷ್ಟದಳ ಪಾದಪದ್ಮಾರಾಧನೆ ಸೇವೆಗಳ ಟಿಕೆಟ್ ಕೋಟಾ ನವೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಆಸಕ್ತ ಭಕ್ತರು ನವೆಂಬರ್ 20ರ ಬೆಳಿಗ್ಗೆ 10 ಗಂಟೆಯವರೆಗೆ ಎಲೆಕ್ಟ್ರಾನಿಕ್ ಡಿಪ್‌ಗಾಗಿ (ಲಕ್ಕಿ ಡಿಪ್) ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದ ಭಕ್ತರು ನವೆಂಬರ್ 22ರ ಮಧ್ಯಾಹ್ನ 12 ಗಂಟೆಯೊಳಗೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ಟಿಕೆಟ್‌ಗಳನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ನವೆಂಬರ್ 21 ರಂದು ಅರ್ಜಿತ ಮತ್ತು ವರ್ಚುವಲ್ ಸೇವೆಗಳು:

ನವೆಂಬರ್ 21 ರಂದು ಬೆಳಿಗ್ಗೆ 10 ಗಂಟೆಗೆ ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದೇ ದಿನ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳು ಮತ್ತು ಸಂಬಂಧಿತ ದರ್ಶನ ಸ್ಲಾಟ್‌ಗಳ ಕೋಟಾ ಭಕ್ತರಿಗೆ ಲಭ್ಯವಾಗಲಿದೆ.

ನವೆಂಬರ್ 23 ರಂದು ವಿಶೇಷ ದರ್ಶನ ಟೋಕನ್‌ಗಳು:

ನವೆಂಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣಾ ಟೋಕನ್‌ಗಳು ಹಾಗೂ ಬೆಳಿಗ್ಗೆ 11 ಗಂಟೆಗೆ ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳು ಬಿಡುಗಡೆಯಾಗಲಿವೆ. ಅಲ್ಲದೆ, ವೃದ್ಧರು, ಅಂಗವಿಕಲರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಭಕ್ತರಿಗಾಗಿ ಮೀಸಲಿರುವ ಉಚಿತ ವಿಶೇಷ ದರ್ಶನ ಟೋಕನ್‌ಗಳನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: ಬ್ರಿಟಿಷ್ ಸಂಸತ್ತಿನಲ್ಲಿ ಮೊದಲ ಬಾರಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!

ನವೆಂಬರ್ 24 ರಂದು ವಿಶೇಷ ಪ್ರವೇಶ ದರ್ಶನ ಮತ್ತು ವಸತಿ ಕೋಟಾ:

ಭಕ್ತರು ಹೆಚ್ಚು ನಿರೀಕ್ಷಿಸುವ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ನವೆಂಬರ್ 24 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿನ ವಸತಿ ಕೊಠಡಿಗಳ ಕೋಟಾವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಭಕ್ತರು ತಮ್ಮ ವಾಸ್ತವ್ಯಕ್ಕಾಗಿ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಬಹುದು.

ಬುಕ್ಕಿಂಗ್ ಮಾಡುವುದು ಹೇಗೆ?

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಟಿಟಿಡಿ ಅಧಿಕಾರಿಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಭಕ್ತರು ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ https://ttdevasthanams.ap.gov.in ಮೂಲಕ ಮಾತ್ರ ಟಿಕೆಟ್ ಮತ್ತು ವಸತಿ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language