
ಬೆಂಗಳೂರು, ಅಕ್ಟೋಬರ್ 18: ದಸರಾ ಹಬ್ಬದ ರಜೆಯ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಮಧ್ಯರಾತ್ರಿಯಲ್ಲೂ ಭಾರೀ ಸಂಚಾರ ದಟ್ಟಣೆ ಕಂಡುಬಂದಿದೆ. ಸಾಲು ಸಾಲು ರಜೆ ಸಿಕ್ಕಿರುವ ಕಾರಣ ನಗರದಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ವಂತ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಶನಿವಾರವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಹೊರವಲಯಗಳು ಹಾಗೂ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಯಶವಂತಪುರ ಸರ್ಕಲ್ ಮತ್ತು ಗೊರಗುಂಟೆಪಾಳ್ಯ ರಸ್ತೆಗಳಲ್ಲಿ ಮಧ್ಯರಾತ್ರಿ 1 ಗಂಟೆಯಾದರೂ ವಾಹನಗಳ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ರಾಜಾಜಿನಗರದಿಂದ ಯಶವಂತಪುರ ತಲುಪಲು ಎರಡು ಗಂಟೆಗೂ ಹೆಚ್ಚು ಸಮಯ ತಗುಲಿದ ಬಗ್ಗೆ ಪ್ರಯಾಣಿಕರು ತಿಳಿಸಿದ್ದಾರೆ. ಮಳೆ ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಟಿರುವುದು ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
