Hashtagintro

ದೆಹಲಿಯ ಗಾಳಿಯಲ್ಲಿ ಪಟಾಕಿ ವಿಷ: ಮಾಲಿನ್ಯದ ಶೇ. 80ಕ್ಕೂ ಹೆಚ್ಚು ಪಾಲು ಸಿಡಿಮದ್ದುಗಳದ್ದೇ

ದೆಹಲಿಯ ಗಾಳಿಯಲ್ಲಿ ಪಟಾಕಿ ವಿಷ: ಮಾಲಿನ್ಯದ ಶೇ. 80ಕ್ಕೂ ಹೆಚ್ಚು ಪಾಲು ಸಿಡಿಮದ್ದುಗಳದ್ದೇ

ನವದೆಹಲಿ, ನವೆಂಬರ್ 11: ದೀಪಾವಳಿ ಮುಗಿದರೂ ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಮಾಲಿನ್ಯದಿಂದ ಮುಕ್ತಿ ಸಿಕ್ಕಿಲ್ಲ. ಹಬ್ಬದ ಮರುದಿನ ದೆಹಲಿಯ ವಾಯುಮಾಲಿನ್ಯಕ್ಕೆ ಶೇ.80ಕ್ಕಿಂತ ಹೆಚ್ಚು ಕೊಡುಗೆ ಪಟಾಕಿ ಹೊಗೆಗಳಿಂದ ಬಂದಿದೆ ಎಂದು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ ತಿಳಿಸಿದೆ. ವಾಹನಗಳ ಹೊಗೆ, ಕಟ್ಟಡ ಕಾಮಗಾರಿ ಮತ್ತು ಇತರ ಮೂಲಗಳಿಂದ ನಗರದಲ್ಲಿ ಈಗಾಗಲೇ ಮಾಲಿನ್ಯ ಹೆಚ್ಚಾಗಿತ್ತು. ಆದರೆ ದೀಪಾವಳಿ ಬಳಿಕ ಪಟಾಕಿಗಳ ಹೊಗೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ದೆಹಲಿಯಲ್ಲಿ ಮತ್ತೆ ಹೆಚ್ಚಿದ ವಾಯುಮಾಲಿನ್ಯ

ನವೆಂಬರ್ 8ರಂದು ದೀಪಾವಳಿ ದಿನ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 376ಕ್ಕೆ ತಲುಪಿತ್ತು. ಕಳೆದ ಐದು ವರ್ಷಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ದಾಖಲಾಗಿದ್ದ ಅತ್ಯಂತ ಕೆಟ್ಟ ಮಟ್ಟ ಇದಾಗಿದೆ ಎಂದು ವರದಿಯಾಗಿದೆ. ಮರುದಿನವೂ ಗಾಳಿಯ ಗುಣಮಟ್ಟ ‘ತುಂಬಾ ಕಳಪೆ’ ವಿಭಾಗದಲ್ಲೇ ಮುಂದುವರಿದಿತ್ತು. ನಗರದ ಹಲವು ಭಾಗಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.

ಮಂಗಳವಾರ ಬೆಳಗ್ಗೆ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ಸಂಜೆ 4 ಗಂಟೆಗೆ ಎಕ್ಯೂಐ 299ಕ್ಕೆ ಇಳಿದು ‘ಕಳಪೆ’ ವಿಭಾಗಕ್ಕೆ ಬಂದಿತ್ತು. ಆದರೆ ಸಂಜೆ 6 ಗಂಟೆಗೆ ಮತ್ತೆ 302ಕ್ಕೆ ಏರಿಕೆಯಾಗಿ ‘ತುಂಬಾ ಕಳಪೆ’ ವಿಭಾಗಕ್ಕೆ ಮರಳಿತು.

ಪಟಾಕಿಗಳೇ ಪ್ರಮುಖ ಕಾರಣ
ಐಐಟಿಎಂ ಮಾದರಿಗಳ ಪ್ರಕಾರ, ದೀಪಾವಳಿಯ ಮರುದಿನ ದೆಹಲಿಯ ಮಾಲಿನ್ಯದಲ್ಲಿ ಪಟಾಕಿಗಳ ಪಾಲು ಶೇಕಡಾ 80ಕ್ಕಿಂತ ಹೆಚ್ಚಿತ್ತು. ಮಂಗಳವಾರ ಬೆಳಗಿನ ಜಾವ 1ರಿಂದ ಬೆಳಗ್ಗೆ 9ರವರೆಗಿನ ಅಂದಾಜಿನಲ್ಲಿ ಪಟಾಕಿಗಳ ಹೊಗೆ ಶೇಕಡಾ 29.9ರಷ್ಟು ಕೊಡುಗೆ ನೀಡಿತ್ತು. ಗಾಳಿಯಲ್ಲಿನ ರಾಸಾಯನಿಕ ಕ್ರಿಯೆಗಳಿಂದ ರೂಪುಗೊಳ್ಳುವ ದ್ವಿತೀಯ ಸಾವಯವ ಸಂಯುಕ್ತಗಳು ಶೇಕಡಾ 17.5ರಷ್ಟು ಪಾಲು ಹೊಂದಿದ್ದವು. ವಾಹನಗಳಿಂದ ಹೊರಬರುವ ಹೊಗೆ ಕೂಡ ಮಾಲಿನ್ಯದ ಪ್ರಮುಖ ಮೂಲಗಳಲ್ಲಿ ಒಂದಾಗಿತ್ತು.

ದೀಪಾವಳಿ ನಂತರ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಲು ಪಂಜಾಬ್ ಮತ್ತು ಹರಿಯಾಣದ ಹೊಲಗಳಲ್ಲಿ ಬೆಳೆ ಅವಶೇಷ ಸುಡುವುದೂ ಕಾರಣವಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸೋಮವಾರದ ಮಾಲಿನ್ಯದಲ್ಲಿ ಕೂಳೆ ಸುಡುವಿಕೆಯ ಕೊಡುಗೆ ಪ್ರಮುಖವಾಗಿರಲಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣೆಯ ನಿರ್ಧಾರ ಬೆಂಬಲ ವ್ಯವಸ್ಥೆಯ ಅಂದಾಜು ಸೂಚಿಸಿದೆ. ಅನುಕೂಲಕರ ಗಾಳಿಯು ಮಾಲಿನ್ಯಕಾರಕಗಳನ್ನು ಚದುರಿಸಲು ಸಹಾಯ ಮಾಡಿದ್ದರಿಂದ ನೆರೆಯ ರಾಜ್ಯಗಳಿಂದ ಹೊಗೆ ಒಳಬರುವ ಪ್ರಮಾಣವೂ ಕಡಿಮೆಯಾಗಿತ್ತು.

ಇದನ್ನೂ ಓದಿ: ಕರ್ನಾಟಕದ ವಾಯು ಗುಣಮಟ್ಟ: ಬೆಂಗಳೂರಿನ ಗಾಳಿಯಲ್ಲಿ ಹೆಚ್ಚಿದ ಮಾಲಿನ್ಯದ ಆತಂಕ! ಯಾವ ಏರಿಯಾದಲ್ಲಿ AQI ಎಷ್ಟಿದೆ?

ಚಳಿಗಾಳಿ ಮತ್ತು ಮಂಜಿನಿಂದ ಸಮಸ್ಯೆ ಮತ್ತಷ್ಟು ಗಂಭೀರ
ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದು, ಗಾಳಿಯ ವೇಗ ಕುಸಿಯುವುದು ಮತ್ತು ಮಂಜು ಉಂಟಾಗುವುದು ಮಾಲಿನ್ಯಕಾರಕಗಳು ನೆಲದ ಸಮೀಪದಲ್ಲೇ ಉಳಿಯಲು ಕಾರಣವಾಗಬಹುದು. ಹೀಗಾಗಿ ವಾಹನಗಳು, ಕೈಗಾರಿಕೆಗಳು, ಕಟ್ಟಡ ಕಾಮಗಾರಿಗಳು ಮತ್ತು ಪಟಾಕಿಗಳಿಂದ ಹೊರಬರುವ ಹೊಗೆ ಸುಲಭವಾಗಿ ಹರಡದೆ ವಾತಾವರಣದಲ್ಲಿ ಸಂಗ್ರಹವಾಗುತ್ತದೆ. ದೆಹಲಿಯಲ್ಲಿ ಚಳಿಗಾಲದ ಸಮಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇಂದಿನ ಗಾಳಿಯ ಗುಣಮಟ್ಟ ಹೇಗಿದೆ?
ನವೆಂಬರ್ 11ರ ಬೆಳಗಿನ ವರದಿಗಳ ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಇನ್ನೂ ‘ತುಂಬಾ ಕಳಪೆ’ ಮಟ್ಟದಲ್ಲಿದೆ. ಕೆಲವು ವಾಯುಮಾಪನ ಕೇಂದ್ರಗಳಲ್ಲಿ 350ಕ್ಕೂ ಹೆಚ್ಚು ಎಕ್ಯೂಐ ದಾಖಲಾಗಿದೆ. ಗಾಳಿಯ ವೇಗ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಮಾಲಿನ್ಯ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ.

ಎಕ್ಯೂಐ ಎಂದರೇನು? ಆರೋಗ್ಯದ ಮೇಲೆ ಏನು ಪರಿಣಾಮ?
ಎಕ್ಯೂಐಎಂದರೆ ಗಾಳಿಯ ಗುಣಮಟ್ಟವನ್ನು ಅಳೆಯುವ ಸೂಚ್ಯಂಕ. ಇದರ ಮೂಲಕ ಗಾಳಿಯಲ್ಲಿ ಎಷ್ಟು ಮಾಲಿನ್ಯವಿದೆ ಮತ್ತು ಅದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯಬಹುದು.

ಎಕ್ಯೂಐ ಪ್ರಮಾಣ
0–50 ಉತ್ತಮ
51–100 ತೃಪ್ತಿಕರ
101–200 ಸಾಧಾರಣ
201–300 ಕಳಪೆ
301–400 ತುಂಬಾ ಕಳಪೆ
401–500 ತೀವ್ರ ಕಳಪೆ

ಎಕ್ಯೂಐ 301ರಿಂದ 400ರ ನಡುವೆ ಇದ್ದರೆ ದೀರ್ಘಕಾಲ ಇಂತಹ ಗಾಳಿಯನ್ನು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಮಕ್ಕಳು, ವೃದ್ಧರು, ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಇಂತಹ ಸಮಯದಲ್ಲಿ ಹೊರಾಂಗಣ ವ್ಯಾಯಾಮ ಮತ್ತು ದೀರ್ಘಕಾಲದ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಸೂಕ್ತ

ಸರ್ಕಾರದಿಂದ ಮಾಲಿನ್ಯ ನಿಯಂತ್ರಣ ಕ್ರಮ
ದೆಹಲಿಯಲ್ಲಿ ಮಾಲಿನ್ಯ ಕಡಿಮೆ ಮಾಡಲು ಸರ್ಕಾರ ನೀರು ಸಿಂಪಡಣೆ, ಆಂಟಿ-ಸ್ಮಾಗ್ ಗನ್‌ಗಳ ಬಳಕೆ, ರಸ್ತೆ ಸ್ವಚ್ಛತೆ ಮತ್ತು ಧೂಳು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಧೂಳನ್ನು ನಿಯಂತ್ರಿಸಲು ನೀರು ಸಿಂಪಡಿಸುವ ಟ್ಯಾಂಕರ್‌ಗಳು, ಯಂತ್ರಗಳನ್ನೂ ನಿಯೋಜಿಸಲಾಗಿದೆ. ಆದರೆ ಪಟಾಕಿಗಳ ಹೊಗೆ ಮಾತ್ರವಲ್ಲದೆ ವಾಹನಗಳ ಹೊಗೆ, ಕೈಗಾರಿಕೆಗಳ ಹೊರಸೂಸುವಿಕೆ ಮತ್ತು ಕಟ್ಟಡ ಕಾಮಗಾರಿಗಳ ಧೂಳನ್ನೂ ನಿಯಂತ್ರಿಸಿದಾಗ ಮಾತ್ರ ದೀರ್ಘಕಾಲದ ಪರಿಹಾರ ಸಾಧ್ಯ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language