
ಉಳಿತಾಯವು (Saving) ಆರ್ಥಿಕ ಭದ್ರತೆಯ ಬುನಾದಿಯಾಗಿದೆ. ಇದು ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದು ಮಾತ್ರವಲ್ಲ, ಅನಗತ್ಯ ವೆಚ್ಚಗಳನ್ನು ತಪ್ಪಿಸುತ್ತದೆ. ಹಾಗಾಗಿ ಉಳಿತಾಯ ಅತ್ಯಗತ್ಯ. ಆದರೆ ಇಂದು ಅನೇಕರಿಗೆ ಎಷ್ಟು ದುಡ್ಡು ಸಂಪಾದನೆ ಮಾಡಿದರೂ ಸಹ, ಆ ಹಣವನ್ನು ಹೂಡಿಕೆ ಮತ್ತು ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ತಿಂಗಳ ಕೊನೆಯಲ್ಲಿ ಖಾಲಿ ಕೈಯಲ್ಲಿ ಕುಳಿತುಬಿಡುತ್ತಾರೆ. ನೀವು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೀರಾ? ನೀವು ದೈನಂದಿನ ಜೀವನದಲ್ಲಿ ಮಾಡುವ ಕೆಲವೊಂದು ತಪ್ಪುಗಳೇ ಇದಕ್ಕೆ ಮುಖ್ಯ ಕಾರಣ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ದುಂದು ವೆಚ್ಚವನ್ನು ತಪ್ಪಿಸಿ, ಹಣವನ್ನು ಉಳಿತಾಯ ಮಾಡಬಹುದು. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಖರೀದಿಯ ಸಂದರ್ಭದಲ್ಲಿ ಸ್ವಲ್ಪ ಹೊತ್ತು ತಾಳ್ಮೆಯಿಂದಿರಿ:
ಆನ್ಲೈನ್ ಅಥವಾ ಆಫ್ಲೈನ್ ಯಾವುದೇ ಶಾಪಿಂಗ್ ಮಾಡುವಾಗಲೂ, ರಿಯಾಯಿತಿಗಳ ಕಾರಣದಿಂದಾಗಿ ನಮಗೆ ತಕ್ಷಣ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುತ್ತೇವೆ. ಇದರಿಂದ ಹಣ ವ್ಯರ್ಥವಾಗುತ್ತದೆ. ಆದ್ದರಿಂದ ಯಾವುದೇ ಅನಗತ್ಯ ವಸ್ತುಗಳನ್ನು ಖರೀದಿಸುವ ಮೊದಲು ತಾಳ್ಮೆಯಿಂದ ಆ ವಸ್ತುವಿನ ಅಗತ್ಯವಿದೆಯೇ ಎಂದು ಯೋಚಿಸಿ, ಅಗತ್ಯವಿದ್ದರೆ ಮಾತ್ರ ಖರೀದಿಸಿ, ಇಲ್ಲದಿದ್ದರೆ ಸುಮ್ಮನೆ ಹಣ ವ್ಯರ್ಥ ಮಾಡಬೇಡಿ. ಈ ತಪ್ಪನ್ನು ಸರಿಪಡಿಸುವ ಮೂಲಕವೂ ನೀವು ದುಂದುವೆಚ್ಚವನ್ನು ಸರಿಪಡಿಸಬಹುದು.
ಹೊರಗೆ ತಿನ್ನುವ ಬದಲು ಮನೆಯೂಟಕ್ಕೆ ಆದ್ಯತೆ ನೀಡಿ:
ಇಂದಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಹೊರಗಡೆ ರೆಸ್ಟೋರೆಂಟ್ಗಳಲ್ಲಿ ಅಥವಾ ಆನ್ಲೈನ್ನಲ್ಲಿ ತಮ್ಮ ನೆಚ್ಚಿನ ಫುಡ್ ಆರ್ಡರ್ ಮಾಡಿ ಅದನ್ನೇ ಸೇವಿಸುತ್ತಾರೆ. ಹೀಗೆ ಪ್ರತಿಬಾರಿಯೂ ಹೊರಗಡೆ ಆಹಾರವನ್ನು ಸೇವಿಸಿದರೆ ಇದು ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಪರಿಣಾಮವನ್ನು ಬೀರುತ್ತದೆ. ತಿಂಗಳ ಕೊನೆಯಲ್ಲಿ ಹಣವೇ ಇರೋದಿಲ್ಲ. ಆದ್ದರಿಂದ ಹೊರಗೆ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಿ. ಇದು ಹಣವನ್ನು ಉಳಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಸಣ್ಣ ಡಿಜಿಟಲ್ ಪೇಗಳ ಮೇಲೂ ನಿಗಾ ಇರಿಸಿ:
ಸಾಮಾನ್ಯವಾಗಿ, ಚಹಾ, ಕಾಫಿ, ತಿಂಡಿಗಳು ಸೇರಿದಂತೆ ಸಣ್ಣಪುಟ್ಟ ಆನ್ಲೈನ್ ಪಾವತಿಗಳಂತಹ ವಿಷಯಗಳ ಬಗ್ಗೆ ನಾವು ಗಮನವೇ ಕೊಡುವುದಿಲ್ಲ. ಸಣ್ಣ ಮೊತ್ತ ಎಂದು ಅಸಡ್ಡೆ ತೋರುತ್ತೇವೆ. ಆದರೆ ಈ ವೆಚ್ಚಗಳು ತಿಂಗಳ ಕೊನೆಯಲ್ಲಿ ಗಮನಾರ್ಹ ಮೊತ್ತವನ್ನು ಸೇರುತ್ತವೆ. ಈ ದೈನಂದಿನ ಖರ್ಚುಗಳು ತಿಂಗಳ ಕೊನೆಯಲ್ಲಿದೊಡ್ಡ ಮೊತ್ತವಾಗುತ್ತದೆ. ಈ ಖರ್ಚುಗಳನ್ನು ತಪ್ಪಿಸಿ, ಆ ಹಣವನ್ನೇ ಉಳಿತಾಯ ಮಾಡಿ.
ಬಳಕೆಯಾಗದ ಸಬ್ಸ್ಕ್ರಿಪ್ಷನ್ಗಳನ್ನು ಆಫ್ ಮಾಡಿ:
ಅನೇಕ ಜನರು ಒಟಿಟಿ, ಸಂಗೀತ ಅಪ್ಲಿಕೇಶನ್ಗಳು ಮತ್ತು ಇತರ ಸೇವೆಗಳಿಗಾಗಿ ತಮ್ಮ ಬ್ಯಾಂಕ್ ಖಾತೆಗಳು ಅಥವಾ ಕಾರ್ಡ್ಗಳಿಂದ ಮಾಸಿಕ ಪಾವತಿಗಳನ್ನು ಕಡಿತಗೊಳಿಸುತ್ತಾರೆ. ಈ ರೀತಿ ಬಳಕೆ ಮಾಡದ ಆಪ್ಲಿಕೇಷನ್ಗಳ ವೆಚ್ಚವೂ ಬ್ಯಾಂಕ್ ಖಾತೆಯಿಂದ ಖಡಿತಗೊಳ್ಳುತ್ತಿರುತ್ತವೆ. ಹಾಗಾಗಿ ಬಳಕೆಯಾಗದ ಸಬ್ಸ್ಕ್ರಿಪ್ಷನ್ಗಳನ್ನು ಆಫ್ ಮಾಡಿ. ಈ ಮೂಲಕವೂ ದುಂದು ವೆಚ್ಚವನ್ನು ತಪ್ಪಿಸಬಹುದು.
ಇದನ್ನೂ ಓದಿ: ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಹಣದ ಸಮಸ್ಯೆಯೇ ಎದುರಾಗೋದಿಲ್ಲ
ಕ್ಯಾಬ್ಗಳ ಬದಲಿಗೆ ಪರ್ಯಾಯಗಳನ್ನು ಆರಿಸಿಕೊಳ್ಳಿ:
ಈಗಂತೂ ನಗರ ಭಾಗದಲ್ಲಿ ಹೆಚ್ಚಿನವರು ಕ್ಯಾಬ್ಗಳಲ್ಲೇ ಓಡಾಡುತ್ತಾರೆ. ಇದು ಅನುಕೂಲಕರವಾಗಿದ್ದರೂ, ಜೇಬಿಗೆ ಕತ್ತರಿಯನ್ನು ಹಾಕುತ್ತದೆ. ಹೌದು ಅನೇಕ ಜನರು ಕ್ಯಾಬ್ಗಾಗಿಯೇ ತಿಂಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇದರ ಬದಲು ಬಸ್ಸು, ಮೆಟ್ರೋದಂತಹ ಸಾರ್ವಜನಿಕ ವಾಹನವನ್ನು ಬಳಸಿ, ಅಥವಾ ಶೇರಿಂಗ್ ಮಾಡಿ ಪ್ರಯಾಣ ಮಾಡಿ. ಇದು ನಿಮ್ಮ ದೈನಂದಿನ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತಿಂಗಳ ಅಂತ್ಯದವರೆಗೆ ಉಳಿತಾಯವನ್ನು ಮುಂದೂಡಬೇಡಿ:
ಅನೇಕ ಜನರು ಖರ್ಚು ಮೊದಲು ಮಾಡಿ, ಅದರಲ್ಲಿ ಉಳಿದ ಸ್ವಲ್ಪವೇ ಮೊತ್ತವನ್ನು ಸೇವ್ ಮಾಡುತ್ತಾರೆ. ಅದಲ್ಲದೆ ಖರ್ಚಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ ದುಡ್ಡು ಉಳಿತಾಯ ಮಾಡಲು ಸಾಧ್ಯವೇ ಆಗುವುದಿಲ್ಲ. ಇದರ ಬದಲು ನಿಮ್ಮ ಸಂಬಳ ಬಂದ ತಕ್ಷಣ, ನಿಗದಿತ ಮೊತ್ತವನ್ನು ಪ್ರತ್ಯೇಕ ಉಳಿತಾಯ ಖಾತೆ ಅಥವಾ ಆರ್ಡಿಗೆ ವರ್ಗಾಯಿಸಿ. ಉಳಿದ ಹಣವನ್ನು ನಿಮ್ಮ ಮಾಸಿಕ ಖರ್ಚುಗಳನ್ನು ಭರಿಸಲು ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Lifestyle
