Hashtagintro

ನ್ಯೂಜಿಲೆಂಡ್‌ಗೆ ಸಿಂಹಸ್ವಪ್ನವಾದ ಗುರ್ನೂರ್ ಬ್ರಾರ್! ಯುವ ವೇಗಿಯ ಬಗ್ಗೆ ಗಿಲ್ ಹೇಳಿದ್ದೇನು?

ನ್ಯೂಜಿಲೆಂಡ್‌ಗೆ ಸಿಂಹಸ್ವಪ್ನವಾದ ಗುರ್ನೂರ್ ಬ್ರಾರ್! ಯುವ ವೇಗಿಯ ಬಗ್ಗೆ ಗಿಲ್ ಹೇಳಿದ್ದೇನು?

ಶನಿವಾರ ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್‌ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿತು. ಈ ಗೆಲುವಿನಲ್ಲಿ ಭಾರತದ ವೇಗಿಗಳು ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಯುವ ವೇಗಿ ಗುರ್ನೂರ್ ಬ್ರಾರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರು. ಈ ಯುವ ವೇಗಿಯ ಆಟಕ್ಕೆ ನಾಯಕ ಶುಭ್​ಮನ್ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವ ಪಡೆದಂತೆ ಬ್ರಾರ್ ಮತ್ತಷ್ಟು ಸ್ಥಿರ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

4 ವಿಕೆಟ್ ಕಬಳಿಸಿದ ಗುರ್ನೂರ್

ಈ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ತಮ್ಮ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. 10 ಓವರ್‌ಗಳಲ್ಲಿ 30 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆಯ ಬೆನ್ನೆಲುಬು ಮುರಿದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವನ್ನು ಭಾರತ 41 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಮಾಡಿತು. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡಿದ ಬ್ರಾರ್, ಬಳಿಕ ಟಾಮ್ ಲಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಸತತ ಓವರ್‌ಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ನಾಥನ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ತಮ್ಮ ನಾಲ್ಕು ವಿಕೆಟ್‌ಗಳ ಸಾಧನೆಯನ್ನು ಪೂರ್ಣಗೊಳಿಸಿದರು.

ಅನುಭವ ಹೆಚ್ಚಾದಂತೆ ಸ್ಥಿರತೆ ಮೂಡಲಿದೆ

ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಬ್ರಾರ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ 9.2 ಓವರ್‌ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದರು. ಸತತ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಯುವ ವೇಗಿಯ ಬಗ್ಗೆ ಗಿಲ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾರ್ ಅವರ ವೇಗ ಮತ್ತು ಚೆಂಡನ್ನು ಪುಟಿಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿದ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಹೆಚ್ಚಾದಂತೆ ಅವರ ಬೌಲಿಂಗ್‌ನಲ್ಲಿ ಸ್ಥಿರತೆ ಮೂಡಲಿದೆ ಎಂದಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಗಿಲ್, ‘ಕಳೆದ ಪಂದ್ಯದಲ್ಲೂ ಗುರ್ನೂರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರಿಗೆ ಅನುಭವ ಹೆಚ್ಚಾದಂತೆ ಪ್ರದರ್ಶನದಲ್ಲೂ ಸ್ಥಿರತೆ ಬರಲಿದೆ. ಈಗಾಗಲೇ ಅವರ ಬಳಿ ಉತ್ತಮ ವೇಗ ಮತ್ತು ಬೌನ್ಸ್ ಮಾಡುವ ಸಾಮರ್ಥ್ಯವಿದೆ. ನಮ್ಮ ಬಹುತೇಕ ವೇಗದ ಬೌಲರ್‌ಗಳಲ್ಲಿ ಅಗತ್ಯವಾದ ಎಲ್ಲ ಗುಣಗಳೂ ಇವೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯ’ ಎಂದು ಹೇಳಿದರು.

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಸ್ಥಳಾಂತರ; ಬಿಸಿಸಿಐಗೆ ಅಧಿಕೃತ ಮನವಿ

ಗೆಲುವು ಸಿಕ್ಕಿರುವುದು ಸಂತೋಷದ ವಿಚಾರ

ಇನ್ನು ನ್ಯೂಜಿಲೆಂಡ್ ತಂಡವನ್ನು 134 ರನ್‌ಗಳಿಗೆ ಕಟ್ಟಿಹಾಕಿದ ಬಳಿಕ ಭಾರತಕ್ಕೆ ಸುಲಭ ಜಯ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಬ್ಯಾಟರ್‌ಗಳು ಆರಂಭದಿಂದಲೇ ರನ್ ಗಳಿಸಲು ಪರದಾಡಿದರು. ಮಳೆ ಅಡ್ಡಿಪಡಿಸುವ ಮುನ್ನ ಭಾರತ 113 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಡಕ್ವರ್ತ್‌ ಲೂಯಿಸ್ ನಿಯಮದಡಿ ಗೆಲುವಿಗೆ ಅಗತ್ಯವಿದ್ದ ಮೊತ್ತಕ್ಕಿಂತ ಭಾರತ ನಾಲ್ಕು ರನ್ ಮುಂದಿತ್ತು. ಹೀಗಾಗಿ ತಂಡಕ್ಕೆ ರೋಚಕ ಗೆಲುವು ಒಲಿಯಿತು.

ಗೆಲುವಿನ ಬಳಿಕ ಮಾತನಾಡಿದ ಗಿಲ್, ‘ಕೊನೆಗೆ ಗೆಲುವು ಸಿಕ್ಕಿರುವುದು ಸಂತೋಷದ ವಿಚಾರ. ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ನ್ಯೂಜಿಲೆಂಡ್ ತಂಡವನ್ನು 134 ರನ್‌ಗಳಿಗೆ ಆಲೌಟ್ ಮಾಡಿದಾಗ ಗುರಿ ಸುಲಭವಾಗಿರಬಹುದು ಎಂದುಕೊಂಡಿದ್ದೆ. ಆದರೆ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ಕೆಲಸವಾಗಿತ್ತು. ಅಂತಿಮವಾಗಿ ಗೆದ್ದಿರುವುದು ಖುಷಿ ತಂದಿದೆ. ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗಿತ್ತು. ಆದರೂ ನಾವು ನಿರೀಕ್ಷಿಸಿದ್ದಕ್ಕಿಂತ ಎರಡು ವಿಕೆಟ್‌ಗಳನ್ನು ಹೆಚ್ಚುವರಿಯಾಗಿ ಕಳೆದುಕೊಂಡೆವು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language