Hashtagintro

ಪತ್ನಿ ಜೊತೆ ರಸ್ತೆಯಲ್ಲೇ ಗಂಭೀರ ಚರ್ಚೆ: ಕಮಿನ್ಸ್‌ಗೆ ಕಾಡುತ್ತಿದೆಯಾ ಬಾಲ್ ಟ್ಯಾಂಪರಿಂಗ್ ವಿವಾದ?

ಪತ್ನಿ ಜೊತೆ ರಸ್ತೆಯಲ್ಲೇ ಗಂಭೀರ ಚರ್ಚೆ: ಕಮಿನ್ಸ್‌ಗೆ ಕಾಡುತ್ತಿದೆಯಾ ಬಾಲ್ ಟ್ಯಾಂಪರಿಂಗ್ ವಿವಾದ?

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸಿಡ್ನಿಯ ರಸ್ತೆಯೊಂದರಲ್ಲಿ ತಮ್ಮ ಪತ್ನಿ ಬೆಕ್ಕಿ ಜೊತೆ ಗಂಭೀರ ಚರ್ಚೆಯಲ್ಲಿ ತೊಡಗಿರುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇಬ್ಬರೂ ಯಾವುದೋ ವಿಷಯದ ಬಗ್ಗೆ ಗಂಭೀರವಾಗಿ ಮಾತನಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಉಸ್ಮಾನ್ ಖವಾಜಾ ಅವರು 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಮಾಡಿರುವ ಸ್ಫೋಟಕ ಆರೋಪಗಳ ಬೆನ್ನಲ್ಲೇ ಈ ಘಟನೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಖವಾಜಾ ಅವರ ಆರೋಪಗಳು ಹೊರಬಂದ ಬಳಿಕ ಕಮಿನ್ಸ್ ಮತ್ತು ಅವರ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ.

ದಂಪತಿಗಳ ಮಾತುಕತೆ ಕ್ಯಾಮೆರಾದಲ್ಲಿ ಸೆರೆ

‘ದಿ ಆಸ್ಟ್ರೇಲಿಯನ್’ ಪ್ರಕಟಿಸಿರುವ ವಿಡಿಯೋದಲ್ಲಿ ಕಮಿನ್ಸ್ ಮತ್ತು ಅವರ ಪತ್ನಿ ಬೆಕ್ಕಿ ಮಾತನಾಡುತ್ತಿರುವುದು ಕಂಡುಬಂದಿದೆ. ಬಳಿಕ ಇಬ್ಬರೂ ಸಮೀಪದಲ್ಲಿದ್ದ ಕಟ್ಟಡವೊಂದರ ಒಳಗೆ ತೆರಳಿದ್ದಾರೆ. ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಕಮಿನ್ಸ್, ಪತ್ನಿ ಜೊತೆ ಮಾತನಾಡುವಾಗ ಸಾಕಷ್ಟು ಮೌನವಾಗಿರುವುದು ಕಂಡುಬಂದಿದೆ.

ಖವಾಜಾ ಆರೋಪದ ಬಗ್ಗೆ ಚರ್ಚೆ?

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಲು ರೂಪಿಸಿದ್ದ ಯೋಜನೆಯ ಬಗ್ಗೆ ಆಸ್ಟ್ರೇಲಿಯಾ ತಂಡದ ಬಹುತೇಕ ಸದಸ್ಯರಿಗೆ ತಿಳಿದಿತ್ತು ಎಂದು ಉಸ್ಮಾನ್ ಖವಾಜಾ ಇತ್ತೀಚೆಗೆ ಆರೋಪಿಸಿದ್ದರು. ಖವಾಜಾ ಅವರ ಈ ಹೇಳಿಕೆಗೆ ಮಾಜಿ ಸಹ ಆಟಗಾರ ಡೇವಿಡ್ ವಾರ್ನರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಆತ್ಮಚರಿತ್ರೆ ‘ಸಬ್ರ್’ನಲ್ಲೂ ಖವಾಜಾ ಈ ವಿವಾದದ ಬಗ್ಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಖವಾಜಾ ಆರೋಪಕ್ಕೆ ಕಮಿನ್ಸ್ ಹೇಳಿದ್ದೇನು?

ಉಸ್ಮಾನ್ ಖವಾಜಾ ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ಯಾಟ್ ಕಮಿನ್ಸ್, ಈ ಪ್ರಕರಣದ ಕುರಿತು ಈಗಾಗಲೇ ಸಂಪೂರ್ಣ ತನಿಖೆ ನಡೆದಿದ್ದು, ತಂಡ ಆ ವಿಚಾರವನ್ನು ಹಿಂದೆಯೇ ಬಗೆಹರಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಖವಾಜಾ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಘಟನೆ ಬಗ್ಗೆ ಹೇಳಿಕೊಳ್ಳುವ ಹಕ್ಕಿದೆ. ಅವರ ಹೇಳಿಕೆಗೆ ತಮ್ಮ ಅಭ್ಯಂತರವಿಲ್ಲ ಎಂಬರ್ಥದಲ್ಲಿ ಕಮಿನ್ಸ್ ಪ್ರತಿಕ್ರಿಯಿಸಿದ್ದರು.

ಮಾಧ್ಯಮಗಳಿಂದ ದೂರ ಉಳಿದ ಖವಾಜಾ

ನವೆಂಬರ್ 11ರಂದು ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆಗೆ ಸಂಬಂಧಿಸಿದ ಇತರ ಮಾಧ್ಯಮ ಸಂದರ್ಶನಗಳನ್ನು ರದ್ದುಗೊಳಿಸಿದ್ದರು. ಎಬಿಸಿ ವಾಹಿನಿಯ ಕಾರ್ಯಕ್ರಮದಲ್ಲೂ ಅವರಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು. ಇದರಿಂದಾಗಿ 2018ರ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶುಕ್ರವಾರ ಕಮಿನ್ಸ್ ಪತ್ರಿಕಾಗೋಷ್ಠಿ

ಈ ಎಲ್ಲಾ ಆರೋಪಗಳಿಗೆ ಉತ್ತರ ನೀಡಲು ಪ್ಯಾಟ್ ಕಮಿನ್ಸ್ ಮುಂದಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಸಿಡ್ನಿಯ ಕ್ರಿಕೆಟ್ ಸೆಂಟ್ರಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಖವಾಜಾ ಅವರ ಆರೋಪಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಂಡ ಬಳಿಕವೇ ಪ್ರತಿಕ್ರಿಯೆ ನೀಡಲು ನಿರ್ಧರಿಸಿರುವುದಾಗಿ ಕಮಿನ್ಸ್ ಹೇಳಿದ್ದಾರೆ. ಹೀಗಾಗಿ ಶುಕ್ರವಾರದ ಪತ್ರಿಕಾಗೋಷ್ಠಿಯ ಮೇಲೆ ಎಲ್ಲರ ಕಣ್ಣಿದೆ. 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಬೌಲಿಂಗ್ ವಿಭಾಗಕ್ಕೆ ಏನೆಲ್ಲಾ ಮಾಹಿತಿ ಇತ್ತು? 2021ರಲ್ಲಿ ನಾಲ್ವರು ಆಟಗಾರರು ಜಂಟಿಯಾಗಿ ನೀಡಿದ್ದ ಹೇಳಿಕೆಯ ಹಿಂದಿನ ಸತ್ಯವೇನು? ಎಂಬ ಪ್ರಶ್ನೆಗಳಿಗೆ ಕಮಿನ್ಸ್ ಉತ್ತರ ನೀಡುತ್ತಾರಾ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language