Hashtagintro

ಪರಿಸರ ಕಾಳಜಿಯ ಜೊತೆ ಸಾಮಾಜಿಕ ಸಂದೇಶ ಸಾರುವ ‘ಗಾಜು’ ಸಿನಿಮಾ

ಪರಿಸರ ಕಾಳಜಿಯ ಜೊತೆ ಸಾಮಾಜಿಕ ಸಂದೇಶ ಸಾರುವ ‘ಗಾಜು’ ಸಿನಿಮಾ

ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶ, ಪರಿಸರ ನಾಶ, ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರ ಕಾಳಜಿಯ ಹತ್ತಾರು ವಿಷಯಗಳನ್ನು ಹೊತ್ತ ಅನೇಕ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಅಂಥದ್ದೇ ಒಂದು ಹೊಸ ಸಿನಿಮಾ ‘ಗಾಜು’. ಈ ಸಿನಿಮಾದ ಹೆಸರೇ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿರುವ ಗಾಜಿನ ಬಳಕೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವಂತಹ ಚಿತ್ರ ಇದಾಗಿದೆ. ಕೆಲವು ವರ್ಷಗಳ ಹಿಂದೆ ಕಿರುಚಿತ್ರ ರೂಪದಲ್ಲಿ ಬಿಡುಗಡೆಯಾಗಿ ಅನೇಕರ ಮೆಚ್ಚುಗೆ ಪಡೆದಿದ್ದ ‘ಗಾಜು’ ಇದೀಗ ಸಿನಿಮಾ ರೂಪದಲ್ಲಿ ಹಿರಿತೆರೆಗೆ ಬರುತ್ತಿದೆ.

‘ಗಾಜು’ ಚಿತ್ರಕ್ಕೆ ವೆಂಕಟೇಶ್ ಗಿರಿಕ್ಷೇತ್ರ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಾಮಾಜಿಕ ಹೋರಾಟಗಾರರಾದ ಡಾ. ಸಿ.ಎನ್. ಮಂಜುನಾಥ್ (ದಂಡೋರ ಮಂಜಣ್ಣ) ಈ ಸಾಮಾಜಿಕ ಕಾಳಜಿಯ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗಾಜು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಅವರು ಟ್ರೇಲರ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ನಿರ್ಮಾಪಕ ಡಾ. ಸಿ.ಎನ್. ಮಂಜುನಾಥ್, ‘ಇದೊಂದು ಪರಿಸರ ಕಾಳಜಿ ಹೊಂದಿರುವ ಚಿತ್ರ. ರೈತಾಪಿ ಹಿನ್ನೆಲೆಯಿಂದ ಬಂದಿರುವ ನಾವು ಸಾಮಾಜಿಕ ಕಳಕಳಿಯಿಂದ ಈ ಸಿನಿಮಾವನ್ನು ನಿರ್ಮಿಸಿದ್ದೇವೆ. ಗಾಜಿನ ಬಳಕೆ, ಅದರಿಂದಾಗುತ್ತಿರುವ ಅನಾಹುತಗಳ ಬಗ್ಗೆ ಸಿನಿಮಾದಲ್ಲಿ ಹೇಳಿದ್ದೇವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ವೆಂಕಟೇಶ್ ಗಿರಿಕ್ಷೇತ್ರ ಮಾತನಾಡಿ, ‘ಬಳಸಿದ ಗಾಜಿನ ಉತ್ಪನ್ನಗಳ ಸಮರ್ಥ ವಿಲೇವಾರಿ, ಮರುಬಳಕೆ ಇಲ್ಲದಂತಾಗಿದೆ. ಹೀಗಾಗಿ ಗಾಜು ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ಗ್ರಾಮೀಣ ಹಿನ್ನೆಲೆಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಬೇಲೂರು ಹಾಗೂ ಚನ್ನರಾಯಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಇಟ್ಟುಕೊಂಡು ಈ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ. ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಇದನ್ನೂ ಓದಿ: ಭಾರತದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಏನು ಮಾಡಬೇಕು? ಎಫ್‌ಐಸಿಸಿಐ ನೀಡಿದ 10 ಸಲಹೆಗಳಿವು

ಬಾಲ ರಾಜವಾಡಿ, ರಾಮಕೃಷ್ಣ, ಮಾಸ್ಟರ್ ವಿಸ್ಮಯ್ ವೆಂಕಟೇಶ್, ಅಪ್ಪಣ್ಣ ರಾಮದುರ್ಗ, ಮಿಲ್ಟ್ರಿ ಮಂಜು, ವಾಣಿ, ಸಂತೋಷ್ ಮುಂತಾದವರು ‘ಗಾಜು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗೇಂದ್ರ ರಂಗಾರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಸೂರ್ಯೋದಯ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಮಸ್ತಾನ್ ಅವರು ನೃತ್ಯ ಸಂಯೋಜಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language