
ನವದೆಹಲಿ, ಅಕ್ಟೋಬರ್ 19: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಫಲಾನುಭವಿ ರೈತರು ಈವರೆಗೆ 23 ಕಂತುಗಳು ಧನಸಹಾಯ ಪಡೆದಿದ್ದಾರೆ. ಈಗ 24ನೇ ಕಂತಿನ ಬಿಡುಗಡೆಯ ನಿರೀಕ್ಷೆ ಇದೆ. ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ಸರ್ಕಾರ ನೀಡುತ್ತದೆ. 23ನೇ ಕಂತಿನ ಹಣವನ್ನು ಜೂನ್ 20ರಂದು ನೀಡಲಾಗಿತ್ತು. ನಾಲ್ಕು ತಿಂಗಳಿಗೊಮ್ಮೆ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುವುದರಿಂದ ಅಕ್ಟೋಬರ್ ತಿಂಗಳಲ್ಲಿ 24ನೇ ಕಂತಿನ ಹಣ ಬಿಡುಗಡೆ ಆಗಬಹುದು. ಆದರೆ, ಖಚಿತವಿಲ್ಲ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಥವಾ ಅದಕ್ಕೂ ಮುನ್ನ ರೈತರಿಗೆ ಹಣ ಸಿಗುವ ಸಾಧ್ಯತೆ ಇದೆ.
2026ರ ನವೆಂಬರ್ 7ಕ್ಕೆ ಬಿಡುಗಡೆಯಾಗುತ್ತಾ ಪಿಎಂ ಕಿಸಾನ್ 24ನೇ ಕಂತಿನ ಹಣ?
ಕಳೆದ ವರ್ಷದ ಇದೇ ಅವಧಿಯಲ್ಲಿ ಪಿಎಂ ಕಿಸಾನ್ನ ಒಂದು ಕಂತಿನ ಹಣ 2025ರ ನವೆಂಬರ್ 19ರಂದು ಬಿಡುಗಡೆ ಆಗಿತ್ತು. ಅದು 21ನೇ ಕಂತಿನ ಹಣ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಅವರು ಹಣ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಜಾಗತಿಕ ಹಣಕಾಸು ಲೋಕಕ್ಕೆ ನಾವೇ ಕಿಂಗ್ ಎಂದು ಬೀಗುತ್ತಿರುವ ಪಾಕಿಸ್ತಾನ; ಮಾಜಿ ಐಎಂಎಫ್ ನಿರ್ದೇಶಕರಿಂದ ಸತ್ಯಾಂಶ ಬಹಿರಂಗ
ನವೆಂಬರ್ 19, 2025ರಲ್ಲಿ ದೀಪಾವಳಿ ನರಕ ಚತುರ್ದಶಿ ದಿನ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 6ರಿಂದ 11ರವರೆಗೂ ಇದೆ. ನರಕ ಚತುರ್ದಶಿ ಈ ಬಾರಿ ನವೆಂಬರ್ 7ಕ್ಕೆ ಬಂದಿದೆ. ಹಾಗಂದ ಮಾತ್ರಕ್ಕೆ ಅದೇ ದಿನಕ್ಕೆ ಬರುತ್ತದೆ ಎನ್ನುವುದು ಖಾತ್ರಿ ಇಲ್ಲ.
2024ರಲ್ಲಿ ದೀಪಾವಳಿ ಹಬ್ಬ ಅಕ್ಟೋಬರ್ ಕೊನೆಯಲ್ಲಿ ಆರಂಭಗೊಂಡು ನವೆಂಬರ್ ಮೊದಲ ವಾರಕ್ಕೆ ಮುಕ್ತಾಯವಾಗಿತ್ತು. ಪಿಎಂ ಕಿಸಾನ್ 18ನೇ ಕಂತಿನ ಹಣ ಅಕ್ಟೋಬರ್ 5ರಂದೇ ಬಿಡುಗಡೆ ಆಗಿತ್ತು. ಹೀಗಾಗಿ, 24ನೇ ಕಂತಿನ ಹಣ 2026ರ ಅಕ್ಟೋಬರ್ ತಿಂಗಳಲ್ಲೇ ಬಿಡುಗಡೆ ಆದರೂ ಅಚ್ಚರಿ ಇಲ್ಲ.
ಏನಿದು ಪಿಎಂ ಕಿಸಾನ್ ಯೋಜನೆ?
ಉಳುಮೆ ಮಾಡುವ ಕೃಷಿ ಭೂಮಿ ಹೊಂದಿರುವ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ವರ್ಷದಲ್ಲಿ 2,000 ರೂಗಳ ಮೂರು ಕಂತುಗಳಲ್ಲಿ ಈ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. 2019ರಲ್ಲಿ ಶುರುವಾದ ಈ ಸ್ಕೀಮ್ನಲ್ಲಿ ಈವರೆಗೆ 23 ಕಂತುಗಳ ಹಣವನ್ನು ಅರ್ಹ ರೈತರಿಗೆ ನೀಡಲಾಗಿದೆ. ಪ್ರತೀ ಕಂತಿನಲ್ಲಿ ಸರ್ಕಾರ 20,000 ಕೋಟಿ ರೂ ಆಸುಪಾಸಿನ ಹಣ ಕಳುಹಿಸುತ್ತದೆ.
ಇದನ್ನೂ ಓದಿ: ಅಮೆರಿಕ ಷರತ್ತು ಒಪ್ಪಿದರೆ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್‌ನಿಂದ ಹೊಸ ಪ್ರಸ್ತಾವನೆ
ಈ ಸ್ಕೀಮ್ನಲ್ಲಿ ರೈತರು ಅರ್ಹತೆ ಪಡೆಯಬೇಕಾದರೆ ಕೃಷಿ ಜಮೀನು ಹೊಂದಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ನೀಡಲಾಗುತ್ತದೆ. ಕುಟುಂಬದಲ್ಲಿ ಯಾವುದೇ ಸದಸ್ಯ ಸರ್ಕಾರಿ ಸೇವೆಯಲ್ಲಿದ್ದರೆ, ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೆ, ಶಾಸಕರು, ಸಂಸದರು ಇತ್ಯಾದಿ ಹುದ್ದೆ ಹೊಂದಿದ್ದವರಾಗಿದ್ದರೆ, ವೃತ್ತಿಪರ ಕೆಲಸ ಮಾಡುತ್ತಿರುವವರಾಗಿದ್ದರೆ ಈ ಸ್ಕೀಮ್ನಲ್ಲಿ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
