
ಬೆಂಗಳೂರು, ಅಕ್ಟೋಬರ್ 25: ಇತ್ತೀಚೆಗೆ ದಸರಾ ಸಡಗರದ ವೇಳೆ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಐದಂತಸ್ತಿನ ಕಟ್ಟಡದಲ್ಲಿ ಬ್ಲಾಸ್ಟ್ ಆಗಿತ್ತು. IED ಬಾಂಬ್‌ಗೆ ಬಳಸುವ ವಸ್ತುಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿದ್ದವು. ಸದ್ಯ ಪುಲಕೇಶಿನಗರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಲಾಲುದ್ದೀನ್, ಸೈದುಲಾ ಇಸ್ಲಾಂ, ಬುರ್ಹಾನ್ ಬಂಧಿತ ಆರೋಪಿಗಳು. ಇನ್ನು ವೈಯಕ್ತಿಕ ದ್ವೇಷದಿಂದ ಕೃತ್ಯವೆಸಗಿರುವುದು ಬಯಲಾಗಿದೆ.
ಸ್ಫೋಟಕ್ಕೆ ವೈಯಕ್ತಿಕ ದ್ವೇಷವೇ ಕಾರಣ
ಸ್ಫೋಟದ ಹಿಂದಿನ ಅಸಲಿ ಸತ್ಯ ಇದೀಗ ಬಯಲಾಗಿದೆ. ಜಲಾಲುದ್ದೀನ್, ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಇಬ್ಬರು ಅಸ್ಸಾಂ ಮೂಲದವರಾಗಿದ್ದು, ಇವರು ಮೊದಲಿನಿಂದಲೂ ವೈಷಮ್ಯ ಹೊಂದಿದ್ದರು. ಹುಡುಗಿ ಮನೆಯವರಿಗೆ ಜಲಾಲುದ್ದೀನ್ ಸರಿಯಿಲ್ಲ ಅಂತ ಅಲ್ಲಾವುದ್ದೀನ್ ಹೇಳಿದ್ದ. ಅದೇ ದ್ವೇಷದಿಂದ ಜಲಾಲುದ್ದೀನ್ ಕೃತ್ಯವೆಸಗಿದ್ದಾನೆ.
ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ ಸೀಮಂತ್ಕುಮಾರ್
ಈ ಕುರಿತಾಗಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಪ್ರತಿಕ್ರಿಯಿಸಿದ್ದು, ‘ದಸರಾ ಹಿಂದಿನ ದಿನ ರಾತ್ರಿ ಈ ಘಟನೆ ನಡೆದಿತ್ತು. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗಿತ್ತು. ಪ್ರಕರಣದ ತನಿಖೆಗೆ 10ಕ್ಕೂ ಹೆಚ್ಚು ಪೊಲೀಸ್ ತಂಡ ರಚಿಸಲಾಗಿತ್ತು. ರಾಯಚೂರು, ಅಸ್ಸಾಂ ಪೊಲೀಸರು ತನಿಖಾ ಕೆಲಸ ಮಾಡಿದ್ದಾರೆ. ಪ್ರಕರಣ ಸಂಬಂಧ 1500 ಸಿಸಿಟಿವಿಗಳ ಪರಿಶೀಲನೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಜನರ ವಿಚಾರಣೆ ಸಹ ಮಾಡಲಾಗಿದೆ. ಇದು ವೈಯಕ್ತಿಕ ಕಾರಣಕ್ಕೆ ಬ್ಲಾಸ್ಟ್ ಮಾಡಿರುವುದು ಪತ್ತೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಬ್ಲಾಸ್ಟ್ ಕೇಸ್: ಮಹತ್ವದ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ!
‘ಸೆಕ್ಯೂರಿಟಿ ಗಾರ್ಡ್ ಟಾರ್ಗೆಟ್ ಮಾಡಿ ಸ್ಫೋಟಿಸುವ ಪ್ಲ್ಯಾನ್ ಇತ್ತು. ಆದರೆ ಸೆಕ್ಯೂರಿಟಿ ಜೊತೆಗಿದ್ದ ಸೂರಜ್ ಎಂಬಾತ ಬಾಕ್ಸ್ ಓಪನ್ ಮಾಡಿದ್ದ. ಆತನಿಗೆ ಹೆಚ್ಚಿನ ಗಾಯವಾಗಿದೆ. ಆರೋಪಿಗಳು ತಮ್ಮ ಮೊಬೈಲ್ ಹಾಳಾಗಿದೆ ಎಂದು ಹೇಳಿ ಸಾರ್ವಜನಿಕರ ಮೊಬೈಲ್ಗಳನ್ನು ಪಡೆದು ಬಳಸಿದ್ದಾರೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗೆ ಮೊಬೈಲ್ ನೀಡುವ ಮೊದಲು ಎಚ್ಚರಿಕೆ ಇರಲಿ’ ಎಂದು ಕಮಿಷನರ್ ಕಿವಿ ಮಾತು ಹೇಳಿದ್ದಾರೆ.
ವೈಯಕ್ತಿಕ ವಿಚಾರಕ್ಕೆ ಗಲಾಟೆ
‘ಅಸ್ಸಾಂ ರಾಜ್ಯದ ಒಂದೇ ಊರಿನವರ ಜಗಳಕ್ಕೆ ಈ ಕೃತ್ಯ ಎಸಗಿದ್ದಾರೆ. ಹಣಕಾಸು ವ್ಯವಹಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಗಲಾಟೆ ಇತ್ತು. ಆ ಕಾರಣಕ್ಕೆ ಪ್ಲ್ಯಾನ್ ಮಾಡಿ ಈ ಕೆಲಸ ಮಾಡಿದ್ದಾರೆ. ತನಿಖಾ ತಂಡಕ್ಕೆ 3 ಲಕ್ಷ ರೂ ಬಹುಮಾನ ನೀಡಲಾಗುವುದು. ಆರೋಪಿಗಳು ಹೇಗೆ ಬಾಂಬ್ ತಯಾರು ಮಾಡಿದರು, ಖರೀದಿ ಮಾಡಿರುವ ಸ್ಥಳಕ್ಕೂ ಹೋಗಿ ಪರಿಶೀಲನೆ ಮಾಡಲಾಗಿದೆ. ಇಂಟರ್ನೆಟ್ ಮೂಲಕ ಆರೋಪಿ ಬಾಂಬ್ ತಯಾರಿಸಿದ್ದಾನೆ. ಆರೋಪಿ 8ನೇ ತರಗತಿಯ ತನಕ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಆದರೆ ಇಂಟರ್ನೆಟ್, ಎಐ, ಮೊಬೈಲ್ ಬಳಕೆ ತಿಳಿದುಕೊಂಡಿದ್ದಾರೆ’ ಎಂದು ಅವರು ಸ್ಫೋಟಕ ಮಾಹಿತಿ ನೀಡಿದರು.
ಬಸ್ನಲ್ಲಿ ಬಾಂಬ್ ಸಾಗಿದ್ದ ಆರೋಪಿಗಳು
ಬುರ್ಹಾನ್ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬಾಂಬ್ ತಯಾರು ಮಾಡಿದ್ದ. ಬಳಿಕ ಸೈದುಲಾ ಇಸ್ಲಾಂ, ಜಲಾಲುದ್ದೀನ್ ಮೂಲಕ ಬಾಂಬ್ ಕೊಡಿಸಿದ್ದ. ಫ್ಯೂಸ್ ಅಳವಡಿಸದೆ ಮಸ್ಕಿಯಿಂದ ಬೆಂಗಳೂರಿಗೆ ಬಸ್ ಮೂಲಕ ಬಾಂಬ್ ತಂದಿದ್ದ. ಬಳಿಕ ಫ್ಯೂಸ್ ಅಳವಡಿಸಿ ಬಾಂಬ್ನ್ನು ಅಲ್ಲಾವುದ್ದೀನ್ಗೆ ನೀಡಿದ್ದ. ಆದರೆ ಅಲ್ಲಾವುದ್ದೀನ್ಗೆ ನೀಡಿದ್ದ ಬಾಕ್ಸ್ ಅನ್ನು ಸೂರಜ್ ಓಪನ್ ಮಾಡಿದ್ದ. ಸೂರಜ್ ಬಾಕ್ಸ್ ತೆರೆದು ಸ್ವಿಚ್ ಆನ್ ಮಾಡಿದಾಗ ತಕ್ಷಣ ಬ್ಲಾಸ್ಟ್ ಆಗಿದೆ.
ಎಐ ಮೂಲಕ ಬಾಂಬ್ ತಯಾರಿಸುವುದು ಕಲಿತಿದ್ದ ಜಲಾಲುದ್ದೀನ್
ಇನ್ನು ಕೃತ್ಯವೆಸಗಿರುವ ಜಲಾಲುದ್ದೀನ್ ಅಲಿಯಾಸ್ ಜಾಹಿದ್ವುಲ್ ಹುಸೇನ್ ಎಲೆಕ್ಟ್ರಿಕಲ್ ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಆತನಿಗೆ ಸರ್ಕ್ಯೂಟ್ ಮತ್ತು ಬಾಂಬ್ ತಯಾರಿಸುವ ಮಾಹಿತಿ ಇತ್ತು. ಎಐ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತುಕೊಂಡಿದ್ದ. ಬಾಂಬ್ನಲ್ಲಿ ಸರ್ಕ್ಯೂಟ್, ಪ್ಯೂಸ್, ಸ್ಫೋಟಕ ವಸ್ತು ಇಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
