Hashtagintro

ಪುಷ್ಟೀಕರಿಸಿದ ಯುರೇನಿಯಂ ಬಿಟ್ಟುಕೊಡಲು ಇರಾನ್ ನಕಾರ: ಅಸಿಮ್ ಮುನೀರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಸಂದೇಶ

ಪುಷ್ಟೀಕರಿಸಿದ ಯುರೇನಿಯಂ ಬಿಟ್ಟುಕೊಡಲು ಇರಾನ್ ನಕಾರ: ಅಸಿಮ್ ಮುನೀರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಸಂದೇಶ

ಟೆಹ್ರಾನ್, ಅಕ್ಟೋಬರ್ 20: ಅಮೆರಿಕದೊಂದಿಗಿಗೆ ಶಾಂತಿ ಮಾತುಕತೆ ಮತ್ತೆ ಆರಂಭಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿರುವ ನಡುವೆಯೇ, ತನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ದೇಶದಿಂದ ಹೊರಗೆ ಕಳುಹಿಸಲು ಇರಾನ್ ನಿರಾಕರಿಸಿದೆ. ಈ ವಿಷಯವನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಭೇಟಿ ವೇಳೆ ಇರಾನ್​ನ ಭದ್ರತಾ ಮುಕ್ಯಸ್ಥ ಮೊಹ್ಸೆನ್ ರೆಜೈ ಸ್ಪಷ್ಟಪಡಿಸಿದ್ದಾರೆ.

ರೆಜೈ ಅವರು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ. ಪುಷ್ಟೀಕರಿಸಿದ ಯುರೇನಿಯಂ ಇರಾನ್‌ನ ರಾಷ್ಟ್ರೀಯ ಸಂಪತ್ತು. ಅದನ್ನು ದೇಶದಿಂದ ಹೊರಗೆ ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಇರಾನ್‌ನೊಳಗೆ ಈ ಪರಮಾಣು ಸಾಮಗ್ರಿಯನ್ನು ಬಳಸುವ ಉದ್ದೇಶವಿದೆ ಎಂದೂ ತಿಳಿಸಿದ್ದಾರೆ. ಅಮೆರಿಕದೊಂದಿಗೆ ಮಾತುಕತೆ ನಡೆಸುವ ಮೊದಲು ಇರಾನ್‌ನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೆಜೈ ಒತ್ತಾಯಿಸಿದ್ದಾರೆ. ಅಮೆರಿಕ ಮೊದಲು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು, ಆ ಪ್ರಕ್ರಿಯೆ ಇರಾನ್‌ನ ಷರತ್ತುಗಳನ್ನು ಪೂರೈಸುವುದರಿಂದ ಆರಂಭವಾಗಬೇಕು ಎಂದು ಹೇಳಿದ್ದಾರೆ.

ಇರಾನ್‌ನ ಸಂಸತ್ ಸ್ಪೀಕರ್ ಹಾಗೂ ಮುಖ್ಯ ಮಾತುಕತಾಕಾರ ಮೊಹಮ್ಮದ್ ಬಾಘರ್ ಘಾಲಿಬಾಫ್ ಕೂಡ ಇದೇ ನಿಲುವು ವ್ಯಕ್ತಪಡಿಸಿದ್ದಾರೆ. ಅಮೆರಿಕ ಇರಾನ್‌ನ ಬೇಡಿಕೆಗಳನ್ನು ಪೂರೈಸುವವರೆಗೆ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.ಅಸಿಮ್ ಮುನೀರ್ ಅವರ ಇರಾನ್ ಭೇಟಿ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯನ್ನು ಮತ್ತೆ ಆರಂಭಿಸುವ ಪಾಕಿಸ್ತಾನದ ಪ್ರಯತ್ನದ ಭಾಗವಾಗಿದೆ. ಪಾಕಿಸ್ತಾನ ಈ ಹಿಂದೆ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿ, ಜೂನ್‌ನಲ್ಲಿ ತಾತ್ಕಾಲಿಕ ಒಪ್ಪಂದಕ್ಕೆ ಸಹಾಯ ಮಾಡಿತ್ತು. ಆದರೆ ಆ ಒಪ್ಪಂದ ಹೆಚ್ಚು ಕಾಲ ಉಳಿಯಲಿಲ್ಲ, ಬಳಿಕ ಸಂಘರ್ಷ ಮತ್ತೆ ತೀವ್ರಗೊಂಡಿತು.

ಮತ್ತಷ್ಟು ಓದಿ: ಝೆಲೆನ್ಸ್ಕಿ ಹೊರಗಿಟ್ಟು ಉಕ್ರೇನ್ ಭವಿಷ್ಯ ನಿರ್ಧಾರ: ರಷ್ಯಾ, ಅಮೆರಿಕ, ಚೀನಾ ಮಹಾ ಶೃಂಗಸಭೆಗೆ ಮಾಸ್ಕೋ ಮುಂದು

ಇರಾನ್ ಮುಂದಿಟ್ಟಿರುವ ಬೇಡಿಕೆಗಳಲ್ಲಿ ಪ್ರಾದೇಶಿಕ ಕದನ ವಿರಾಮ, ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ಹಣವನ್ನು ಬಿಡುಗಡೆ ಮಾಡುವುದು ಮತ್ತು ಅದರ ತೈಲ ವಲಯದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಸೇರಿವೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆ
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಸಂಘರ್ಷ ಆರಂಭವಾಯಿತು. ಇರಾನ್‌ನ ಪರಮಾಣು ಕಾರ್ಯಕ್ರಮವೂ ಈ ಸಂಘರ್ಷದ ಪ್ರಮುಖ ವಿಷಯವಾಗಿದೆ. ಅಮೆರಿಕ ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಬಾರದು ಎಂದು ಒತ್ತಾಯಿಸುತ್ತಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶಗಳಿಗಷ್ಟೇ ಎಂದು ಹೇಳುತ್ತಿದ್ದು, ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಉದ್ದೇಶವಿಲ್ಲವೆಂದು ನಿರಾಕರಿಸಿದೆ.

ಈಗ ಮಾತುಕತೆ ಸ್ಥಗಿತಗೊಂಡಿರುವುದರಿಂದ, ಪಾಕಿಸ್ತಾನದ ಹೊಸ ಮಧ್ಯಸ್ಥಿಕೆ ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪುಷ್ಟೀಕರಿಸಿದ ಯುರೇನಿಯಂ ಅನ್ನು ದೇಶದಿಂದ ಹೊರಗೆ ಕಳುಹಿಸಲು ಇರಾನ್ ನಿರಾಕರಿಸಿರುವುದು, ಒಪ್ಪಂದಕ್ಕೆ ತಲುಪುವ ಹಾದಿಯಲ್ಲಿರುವ ಪ್ರಮುಖ ಅಡೆತಡೆಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source: TV9 Kannada World

Read full article on TV9 Kannada World

Leave a Comment

Your email address will not be published. Required fields are marked *

समाचार की भाषा चुनें / Choose News Language