
ನವದೆಹಲಿ, ಅಕ್ಟೋಬರ್ 22: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರೆಹಾನ್ ವಾದ್ರಾ ಆಯೋಜಿಸಿದ್ದ ಏಕವ್ಯಕ್ತಿ ಕಲಾ ಪ್ರದರ್ಶನ ಆರಂಭಕ್ಕೂ ಮುನ್ನವೇ ಭಾರಿ ರಾಜಕೀಯ ಮತ್ತು ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿದೆ. ನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ ಎಂದು ಆರೋಪಿಸಲಾಗಿದೆ.
ಏನಿದು ‘ನೋ ಐಡಿಯಾ ಈಸ್ ಫೈನಲ್’ ಪ್ರದರ್ಶನ?
24 ವರ್ಷದ ರೆಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ (No Idea is Final) ಹೆಸರಿನಲ್ಲಿ ತಮ್ಮ ಮೂರನೇ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ವನ್ಯಜೀವಿಗಳು, ಅಮೂರ್ತ ಕಲೆ ಮತ್ತು ಕಳೆದ ಆರು ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಯುವ ಚಳವಳಿಗಳ ಬೀದಿ ಛಾಯಾಗ್ರಹಣ ಸೇರಿದಂತೆ 100ಕ್ಕೂ ಹೆಚ್ಚು ಕಲಾಕೃತಿಗಳನ್ನು ಇರಿಸಲಾಗಿತ್ತು. ಆದರೆ, ಪ್ರದರ್ಶನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಪ್ರದರ್ಶನದ ಬಹುತೇಕ ಅರ್ಧ ಭಾಗವನ್ನು (74 ಫೋಟೋಗಳು) ತೆಗೆದುಹಾಕುವಂತೆ ಬಿಕಾನೆರ್ ಹೌಸ್ ಆಡಳಿತ ಸೂಚಿಸಿದೆ.
ರೆಹಾನ್ ವಾದ್ರಾ ಆರೋಪವೇನು?
ಕೊನೆಯ ಕ್ಷಣದಲ್ಲಿ ಬೆದರಿಕೆ: “ಸಂಜೆ 5 ಗಂಟೆಯೊಳಗೆ ಪ್ರತಿಭಟನಾ ಚಿತ್ರಗಳನ್ನು ತೆಗೆಯದಿದ್ದರೆ ಇಡೀ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಮಧ್ಯಾಹ್ನ 3.30ಕ್ಕೆ ಆಡಳಿತ ಎಚ್ಚರಿಕೆ ನೀಡಿತು. ದೇಶದ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಇಂತಹ ಫೋಟೋಗಳನ್ನು ಪ್ರದರ್ಶಿಸಲು ಇದು ಸರಿಯಾದ ಸಮಯವಲ್ಲ ಎಂದು ಸಮರ್ಥಿಸಿಕೊಂಡರು” ಎಂದು ರೈಹಾನ್ ಹೇಳಿದ್ದಾರೆ.
ತ್ರಿವರ್ಣ ಧ್ವಜ ತೆಗೆಯಲು ಸೂಚನೆ: ತ್ರಿವರ್ಣ ಧ್ವಜವನ್ನು ಒಳಗೊಂಡ ಎರಡು ಛಾಯಾಚಿತ್ರಗಳನ್ನು ತೆಗೆಯುವಂತೆ ಕೇಳಿದರು. ಆದರೆ ಭಾರತೀಯ ಧ್ವಜದ ಚಿತ್ರವನ್ನು ತೆಗೆದುಹಾಕಲು ನಾನು ಖಡಾಖಂಡಿತವಾಗಿ ನಿರಾಕರಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕಲೆಯ ಕರ್ತವ್ಯ: ಈ ಚಿತ್ರಗಳು ಯಾವುದೇ ರಾಜಕೀಯ ಸಂದೇಶ ಹೊಂದಿಲ್ಲ, ಸಮಾಜದಲ್ಲಿ ನಡೆಯುವುದನ್ನು ದಾಖಲಿಸುವುದು ಕಲಾವಿದನಾಗಿ ನನ್ನ ಕರ್ತವ್ಯ. ಪ್ರದರ್ಶನದ ಸಂಪೂರ್ಣ ವಿನ್ಯಾಸವನ್ನು ಮೊದಲೇ ನೀಡಿದ್ದರೂ ಕೊನೆ ಕ್ಷಣದಲ್ಲಿ ಶೇ.50 ಕಲಾಕೃತಿಗಳನ್ನು ಸೆನ್ಸಾರ್ ಮಾಡಲಾಗಿದೆ. ಮುಂದೆ ಸೂಕ್ತ ಸ್ಥಳ ಸಿಕ್ಕಾಗ ಇಡೀ ಸಂಗ್ರಹವನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:
ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಆಕ್ರೋಶ
ಪ್ರಿಯಾಂಕಾ ಗಾಂಧಿ ವಾಗ್ದಾಳಿ: ಇದು ಅತ್ಯಂತ ಹಾಸ್ಯಾಸ್ಪದ. ದೇಶಾದ್ಯಂತ ಯುವಕರ ಧ್ವನಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆಯೋ ಹಾಗೆಯೇ ಇಲ್ಲಿ ಒಬ್ಬ ಯುವ ಕಲಾವಿದನ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆ ಚಿತ್ರಗಳಲ್ಲಿ ಯಾರ ವಿರುದ್ಧವೂ ಅವಹೇಳನಕಾರಿ ಅಂಶಗಳಿರಲಿಲ್ಲ, ಕೇವಲ ನೈಜ ದೃಶ್ಯಗಳಿದ್ದವು. ಇದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂಬುದನ್ನು ತೋರಿಸುತ್ತದೆ. ಇಂದು ನನ್ನ ಮಗನಿಗೆ ಹೀಗಾಗಿದೆ, ನಾಳೆ ಬೇರೊಬ್ಬ ಕಲಾವಿದನಿಗೂ ಇದು ಸಂಭವಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪವನ್ ಖೇರಾ ಕಿಡಿ: ಎಐಸಿಸಿ ಮುಖಂಡ ಪವನ್ ಖೇರಾ ಮಾತನಾಡಿ, ತ್ರಿವರ್ಣ ಧ್ವಜ ಕೂಡ ಸೆನ್ಸಾರ್ ಕತ್ತರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ, ಸಮಸ್ಯೆ ಇರುವುದು ಕಲೆಯಲ್ಲಲ್ಲ, ಅಧಿಕಾರದಲ್ಲಿರುವವರ ಮನಸ್ಥಿತಿಯಲ್ಲಿ. ಕೇಂದ್ರ ಸರ್ಕಾರವು ಸ್ವತಂತ್ರ ಆಲೋಚನೆಗಳು ಮತ್ತು ಪ್ರತಿಭಟನೆಗಳಿಗೆ ಎಷ್ಟು ಹೆದರುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
