Hashtagintro

ಪ್ಲಂಬರ್ ವಿಮಾನ ಲ್ಯಾಂಡ್ ಮಾಡಿದ್ರಾ?: ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಚ್ಚರಿಯ ಹೇಳಿಕೆ

ಪ್ಲಂಬರ್ ವಿಮಾನ ಲ್ಯಾಂಡ್ ಮಾಡಿದ್ರಾ?: ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಚ್ಚರಿಯ ಹೇಳಿಕೆ

ಅಬುಧಾಬಿ, ಅಕ್ಟೋಬರ್ 19: ಫ್ಲೈದುಬೈ ವಿಮಾನದಲ್ಲಿ 172 ಪ್ರಯಾಣಿಕರನ್ನು ಕೊಲ್ಲುವ ದುರುದ್ದೇಶದಿಂದ ಕೋ-ಪೈಲಟ್ ನಡೆಸಿದ ಭೀಕರ ಭಯೋತ್ಪಾದನಾ ದಾಳಿಯ ವೇಳೆ ಜೀವನ್ಮರಣ ಹೋರಾಟ ನಡೆಸಿ ಪಾರಾದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಘಟನೆಯ ಸುತ್ತ ಸೃಷ್ಟಿಯಾಗಿದ್ದ ‘ಇಸ್ರೇಲಿ ಪ್ಲಂಬರ್‌ನ ಹೀರೋಯಿಸಂ’ ಕಥೆಯ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಅಬುಧಾಬಿಯ ಆಸ್ಪತ್ರೆಯಿಂದ ‘ದಿ ನ್ಯಾಷನಲ್’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇಸ್ರೇಲಿ ಪ್ಲಂಬರ್ ಯಾನೀವ್ ಹಯೂನ್ ಕಾಕ್‌ಪಿಟ್‌ಗೆ ನುಗ್ಗಿ ವಿಮಾನವನ್ನು ರಕ್ಷಿಸಿ ಲ್ಯಾಂಡ್ ಮಾಡಿದರು ಎಂಬ ಹೇಳಿಕೆಗಳ ಕುರಿತು ನೇರ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಮಾನದಲ್ಲಿದ್ದ ಇಸ್ರೇಲಿ ಪ್ಲಂಬರ್ ಯಾನೀವ್ ಹಯೂನ್, ತಾನು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರ ಸಹ-ಪೈಲಟ್‌ನನ್ನು ಹೊಡೆದುರುಳಿಸಿದೆ ಹಾಗೂ ತಾನು ಟಿವಿಯಲ್ಲಿ ‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ಡಾಕ್ಯುಮೆಂಟರಿ ನೋಡಿ ಕಲಿತ ಅನುಭವದಿಂದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಲ್ಯಾಂಡ್ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಳಿ ಹೇಳಿಕೊಂಡಿದ್ದ.

ಕ್ಯಾಪ್ಟನ್ ಸ್ಮಿತ್ ಪ್ರತಿಕ್ರಿಯೆ
ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ಸ್ಮಿತ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆ ಪ್ಲಂಬರ್‌ನ ಕಥೆಯ ಬಗ್ಗೆ ನನಗೆ ತಿಳಿದೇ ಇಲ್ಲ. ಒಬ್ಬ ಪ್ಲಂಬರ್ ಕೇವಲ ಟಿವಿ ನೋಡಿ ಬೃಹತ್ ಪ್ಯಾಸೆಂಜರ್ ವಿಮಾನವನ್ನು ಇಳಿಸಲು ಸಾಧ್ಯವೇ? ಆ ಸಮಯದಲ್ಲಿ ನನ್ನ ಸಂಪೂರ್ಣ ಗಮನ ಜೀವಂತವಾಗಿ ಉಳಿಯುವುದರ ಮೇಲಿತ್ತೇ ಹೊರತು ಇಂತಹ ಕಾಲ್ಪನಿಕ ಕಥೆಗಳ ಮೇಲಲ್ಲ” ಎಂದು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಪೈಲಟ್ ಸ್ಮಿತ್​ ಮೇಲೆ ಸಹ ಪೈಲಟ್ ಯಾವ ಆಯುಧದಿಂದ ಹಲ್ಲೆ ನಡೆಸಿದ್ದು ಗೊತ್ತೇ? ಇಲ್ಲಿದೆ ಮಾಹಿತಿ

ಕೊಡಲಿಯಿಂದ ದಿಢೀರ್ ದಾಳಿ:
ದುಬೈನಿಂದ ಟೆಲ್ ಅವೀವ್‌ಗೆ ಹಾರುತ್ತಿದ್ದ ವಿಮಾನದಲ್ಲಿ ಒಮಾನಿ ಸಹ-ಪೈಲಟ್ ಹಮದ್ ಅಲ್-ಹಮ್ಮಾಮಿ ಮೊದಲ ಎರಡು ಗಂಟೆ ಯಾವುದೇ ಅನುಮಾನ ಬಾರದಂತೆ ಸಮಾಧಾನವಾಗಿಯೇ ಕುಳಿತಿದ್ದ. ಆದರೆ ದಿಢೀರನೆ ಕ್ರ್ಯಾಶ್ ಕೊಡಲಿಯಿಂದ (Crash Axe) ಕ್ಯಾಪ್ಟನ್ ಸ್ಮಿತ್ ತಲೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ.

ತಲೆಗೆ ಬಿದ್ದ ಭಾರೀ ಹೊಡೆತಗಳಿಂದ ದೃಷ್ಟಿ ಕಳೆದುಕೊಳ್ಳುತ್ತಿದ್ದರೂ, ಸ್ಮಿತ್ ಸೀಟ್‌ಬೆಲ್ಟ್ ಬಿಚ್ಚಿ ಕಾಕ್‌ಪಿಟ್ ಎಮರ್ಜೆನ್ಸಿ ಬಾಗಿಲು ತೆರೆಯುವ ಸ್ವಿಚ್ ಒತ್ತಿ ಹೊರಗಿದ್ದ ಸಿಬ್ಬಂದಿಗೆ ಕೂಗಿ ಕರೆದಿದ್ದಾರೆ. ಪ್ರಜ್ಞೆ ತಪ್ಪುವ ಮುನ್ನ ಸಹೋದ್ಯೋಗಿಗಳಿಗಾಗಿ ಕಿರುಚಾಡಿ ಕಾಕ್‌ಪಿಟ್ ನೆಲದ ಮೇಲೆ ಬಿದ್ದರು.

ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡದ್ದು ಯಾರು?:
ಕ್ಯಾಪ್ಟನ್ ಸ್ಮಿತ್ ಪ್ರಕಾರ, ಗಲಾಟೆಯ ಸದ್ದು ಕೇಳಿ ಒಳನುಗ್ಗಿದ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ದಾಳಿಕೋರನನ್ನು ಹಿಡಿದು ನಿಯಂತ್ರಿಸಿದರು. ನಂತರ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಡ್ಯೂಟಿಯಲ್ಲೇ ಇಲ್ಲದ (Off-duty) ಇನ್ನೊಬ್ಬ ಅನುಭವಿ ಫ್ಲೈದುಬೈ ಪೈಲಟ್ ವಿಮಾನದ ನಿಯಂತ್ರಣವನ್ನು ಕೈಗೆತ್ತಿಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ಆರೋಗ್ಯದಲ್ಲಿ ಚೇತರಿಕೆ: ತಲೆಗೆ ಗಂಭೀರ ಪೆಟ್ಟಾಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಸೌದಿಯಲ್ಲಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಅಬುಧಾಬಿಯ ಮಿಲಿಟರಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಸ್ಮಿತ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಗಣನೀಯವಾಗಿ ಚೇತರಿಸಿಕೊಳ್ಳುತ್ತಿದೆ.

ಭಯೋತ್ಪಾದನಾ ಸಂಚಿನ ತನಿಖೆ: ಯುಎಇ ಪ್ರಾಸಿಕ್ಯೂಟರ್‌ಗಳು ಇದನ್ನು “ಪೂರ್ವಯೋಜಿತ ಭಯೋತ್ಪಾದಕ ಪಿತೂರಿ” ಎಂದು ಅಧಿಕೃತವಾಗಿ ಪರಿಗಣಿಸಿದ್ದಾರೆ. ಬಂಧಿತ ಒಮಾನಿ ಸಹ-ಪೈಲಟ್ ವಿಮಾನವನ್ನು ಇಸ್ರೇಲ್‌ನ ಬೆನ್ ಗುರಿಯನ್ ಏರ್‌ಪೋರ್ಟ್‌ಗೆ ಅಪ್ಪಳಿಸಿ 9/11 ಮಾದರಿಯ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada World

Read full article on TV9 Kannada World

Leave a Comment

Your email address will not be published. Required fields are marked *

समाचार की भाषा चुनें / Choose News Language