Hashtagintro

ಫ್ರಿಜ್‌ನಲ್ಲಿಟ್ಟ ಅನ್ನವನ್ನು ಮತ್ತೆ ಬಿಸಿ ಮಾಡಿ ತಿನ್ನಬಹುದೇ? ಆಹಾರ ಸುರಕ್ಷತೆಯ ಈ ನಿಯಮಗಳನ್ನು ತಿಳಿಯಿರಿ

ಫ್ರಿಜ್‌ನಲ್ಲಿಟ್ಟ ಅನ್ನವನ್ನು ಮತ್ತೆ ಬಿಸಿ ಮಾಡಿ ತಿನ್ನಬಹುದೇ? ಆಹಾರ ಸುರಕ್ಷತೆಯ ಈ ನಿಯಮಗಳನ್ನು ತಿಳಿಯಿರಿ

ಮನೆಯಲ್ಲಿ ಅನ್ನ ಉಳಿದಾಗ ಅದನ್ನು ಎಸೆಯುವ ಬದಲು ಫ್ರಿಜ್‌ನಲ್ಲಿ (Fridge) ಇಟ್ಟು ಮರುದಿನ ಬಿಸಿ ಮಾಡಿ ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ ಅನ್ನವನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಆಹಾರದಿಂದ ಹರಡುವ ಕಾಯಿಲೆಗೆ ಕಾರಣವಾಗಬಹುದು. ಅನ್ನವನ್ನು ಮತ್ತೆ ಬಿಸಿ ಮಾಡುವುದಷ್ಟೇ ಸುರಕ್ಷತೆಗೆ ಸಾಕಾಗುವುದಿಲ್ಲ, ಬೇಯಿಸಿದ ಅನ್ನವನ್ನು ಎಷ್ಟು ಬೇಗ ತಣ್ಣಗಾಗಿಸಿ ಫ್ರಿಜ್‌ನಲ್ಲಿ ಇಡುತ್ತೀರಿ ಎಂಬುದೂ ಅಷ್ಟೇ ಮುಖ್ಯ.

ಅನ್ನದಲ್ಲಿ Bacillus cereus ಎಂಬ ಬ್ಯಾಕ್ಟೀರಿಯದ ಬೀಜಕಗಳು ಇರುತ್ತದೆ. ಅಕ್ಕಿಯನ್ನು ಬೇಯಿಸಿದರೂ ಇವುಗಳಲ್ಲಿ ಕೆಲವು ಉಳಿಯಬಹುದು. ಬೇಯಿಸಿದ ಅನ್ನವನ್ನು ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲ ಬಿಟ್ಟರೆ ಬ್ಯಾಕ್ಟೀರಿಯಾ ಬೆಳೆಯಬಹುದು ಮತ್ತು ಆಹಾರ ವಿಷಕಾರಕವಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ವಿಷವನ್ನು ಮತ್ತೆ ಬಿಸಿ ಮಾಡುವುದರಿಂದಲೂ ಸಂಪೂರ್ಣವಾಗಿ ನಾಶಪಡಿಸಲಾಗುವುದಿಲ್ಲ.

ಅನ್ನವನ್ನು ಫ್ರಿಜ್‌ನಲ್ಲಿ ಸುರಕ್ಷಿತವಾಗಿ ಇಡುವುದು ಹೇಗೆ?

ಬೇಯಿಸಿದ ಅನ್ನವನ್ನು ದೊಡ್ಡ ಪಾತ್ರೆಯಲ್ಲೇ ಮುಚ್ಚಿಟ್ಟು ಬಹಳ ಹೊತ್ತು ಹೊರಗಿಡುವ ಬದಲು, ಅದನ್ನು ಸಣ್ಣ ಪ್ರಮಾಣಗಳಾಗಿ ವಿಂಗಡಿಸಿ ಅಗಲವಾದ, ಸ್ವಚ್ಛವಾದ ಪಾತ್ರೆಗಳಲ್ಲಿ ಹಾಕಬೇಕು. ಇದರಿಂದ ಅನ್ನ ಬೇಗ ತಣ್ಣಗಾಗುತ್ತದೆ. ಸಾಧ್ಯವಾದಷ್ಟು ಬೇಗ, ಬೇಯಿಸಿದ ಒಂದು ಗಂಟೆಯೊಳಗೆ ಅನ್ನವನ್ನು ಫ್ರಿಜ್‌ನಲ್ಲಿ ಇಡುವುದು ಉತ್ತಮ ಎಂದು ಬ್ರಿಟನ್‌ನ ಆಹಾರ ಸುರಕ್ಷತಾ ಸಂಸ್ಥೆ ಸಲಹೆ ನೀಡಿದೆ.

ಅನ್ನವನ್ನು ಫ್ರಿಜ್‌ನಲ್ಲಿ ಇಟ್ಟಿದ್ದರೂ ದೀರ್ಘಕಾಲ ಸಂಗ್ರಹಿಸಬಾರದು. ಸುರಕ್ಷತೆಯ ದೃಷ್ಟಿಯಿಂದ ಅದನ್ನು 24 ಗಂಟೆಯೊಳಗೆ ಬಳಸುವುದು ಉತ್ತಮ. ಫ್ರಿಜ್‌ನ ತಾಪಮಾನವೂ ಸರಿಯಾಗಿರಬೇಕು. ಅನ್ನವನ್ನು ಮತ್ತೆ ಬಳಸುವ ಉದ್ದೇಶವಿಲ್ಲದಿದ್ದರೆ, ಸೂಕ್ತವಾಗಿ ತಣ್ಣಗಾಗಿಸಿ ಫ್ರೀಜರ್‌ನಲ್ಲಿ ಸಂಗ್ರಹಿಸುವುದು ಮತ್ತೊಂದು ಆಯ್ಕೆ.

ಅನ್ನವನ್ನು ಮತ್ತೆ ಬಿಸಿ ಮಾಡುವಾಗ ಈ ತಪ್ಪು ಮಾಡಬೇಡಿ

ಫ್ರಿಜ್‌ನಿಂದ ತೆಗೆದ ಅನ್ನವನ್ನು ಕೇವಲ ಉಗುರುಬೆಚ್ಚಗೆ ಮಾಡಿದರೆ ಸಾಲದು. ಅನ್ನದ ಪ್ರತಿಯೊಂದು ಭಾಗವೂ ಚೆನ್ನಾಗಿ ಬಿಸಿಯಾಗುವವರೆಗೆ ಕಾಯಬೇಕು. ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವಾಗ ಮಧ್ಯೆ ಒಮ್ಮೆ ಅನ್ನವನ್ನು ಕಲಕಬೇಕು. ಏಕೆಂದರೆ ಮೈಕ್ರೋವೇವ್‌ನಲ್ಲಿ ಕೆಲವು ಭಾಗಗಳು ಬಿಸಿಯಾಗಿದ್ದರೂ ಒಳಗಿನ ಭಾಗ ತಣ್ಣಗೇ ಉಳಿಯುವ ಸಾಧ್ಯತೆ ಇದೆ.

ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ಕ್ರಮ ಯಾವುದು ಗೊತ್ತೇ?

ಅನ್ನವನ್ನು ಒಂದಕ್ಕಿಂತ ಹೆಚ್ಚು ಬಾರಿ ಮತ್ತೆ ಬಿಸಿ ಮಾಡಬಾರದು. ತಿನ್ನಲು ಬೇಕಾದಷ್ಟು ಅನ್ನವನ್ನು ಮಾತ್ರ ತೆಗೆದು ಬಿಸಿ ಮಾಡುವುದು ಉತ್ತಮ. ಈಗಾಗಲೇ ಬಿಸಿ ಮಾಡಿದ ಅನ್ನವನ್ನು ಉಳಿದ ಅನ್ನದೊಂದಿಗೆ ಮತ್ತೆ ಬೆರೆಸಿ ಸಂಗ್ರಹಿಸುವುದನ್ನೂ ತಪ್ಪಿಸಬೇಕು.

ವಾಸನೆ ಚೆನ್ನಾಗಿದ್ದರೆ ಅನ್ನ ಸುರಕ್ಷಿತ ಎಂದರ್ಥವೇ?

ಇಲ್ಲ. ಅನ್ನ ಕೆಟ್ಟ ವಾಸನೆ ಬೀರದಿದ್ದರೂ ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಅಥವಾ ಅವು ಉತ್ಪಾದಿಸಿದ ವಿಷಕಾರಿ ಅಂಶಗಳು ಇರಬಹುದು. ಆದ್ದರಿಂದ ವಾಸನೆ, ಬಣ್ಣ ಅಥವಾ ರುಚಿಯನ್ನು ಮಾತ್ರ ಆಧರಿಸಿ ಅನ್ನ ಸುರಕ್ಷಿತವೆಂದು ನಿರ್ಧರಿಸಬಾರದು. ಬೇಯಿಸಿದ ಅನ್ನವನ್ನು ದೀರ್ಘಕಾಲ ಕೋಣೆಯ ಉಷ್ಣಾಂಶದಲ್ಲಿ ಬಿಟ್ಟಿದ್ದರೆ, ಅದನ್ನು ಮತ್ತೆ ಬಿಸಿ ಮಾಡಿ ತಿನ್ನುವುದು ಸುರಕ್ಷಿತವಲ್ಲ. ವಿಶೇಷವಾಗಿ ಬಿಸಿಯಾದ ವಾತಾವರಣದಲ್ಲಿ ಅನ್ನವನ್ನು ಹೊರಗಿಡುವ ಅವಧಿಯನ್ನು ಕಡಿಮೆ ಮಾಡಬೇಕು.

ಹಾಗಾದರೆ ಫ್ರಿಜ್‌ನಲ್ಲಿಟ್ಟ ಅನ್ನ ತಿನ್ನಬಹುದೇ?

ಖಂಡಿತವಾಗಿಯೂ ತಿನ್ನಬಹುದು. ಆದರೆ ಅನ್ನವನ್ನು ಬೇಯಿಸಿದ ಬಳಿಕ ತ್ವರಿತವಾಗಿ ತಣ್ಣಗಾಗಿಸಿ ಫ್ರಿಜ್‌ನಲ್ಲಿ ಇಡುವುದು, 24 ಗಂಟೆಯೊಳಗೆ ಬಳಸುವುದು ಮತ್ತು ಮತ್ತೆ ಬಿಸಿ ಮಾಡುವಾಗ ಸಂಪೂರ್ಣವಾಗಿ ಹಬೆಯಾಡುವಷ್ಟು ಬಿಸಿ ಮಾಡುವುದು ಮುಖ್ಯ. ಅನ್ನವನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಮತ್ತೆ ಬಿಸಿ ಮಾಡುವುದರಿಂದಲೂ ಅದು ಸುರಕ್ಷಿತವಾಗುತ್ತದೆ ಎಂಬ ಖಾತರಿ ಇಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language