
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಶೋ ಆರಂಭವಾಗಿ ಈಗಾಗಲೇ 80ಕ್ಕೂ ಹೆಚ್ಚು ದಿನಗಳು ಕಳೆದಿದ್ದು, ಫಿನಾಲೆಗೆ ಕೆಲವೇ ವಾರಗಳು ಬಾಕಿ ಇವೆ. ಇಂತಹ ನಿರ್ಣಾಯಕ ಹಂತದಲ್ಲಿ ಸಿಗುವ ಸಣ್ಣ ಮೈಲೇಜ್ ಕೂಡ ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತದೆ. ಇದೀಗ ಅಂತಹದ್ದೇ ಒಂದು ಸುವರ್ಣಾವಕಾಶ ಯಶಸ್ ಪಾಲಿಗೆ ಒದಗಿಬಂದಿದೆ.
ಆರಂಭದ ದಿನಗಳಲ್ಲಿ ಯಶಸ್ ಮನೆಯೊಳಗೆ ತುಂಬಾನೇ ಡಲ್ ಆಗಿ ಕಾಣಿಸಿಕೊಂಡಿದ್ದರು. ಕೇವಲ ಹುಡುಗಿಯರ ಜೊತೆಗಷ್ಟೇ ಬೆರೆಯುತ್ತಾ, ಆಟದಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದರಿಂದ ಅವರು ಒಂದು ತಿಂಗಳೊಳಗೆ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಮಾತು ಕೇಳಿ ಬಂತು. ಆದರೆ ದಿನ ಕಳೆದಂತೆ ಮನೆಯ ವಾತಾವರಣದ ಜೊತೆಗೆ ಯಶಸ್ ಆಟವೂ ಬದಲಾಯಿತು.
ಮಂಜು ಜಗಳದ ಬಳಿಕ ಬದಲಾದ ಆಟ
ಮನೆಯೊಳಗೆ ಮಂಜು ಮತ್ತು ಯಶಸ್ ನಡುವೆ ನಡೆದ ಜಗಳ ಎಲ್ಲವನ್ನೂ ಬದಲಿಸಿಬಿಟ್ಟಿತು. ಆ ಜಗಳದಲ್ಲಿ ಮಂಜು ಕೆಟ್ಟ ಶಬ್ದಗಳಿಂದ ಯಶಸ್ ಹಾಗೂ ಅವರ ಕುಟುಂಬವನ್ನು ನಿಂದಿಸಿದ್ದರು. ಆದರೆ, ಇದಕ್ಕೆ ಯಶಸ್ ಒಂದೇ ಒಂದು ಮಾತು ಕೂಡ ತಿರುಗಿ ಕೆಟ್ಟ ಪದ ಬಳಕೆ ಮಾಡಿರಲಿಲ್ಲ. ಇದರಿಂದ ಅವರು ಪ್ರಶಂಸೆ ಪಡೆದರು. ಈ ಘಟನೆಯ ಬಳಿಕ ಯಶಸ್ ಆಟದ ವೈಖರಿಯೇ ಸಂಪೂರ್ಣ ಬದಲಾಯಿತು. ಅಲ್ಲಿಂದ ನಿಧಾನವಾಗಿ ಏರುಗತಿಯಲ್ಲಿ ಸಾಗಿದ ಯಶಸ್, ಕಳೆದ ಎರಡು ವಾರಗಳಿಂದ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಟವಾಡುತ್ತಾ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಗುಳ್ಳೆನರಿ ಟಾಸ್ಕ್ನಲ್ಲಿ ಭರ್ಜರಿ ಪ್ರದರ್ಶನ
ಈ ವಾರ ಬಿಗ್ ಬಾಸ್ ನೀಡಿದ್ದ ‘ಗುಳ್ಳೆನರಿ’ ಟಾಸ್ಕ್ನಲ್ಲಿ ಯಶಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಗುಳ್ಳೆನರಿಯಾಗಿ ಯಾರಿಗೂ ಅನುಮಾನ ಬಾರದಂತೆ, ಯಾರ ಕೈಗೂ ಸಿಕ್ಕಿಬೀಳದಂತೆ ಚಾಣಾಕ್ಷತನದಿಂದ ಆಟವಾಡಿದ್ದಾರೆ. ಮನೆಯವರೆಲ್ಲರೂ ಸುತ್ತಮುತ್ತ ಇದ್ದರೂ, ಯಾರಿಗೂ ತಿಳಿಯದಂತೆ ಬಿಗ್ ಬಾಸ್ ಕೊಟ್ಟ ರಹಸ್ಯ ಟಾಸ್ಕ್ ಅನ್ನು ಯಶಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ಗಗನ್ 8 ವರ್ಷಗಳ ಹಿಂದಿನ ನೋವಿನ ಸೀಕ್ರೆಟ್ ಬಯಲು; ಬಿಗ್ ಬಾಸ್ನಲ್ಲಿ ದೊಡ್ಡ ಸತ್ಯ ರಿವೀಲ್
ಬಿಗ್ ಬಾಸ್ ಕಡೆಯಿಂದಲೂ ಮೆಚ್ಚುಗೆ
ಯಶಸ್ ಅವರ ಈ ಚತುರ ಆಟಕ್ಕೆ ಸ್ವತಃ ಬಿಗ್ ಬಾಸ್ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ‘ಈ ವಾರ ಅತ್ಯುತ್ತಮವಾಗಿ ಆಡಿದ್ದೀರಿ’ ಎಂದು ಬಿಗ್ ಬಾಸ್ ಬಹಿರಂಗವಾಗಿಯೇ ಯಶಸ್ ಅವರನ್ನು ಹೊಗಳಿದ್ದಾರೆ. ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುವ ಸಾಧ್ಯತೆಯೂ ಇದೆ. ಫಿನಾಲೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಯಶಸ್ ಆಡಿದ ಈ ಅದ್ಭುತ ಆಟ ಮತ್ತು ಸಿಕ್ಕಿರುವ ಈ ಮೆಚ್ಚುಗೆ, ಟಾಪ್ ಐದರ ಹಂತಕ್ಕೆ ಸಾಗಲು ಅವರಿಗೆ ಸಾಕಷ್ಟು ಸಹಕಾರಿಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
