Hashtagintro

ಬೆಂಗಳೂರೇ ನಂ. 2: ಮುಂಬೈ ಹಿಂದಿಕ್ಕಿ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ನಮ್ಮ ಮೆಟ್ರೋ

ಬೆಂಗಳೂರೇ ನಂ. 2: ಮುಂಬೈ ಹಿಂದಿಕ್ಕಿ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ನಮ್ಮ ಮೆಟ್ರೋ

ಬೆಂಗಳೂರು, ನವೆಂಬರ್ 13: ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಇಂದು ಲೋಕಾರ್ಪಣೆಯಾಗುತ್ತಿದ್ದಂತೆಯೇ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ತಲುಪಲಿದೆ. ಒಟ್ಟು 103.6 ಕಿ.ಮೀ. ಜಾಲದೊಂದಿಗೆ ಬೆಂಗಳೂರು ನಗರವು ಮುಂಬೈಯನ್ನು ಹಿಂದಿಕ್ಕಿ ದೆಹಲಿಯ ನಂತರದ ಸ್ಥಾನಕ್ಕೇರಲಿದೆ. ಅಂದರೆ, ಎರಡನೇ ಸ್ಥಾನ ಪಡೆಯಲಿದೆ.

ದೇಶದ ಮೆಟ್ರೋ ಜಾಲಗಳ ಹೋಲಿಕೆ

ದೆಹಲಿ ಮೆಟ್ರೋ 374.5 ಕಿ.ಮೀ. ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಮುಂಬೈನಲ್ಲಿ 102 ಕಿ.ಮೀ. (ಮುಂಬೈ 91 ಕಿ.ಮೀ., ನವಿ ಮುಂಬೈ 11.1 ಕಿ.ಮೀ.) ಮೆಟ್ರೋ ಮಾರ್ಗವಿದೆ. ನಂತರದ ಸ್ಥಾನಗಳಲ್ಲಿ ಕೋಲ್ಕತ್ತಾ (73–74 ಕಿ.ಮೀ.), ಹೈದರಾಬಾದ್ (69), ಚೆನ್ನೈ (68.7), ಅಹಮದಾಬಾದ್–ಗಾಂಧಿನಗರ (65), ನಾಗ್ಪುರ (38.2) ಮತ್ತು ಪುಣೆ (33 ಕಿ.ಮೀ.) ಇವೆ. ನಮ್ಮ ಮೆಟ್ರೋಗಿಂತ ಮೊದಲೇ ಆರಂಭವಾದ ಹಲವು ನಗರಗಳನ್ನು ಬೆಂಗಳೂರು ಮೀರಿಸಿದ್ದು, ಅತಿ ವೇಗವಾಗಿ ಬೆಳೆದ ಮೆಟ್ರೋ ಎಂಬ ಖ್ಯಾತಿಯೂ ಇದರದ್ದಾಗಿದೆ.

ಪಿಂಕ್ ಲೈನ್ ಟಿಕೆಟ್ ದರ

ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ ಮಾರ್ಗದಲ್ಲಿ ಆರು ನಿಲ್ದಾಣಗಳಿದ್ದು, ₹3,470 ಕೋಟಿ ವೆಚ್ಚವಾಗಿದೆ. ನವೆಂಬರ್ 14ರ ಬೆಳಗ್ಗೆ 6ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಐದು ರೈಲುಗಳು ಸುಮಾರು 8 ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ ₹30, ಹುಳಿಮಾವು ಅಥವಾ ಐಐಎಂಬಿ (ಬಿಳೇಕಹಳ್ಳಿ)ವರೆಗೆ ₹20, ಎನ್.ಎಸ್. ಪಾಳ್ಯ–ಜೆ.ಪಿ. ನಗರ 4ನೇ ಹಂತದವರೆಗೆ ₹10 ದರ ನಿಗದಿಯಾಗಿದೆ.

ಪಿಂಕ್ ಲೈನ್‌ನ ವಿಶೇಷಗಳೇನು?

ಒಟ್ಟು 21.26 ಕಿ.ಮೀ. ಉದ್ದದ ಪಿಂಕ್ ಲೈನ್‌ನಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 18 ನಿಲ್ದಾಣಗಳಿರಲಿದ್ದು, 12 ಅಂಡರ್​ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳಾಗಿವೆ. ಅಂಡರ್​ಗ್ರೌಂಡ್ ಭಾಗ ಇನ್ನೂ ನಿರ್ಮಾಣ ಹಂತದಲ್ಲಿದೆ. ಎಲಿವೇಟೆಡ್ ಮಾರ್ಗ ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗಲಿದೆ. ಬಿಇಎಂಎಲ್ ನಿರ್ಮಿತ ಆರು ಬೋಗಿಗಳ ರೈಲುಗಳು ಚಾಲಕರಹಿತ ಸಂಚಾರ ತಂತ್ರಜ್ಞಾನ ಹೊಂದಿದ್ದು, ಗರಿಷ್ಠ 90 ಕಿ.ಮೀ. ವೇಗ ಹಾಗೂ 2,008 ಪ್ರಯಾಣಿಕರ ಸಾಮರ್ಥ್ಯ ಹೊಂದಿವೆ. ಎಲಿವೇಟೆಡ್ ಮಾರ್ಗದ ಆರೂ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ, ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗದೊಂದಿಗೆ ಸಂಪರ್ಕ ಸಿಗಲಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಇಂದು ಪ್ರಧಾನಿ ಮೋದಿ ಚಾಲನೆ: 100 ಕಿಮೀ ಗಡಿ ದಾಟಲಿದೆ ಬೆಂಗಳೂರಿನ ಮೆಟ್ರೋ ಜಾಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language