Hashtagintro

ಮರಸೇಬು ಹಣ್ಣಿನ ಆರೋಗ್ಯಕರ ಗುಣಗಳು: ಜ್ಯೂಸ್ ಕುಡಿಯುವ ಮುನ್ನ ಈ ವಿಷಯ ತಿಳಿಯಿರಿ

ಮರಸೇಬು ಹಣ್ಣಿನ ಆರೋಗ್ಯಕರ ಗುಣಗಳು: ಜ್ಯೂಸ್ ಕುಡಿಯುವ ಮುನ್ನ ಈ ವಿಷಯ ತಿಳಿಯಿರಿ

ಪಿಯರ್ ಫ್ರೂಟ್ ಅಥವಾ ಮರಸೇಬು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳಲ್ಲಿ ಒಂದಾಗಿದೆ. ಸಿಹಿಯಾದ ರುಚಿ ಮತ್ತು ರಸಭರಿತ ಗುಣವನ್ನು ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಂ, ಫೋಲೇಟ್ ಹಾಗೂ ವಿವಿಧ ಸಸ್ಯಜನ್ಯ ಉತ್ಕರ್ಷಣ ನಿರೋಧಕ ಸಂಯುಕ್ತಗಳು ಇರುತ್ತವೆ. ಪಿಯರ್ ಅಥವಾ ಮರಸೇಬು ಹಣ್ಣನ್ನು ನೇರವಾಗಿ ಸೇವಿಸುವುದರ ಜೊತೆಗೆ ಜ್ಯೂಸ್ ರೂಪದಲ್ಲಿಯೂ ಕುಡಿಯಬಹುದು. ಆದರೆ, ಪಿಯರ್ ಜ್ಯೂಸ್‌ನ ಪ್ರಯೋಜನಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಅದನ್ನ ಸರಿಯಾದ ಪ್ರಮಾಣದಲ್ಲಿ ಸೇವಿಸುವುದೂ ಕೂಡ ಬಹಳ ಮುಖ್ಯವಾಗುತ್ತದೆ.

ಜೀರ್ಣಕ್ರಿಯೆಗೆ ಪಿಯರ್ ಹಣ್ಣು ಸಹಕಾರಿ

ಪಿಯರ್ ಹಣ್ಣಿನಲ್ಲಿ ಆಹಾರದ ನಾರಿನಾಂಶವಿದ್ದು, ಇದು ಕರುಳಿನ ಆರೋಗ್ಯವನ್ನು ಕಾಪಾಡಲು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಆದರೆ, ಜ್ಯೂಸ್ ತಯಾರಿಸುವಾಗ ತಿರುಳನ್ನು ತೆಗೆದುಹಾಕಿದರೆ ನಾರಿನಾಂಶ ಗಣನೀಯವಾಗಿ ಕಡಿಮೆಯಾಗಬಹುದು. ಹೀಗಾಗಿ ಜೀರ್ಣಕ್ರಿಯೆಯ ಉತ್ತಮ ನಿರ್ವಹಣೆಗಾಗಿಗೆ ಜ್ಯೂಸ್‌ಗಿಂತ ಇಡೀ ಹಣ್ಣನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಪಿಯರ್ ಹಣ್ಣಿನಲ್ಲಿರುವ ಪೊಟ್ಯಾಸಿಯಂ ದೇಹದಲ್ಲಿ ದ್ರವಗಳ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ. ಸಮತೋಲಿತ ಆಹಾರದ ಭಾಗವಾಗಿ ಪೊಟ್ಯಾಸಿಯಂಯುಕ್ತ ಹಣ್ಣುಗಳನ್ನು ಸೇವಿಸುವುದು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗಬಹುದು. ಹಣ್ಣಿನಲ್ಲಿರುವ ನಾರಿನಾಂಶವೂ ಆರೋಗ್ಯಕರ ಆಹಾರ ಪದ್ಧತಿಯ ಮೂಲಕ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಆದರೆ ಪಿಯರ್ ಜ್ಯೂಸ್ ಮಾತ್ರದಿಂದ ಹೃದಯದ ಕಾಯಿಲೆಗಳನ್ನು ತಡೆಯಲು ಸಾಧ್ಯವಿಲ್ಲ.

ಇದನ್ನೂ ಓದಿ: ರೋಗ ನಿರೋಧಕ ಶಕ್ತಿಯಿಂದ ಹೃದಯದ ಆರೋಗ್ಯದವರೆಗೆ ಅನಾನಸ್ ಹಣ್ಣಿನ ಆರೋಗ್ಯಕರ ಪ್ರಯೋಜನಗಳು

ದೇಹಕ್ಕೆ ಶಕ್ತಿ ಮತ್ತು ಪೋಷಕಾಂಶಗಳು

ಪಿಯರ್ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ವಿಟಮಿನ್ ಸಿ ಸೇರಿದಂತೆ ಕೆಲವು ಪೋಷಕಾಂಶಗಳು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ನೆರವಾಗುತ್ತವೆ. ಆದರೆ, ಪಿಯರ್ ಹಣ್ಣು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅತ್ಯುತ್ತಮ ಮೂಲ ಎಂದು ಪರಿಗಣಿಸುವುದು ಸರಿಯಲ್ಲ. ರಕ್ತಹೀನತೆ ಇರುವವರು ಈ ಜ್ಯೂಸ್‌ನ್ನೇ ಚಿಕಿತ್ಸೆಯಾಗಿ ಅವಲಂಬಿಸಬಾರದು.

ಮಧುಮೇಹ ಇರುವವರು ಗಮನಿಸಬೇಕಾದ ಅಂಶಗಳು

ಪಿಯರ್ ಹಣ್ಣಿನಲ್ಲಿ ನಾರಿನಾಂಶವಿರುವುದರಿಂದ ಇಡೀ ಹಣ್ಣನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ಸಹಕಾರಿಯಾಗಬಹುದು. ಆದರೆ, ಜ್ಯೂಸ್‌ನಲ್ಲಿ ನಾರಿನಾಂಶ ಕಡಿಮೆಯಾಗಿರಬಹುದು ಮತ್ತು ನೈಸರ್ಗಿಕ ಸಕ್ಕರೆ ಅಂಶ ಹೆಚ್ಚು ವೇಗವಾಗಿ ದೇಹಕ್ಕೆ ಲಭ್ಯವಾಗಬಹುದು. ಆದ್ದರಿಂದ ಮಧುಮೇಹ ಇರುವವರು ಸಕ್ಕರೆ ಸೇರಿಸದ ಜ್ಯೂಸ್‌ನ್ನೂ ಮಿತವಾಗಿ ಸೇವಿಸಬೇಕು.

ಹೇಗೆ ಸೇವಿಸಬೇಕು?

ಮರಸೇಬನ್ನು ಚೆನ್ನಾಗಿ ತೊಳೆದು, ಸಾಧ್ಯವಾದರೆ ಸಿಪ್ಪೆಯೊಂದಿಗೆ ಸೇವಿಸಬಹುದು. ಜ್ಯೂಸ್ ತಯಾರಿಸುವಾಗ ಹೆಚ್ಚುವರಿ ಸಕ್ಕರೆ ಸೇರಿಸದಿರುವುದು ಉತ್ತಮ. ತೂಕ ಇಳಿಸುವ ಉದ್ದೇಶವಿದ್ದರೆ ಜ್ಯೂಸ್‌ಗಿಂತ ಹಣ್ಣನ್ನು ಆಯ್ಕೆ ಮಾಡುವುದು ಸೂಕ್ತ. ಒಟ್ಟಿನಲ್ಲಿ, ಪಿಯರ್ ಹಣ್ಣು ಸಮತೋಲಿತ ಆಹಾರದ ಉತ್ತಮ ಭಾಗವಾಗಬಹುದು. ಆದರೆ, ರಕ್ತಹೀನತೆ, ಮಧುಮೇಹ ಅಥವಾ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಇದು ಔಷಧಿಗೆ ಪರ್ಯಾಯವಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language